ಸಾರಾಂಶ
ಬಳ್ಳಾರಿ: ಕರ್ನಾಟಕ ನಾಟಕ ಅಕಾಡೆಮಿಯ 2024-25ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ವೃತ್ತಿರಂಗಭೂಮಿ ಕಲಾವಿದೆ ರೇಣುಕಾ ಬಾವಳ್ಳಿ ಆಯ್ಕೆಯಾಗಿದ್ದಾರೆ.
ಇವರು ಸಂಡೂರು ತಾಲೂಕಿನ ಸುಶೀಲಾ ನಗರದವರು. ಎಂಟನೇ ವಯಸ್ಸಿನಲ್ಲಿಯೇ ನಾಟಕವೊಂದರಲ್ಲಿ ನಾಟ್ಯ ಮಾಡುವ ಮೂಲಕ ರಂಗಭೂಮಿ ಪ್ರವೇಶ ಪಡೆದರು. 1986ರಲ್ಲಿ ಬಿಕೆಜಿ ನಾಗನಗೌಡರ ಜೊತೆ ಸತಿ ಸಂಸಾರದ ಜ್ಯೋತಿ ಎಂಬ ನಾಟಕದಲ್ಲಿ ಮಗಳ ಪಾತ್ರದ ಮೂಲಕ ರಂಗಭೂಮಿಗೆ ಅಧಿಕೃತವಾಗಿ ಪಾದಾರ್ಪಣೆ ಮಾಡುತ್ತಾರೆ.ಸುಮಾರು ಮೂರು ಸಾವಿರಕ್ಕೂ ಹೆಚ್ಚು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ ಕೀರ್ತಿ ಇವರದ್ದು. ರತ್ನಮಾಂಗಲ್ಯ, ರೈತ ನಗಲಿಲ್ಲ ಸರ್ಕಾರ ಉಳಿಯಲಿಲ್ಲ, ಹುಚ್ಚರಿರುವರು ತಂಗಿ ಎಚ್ಚರವಿರು, ಗೌರಿ ಗೆದ್ದಳು, ಅಣ್ಣ-ತಂಗಿ, ದಾರಿದೀಪ ಸೇರಿದಂತೆ ಅನೇಕ ನಾಟಕಗಳಲ್ಲಿ ಮನೋಜ್ಞವಾಗಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ರೇಣುಕಾ ಬಾವಳ್ಳಿ ಅವರನ್ನು ಜ್ಯೂನಿಯರ್ ಮಾಲಾಶ್ರೀ ಎಂದು ಕರೆಯುತ್ತಿದ್ದರು ಎಂದು ಇಲ್ಲಿನ ರಂಗಭೂಮಿ ಕಲಾವಿದರು ಸ್ಮರಿಸಿಕೊಳ್ಳುತ್ತಾರೆ. ಇನ್ನು ಪೌರಾಣಿಕ ಪಾತ್ರಗಳಲ್ಲೂ ಅಭಿನಯಿಸಿ ರಂಗಚತುರೆ ಎನಿಸಿಕೊಂಡಿದ್ದಾರೆ.ರಕ್ತರಾತ್ರಿ, ಕುರುಕ್ಷೇತ್ರ, ವೀರ ಅಭಿಮನ್ಯು ಹಾಗೂ ಐತಿಹಾಸಿಕ ನಾಟಕಗಳಾದ ಗಂಡುಗಲಿ ಕುಮಾರರಾಮ, ಸಂಗೊಳ್ಳಿರಾಯಣ್ಣ, ಸಿಂಧೂರ ಲಕ್ಷ್ಮಣ ಮತ್ತು ಪೌರಾಣಿಕ ನಾಟಕಗಳಾದ ಹೇಮರೆಡ್ಡಿ ಮಲ್ಲಮ್ಮ, ಜಗಜ್ಯೋತಿ ಬಸವೇಶ್ವರ, ಅಲ್ಲೀಪುರ ಮಹಾದೇವತಾತ ಮುಂತಾದ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಗಂಡುಮೆಟ್ಟಿನ ಕಲೆ ಎಂದೇ ಹೇಳಲಾಗುವ ಬಯಲಾಟದಲ್ಲೂ ರೇಣುಕಾ ಅವರು ತಮ್ಮ ಅಭಿನಯದ ಛಾಪು ಮೂಡಿಸಿದ್ದಾರೆ. ಇವರ ರಂಗಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ರೇಣುಕಾ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಬಳ್ಳಾರಿ ಜಿಲ್ಲಾ ರಂಗಭೂಮಿ ಕಲಾವಿದರ ಸಂಘ, ರಂಗತೋರಣ ಸೇರಿದಂತೆ ಅನೇಕ ರಂಗಸಂಸ್ಥೆಗಳು ಅಭಿನಂದಿಸಿವೆ.