'''' ಆರ್‌.ಟಿ.ಅರುಣ್‌ಗೆ ನಾಟಕ ಅಕಾಡೆಮಿ ಪ್ರಶಸ್ತಿ

| Published : Jul 25 2025, 12:30 AM IST

'''' ಆರ್‌.ಟಿ.ಅರುಣ್‌ಗೆ ನಾಟಕ ಅಕಾಡೆಮಿ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ನಾಟಕ ಅಕಾಡೆಮಿಯಿಂದ 2025-26ನೇ ಸಾಲಿನ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯು ದಾವಣಗೆರೆಯ ಹಿರಿಯ ರಂಗಕರ್ಮಿ, ಬಹುಮುಖ ಪ್ರತಿಭೆ ಆರ್.ಟಿ.ಅರುಣಕುಮಾರ್‌ಗೆ ಲಭಿಸಿದೆ.

ದಾವಣಗೆರೆ: ಕರ್ನಾಟಕ ನಾಟಕ ಅಕಾಡೆಮಿಯಿಂದ 2025-26ನೇ ಸಾಲಿನ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯು ದಾವಣಗೆರೆಯ ಹಿರಿಯ ರಂಗಕರ್ಮಿ, ಬಹುಮುಖ ಪ್ರತಿಭೆ ಆರ್.ಟಿ.ಅರುಣಕುಮಾರ್‌ಗೆ ಲಭಿಸಿದೆ.

ಮಧ್ಯ ಕರ್ನಾಟಕ, ಸ್ನೇಹಿತರು, ಆತ್ಮೀಯ ಬಳಗದಿಂದ ಫೀನಿಕ್ಸ್ ಅಂತಲೇ ಕರೆಯಲ್ಪಡುವ, ನಿರಂತರ ಸಾವು ಬಂದು ಎದುರಿಗೆ ನಿಂತಾಗಲೂ ಮೃತ್ಯುಂಜಯನಂತೆ ಕ್ಯಾನ್ಸರನ್ನೇ ಗೆದ್ದ ಆತ್ಮವಿಶ್ವಾಸದ ಗಣಿಯೂ ಆಗಿರುವ ಅಜಾತಶತೃ ವ್ಯಕ್ತಿತ್ವದ ಆರ್.ಟಿ.ಅರುಣಕುಮಾರ್‌ಗೆ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿರುವುದಕ್ಕೆ ದಾವಣಗೆರೆ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.

ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದರೂ ಬಾಲ್ಯದಿಂದಲೂ ತಂದೆ, ದೊಡ್ಡಪ್ಪಂದಿರ ಪ್ರಭಾವ, ನಿರಂತರ ರಂಗಭೂಮಿ, ಸಿನಿಮಾದವರು ಮನೆಗೆ ಬಂದು ಹೋಗುತ್ತಿದ್ದುದು, ವಿಶೇಷವಾಗಿ ವರನಟ ಡಾ.ರಾಜಕುಮಾರ ರಂಗಭೂಮಿಯ ತವರು ದಾವಣಗೆರೆಗೆ ನಾಟಕ ಅಭಿನಯಿಸಲು ಬರಬೇಕೆಂದರೆ ಆರ್‌.ಟಿ.ಅರುಣಕುಮಾರ ದೊಡ್ಡಪ್ಪಂದಿರಾದ ಆರ್.ಜಿ.ಶಿವಕುಮಾರ, ಆರ್.ಜಿ.ಗೌರಿಶಂಕರ ಇರಬೇಕಿತ್ತು. ಅಂತಹ ಕುಟುಂಬದ ಆರ್‌.ಟಿ.ಅರುಣ್‌ರಿಗೆ ಕಲೆ ಸಹ ಒಲಿದಿತ್ತು.

ವಿದ್ಯಾರ್ಥಿ ದೆಸೆಯಿಂದಲೇ ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಆರ್‌.ಟಿ.ಅರುಣಕುಮಾರ್‌ ಚಾರ್ಲಿ ಚಾಪ್ಲಿನ್‌ ಪಾತ್ರವನ್ನು ಮಾಡಿದರೆ ಜನರು ತದೇಕಚಿತ್ತದಿಂದ ನೋಡುತ್ತಿದ್ದರು. ಸಿನಿಮಾದವರು, ರಂಗಭೂಮಿ, ಲೇಖಕರು, ಸಾಹಿತಿಗಳ ಒಡನಾಟ ಸಹಜವಾಗಿಯೇ ಬೋಧನಾ ವೃತ್ತಿ, ಸಿವಿಲ್ ಎಂಜಿನಿಯರಿಂಗ್ ವೃತ್ತಿ ಬದಲಿಗೆ ಕಲೆಗೆ ಹೆಚ್ಚು ಗಮನ ನೀಡುವಂತೆ ಮಾಡಿತ್ತು. ಪರಿಣಾಮ ದಶಕಗಳ ಕಾಲ ಆರ್‌.ಟಿ.ಅರುಣಕುಮಾರ ಕಲಾ ಸೇವೆಗೆ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ತಡವಾಗಿಯಾದರೂ ಕಡೆಗೂ ಹುಡುಕಿಕೊಂಡು ಬಂದಿದೆ.

ತದ್ರೂಪಿ, ನಂದರಾಜ ಪ್ರಹಸನ, ಈ ಮುಖದವರು, ಹುಡುಕಾಟ, ಅಂತಿ ಗೊನೆ, ಸಿರಿಸಂಪಿಗೆ, ಮುಟ್ಟಿಸಿಕೊಂಡವನು, ಎದೆಗಾರಿಕೆ, ಚಾರ್ಲಿ ಚಾಪ್ಲಿನ್, ಮಿಸ್ಸಿಂಗ್ ಎ ಮಿಸ್ ದಿ ಬಾರ್ಬರ್ ದಿ ಗ್ರೇಟ್ ಡಿಕ್ಲೇಟರ್ ಸೇರಿದಂತೆ ವಿವಿಧ ನಾಟಕಗಳಲ್ಲಿ ಅಭಿನಯ ಮಾಡಿದ್ದಾರೆ. ಹೋರಾಟ, ಕೆರೆಗೆಹಾರ, ಕುಂಟಾ ಕುಂಟ ಕುರವತ್ತಿ ನಾಟಕಗಳನ್ನು ನಿರ್ದೇಶನ ಮಾಡಿದ್ದು, ಪ್ರತಿಮಾ ಸಭಾದಲ್ಲಿ ಸಕ್ರಿಯ ಚಟುವಟಿಕೆಗಳಲ್ಲೂ ಅರುಣ ಭಾಗಿಯಾಗುತ್ತಾ ಬಂದಿದ್ದಾರೆ. ತನ್ನೆಲ್ಲಾ ನೋವನ್ನು ನುಂಗಿ, ಎಲ್ಲರಿಗೂ ನಗುವನ್ನು ಹಂಚುವ ಗುಣವೇ ಆರ್‌.ಟಿ.ಅರುಣಗೆ ಇತರರಿಗಿಂತ ಭಿನ್ನವಾಗಿ ನಿಲ್ಲಿಸುತ್ತದೆ.

ದೂರದರ್ಶನದಲ್ಲಿ ಮೂಡಿ ಬರುತ್ತಿದ್ದ ಕೆಲವು ಕಿರುಚಿತ್ರಗಳಲ್ಲೂ ಅಭಿನಯ ಮಾಡಿದ್ದಾರೆ. ಕಿರುತೆರೆಯ ಕಿಚ್ಚು ಎಂಬ ಧಾರಾವಾಹಿ ಇನ್ನೇನು ಆರ್‌.ಟಿ.ಅರುಣ ಬದುಕಿಗ ಹೊಸ ತಿರುವು ನೀಡಿತೆನ್ನುವಷ್ಟರಲ್ಲೇ ಬೆಂಗಳೂರಿನಲ್ಲಿ ಸಂಭವಿಸಿದ ಅಪಘಾತ ಮುಂಚಿನ ಆರ್‌.ಟಿ.ಅರುಣ್‌ಗೆ ಸವಾಲೊಡ್ಡಿತ್ತು. ಆಗ ಸಾವು ಬದುಕಿನ ಮಧ್ಯೆ ಹೋರಾಡಿದ ಆರ್‌.ಟಿ.ಅರುಣ್‌ ಇನ್ನೇನು ಸುಧಾರಿಸಿಕೊಂಡರೆನ್ನುವಷ್ಟರಲ್ಲೇ ಕ್ಯಾನ್ಸರ್ ಬಾಧಿಸಿತ್ತು. ಕಡೆಗೆ ಅಪಘಾತ, ಕ್ಯಾನ್ಸರ್ ಎರಡನ್ನೂ ಮಣಿಸಿ ಚಾರ್ಲಿ ಚಾಪ್ಲಿನ್ ಮಾಡಿ, ಹೆಸರಾಗಿದ್ದ ಆರ್‌.ಟಿ.ಅರುಣ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ರಂಗಭೂಮಿಗೆ ತಮ್ಮ ನಿಷ್ಠೆ, ಪ್ರತಿಭೆ ಮತ್ತು ನಿರಂತರ ಸಾಧನೆಯಿಂದ ವಿಶಿಷ್ಟ ಸೇವೆ ಸಲ್ಲಿಸಿರುವ ಆರ್.ಟಿ.ಅರುಣಕುಮಾರ ಎರಡೂವರೆ ದಶಕಗಳಿಂದ ರಂಗಭೂಮಿಗೆ ಸಲ್ಲಿಸಿದ ಸ್ಮರಣೀಯ ಸೇವೆ ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿಯಿಂದ ವಾರ್ಷಿಕ ಪ್ರಶಸ್ತಿ ನೀಡಿದೆ. ಆರ್‌.ಟಿ ಅಂತಲೇ ಗೆಳೆಯರ ಬಳಗ, ಆತ್ಮೀಯರು, ಹಿರಿಯರು, ಮಾಧ್ಯಮದವರಿಂದ ಕರೆಯಲ್ಪಡುವ ಆರ್‌.ಟಿ.ಅರುಣರಿಗೆ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ ಅಭಿನಂದನೆಯ ಸುರಿ ಮಳೆಯೇ ಸುರಿಯುತ್ತಿದೆ. ವರನಟ ಡಾ.ರಾಜಕುಮಾರ್‌ ಸೇರಿದಂತೆ ಹಿರಿಯ ನಟರು, ಉಪೇಂದ್ರರಿಂದ ಈಚಿನ ಕಲಾವಿದರವರೆಗೆ ಆರ್‌ಟಿ ಸ್ನೇಹವಿದೆ.

ಹೆತ್ತವರು, ದೊಡ್ಡಮ್ಮ, ದೊಡ್ಡಪ್ಪಂದಿರ ಆಶೀರ್ವಾದನನಗೆ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿರುವುದು ಖುಷಿಯಾಗಿದೆ. ಇದನ್ನು ನನ್ನ ತಂದೆ ಆರ್‌.ಜಿ.ತಾರಾನಾಥ, ತಾಯಿ ಹಾಲಮ್ಮ(ಸುಲೋಚನಮ್ಮ), ದೊಡ್ಡಪ್ಪಂದಿರಾದ ಆರ್‌.ಜಿ.ಶಿವಕುಮಾರ, ಆರ್.ಜಿ.ಗೌರಿಶಂಕರ, ದೊಡ್ಡಮ್ಮ ಚಂದ್ರಮ್ಮ ಶಿವಕುಮಾರ ಸೇರಿದಂತೆ ನನ್ನ ಕುಟುಂಬ ವರ್ಗ, ಸ್ನೇಹಿತರು, ಹಿತೈಷಿಗಳಿಗೆ ಅರ್ಪಿಸುತ್ತೇನೆ ಎಂದು ಆರ್‌.ಟಿ.ಅರುಣಕುಮಾರ ಪ್ರತಿಕ್ರಿಯಿಸಿದ್ದಾರೆ.

ಅಭಿಯಂತರಂಗದ ಚಿದಾನಂದ ಎಲ್ಲಾ ಹಿರಿಯ ರಂಗಕರ್ಮಿಗಳು ಈ ಪ್ರಶಸ್ತಿಯ ಗೌರವ ಸಲ್ಲುತ್ತದೆ. ರಂಗಭೂಮಿಗೆ ನನ್ನ ಸೇವೆ ಗುರುತಿಸಿ, ಅಕಾಡೆಮಿ ಪ್ರಶಸ್ತಿ ನೀಡಿದ್ದು, ನನಗೆ ಖುಷಿ ತಂದಿದೆ. ರಂಗಭೂಮಿಯಲ್ಲಿ ನಾನು ಸಲ್ಲಿಸಿದ ಅಲ್ಪ ಸೇವೆಯನ್ನು ಗುರುತಿಸಿ, ಅಕಾಡೆಮಿ ಪ್ರಶಸ್ತಿ ನೀಡಿದ್ದು ನನ್ನಲ್ಲಿ ಮತ್ತಷ್ಟು ಹುರುಪು, ಉತ್ಸಾಹ ಮೂಡಿಸಿದೆ. ಮತ್ತಷ್ಟು ನಾನು ಕ್ರಿಯಾಶೀಲನಾಗಿ ಕೆಲಸ ಮಾಡಲು ಇದು ಸ್ಫೂರ್ತಿ ತುಂಬಿದೆ ಎಂದು ಕನ್ನಡಪ್ರಭಕ್ಕೆ ಆರ್‌.ಟಿ.ಅರುಣ ತಮ್ಮ ಸಂತಸ ಹಂಚಿಕೊಂಡರು.