ಸಂವಿಧಾನವನ್ನು ಓದುವುದರಿಂದ ನಮ್ಮ ಬುದ್ಧಿ ಚುರುಕುಗೊಳ್ಳುತ್ತದೆ

| Published : Nov 27 2024, 01:05 AM IST

ಸಾರಾಂಶ

ಸಂವಿಧಾನದ ಬಗ್ಗೆ ಮೂಲಭೂತ ವಿಚಾರಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಸಂವಿಧಾನವನ್ನು ನಾವು ಓದುವುದರಿಂದ ನಮ್ಮ ಬುದ್ಧಿ ಚುರುಕುಗೊಳ್ಳುತ್ತದೆ ಎಂದು ಅಕ್ಕ ಐ.ಎ.ಎಸ್. ಅಕಾಡೆಮಿ ಸಂಸ್ಥಾಪಕ ಮತ್ತು ಮುಖ್ಯಸ್ಥ ಡಾ. ಶಿವಕುಮಾರ ತಿಳಿಸಿದರು.

ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗವು ಮಂಗಳವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದ ಬಗ್ಗೆ ಮೂಲಭೂತ ವಿಚಾರಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ನಾವು ನಮ್ಮ ದೇಶದ ಕಾನೂನಿನ ಬಗ್ಗೆ ಹೆಚ್ಚಿನ ಅರಿವು ಹೊಂದಿರಬೇಕು ಎಂದರು.

ಭಾರತೀಯ ಸಂವಿಧಾನದಲ್ಲಿ ಸ್ವಾತಂತ್ರ್ಯ, ಸಮಾನತೆ, ಬಾತೃತ್ವ, ಐಕ್ಯತೆ, ಸಮಗ್ರತೆಗೆ ಹೆಚ್ಚು ಆದ್ಯತೆ ಇದೆ. ಲಿಂಗ, ಬಣ್ಣ, ಜಾತಿಯ ಆಧಾರದ ಮೇಲೆ ಇಂದು ಭಿನ್ನ-ಭೇದ ಮಾಡುವ ಪದ್ಧತಿ ನಮ್ಮ ಸಂವಿಧಾನದಲ್ಲಿ ಇಲ್ಲ. ಲಿಂಗ ಭೇದ ಮಾಡದೆ ಹೆಣ್ಣು-ಗಂಡು ಎಂದು ಭಿನ್ನತೆ ಕೊಡದೆ ಆತ್ಮಕ್ಕೆ ಆದ್ಯತೆ ನೀಡಬೇಕು. ಸಂವಹನ ಕೌಶಲ್ಯವಿರಬೇಕು ಎಂದು ಅವರು ಹೇಳಿದರು.

ಡಾ. ಅಂಬೇಡ್ಕರ್ ಅವರು ಹಿಂದೂ ಕೋಡ್ ವಿಲ್ ಅನ್ನು ಜಾರಿಗೆ ತಂದರು. ಇದರಲ್ಲಿ ಮಹಿಳೆಯರಿಗೆ ಆಸ್ತಿಯ ಹಕ್ಕು, ಪುನರ್ ವಿವಾಹದ ಹಕ್ಕು, ವಿಚ್ಚೇದನ ತೆಗೆದುಕೊಳ್ಳುವ ಹಕ್ಕು, ರಾಜಕೀಯ ಅಧಿಕಾರದಲ್ಲಿ ಪಾಲ್ಗೊಳ್ಳುವುದಕ್ಕೆ ಹಕ್ಕನ್ನು ನೀಡಿತು ಎಂದರು.

ನಂತರ ಸಂವಿಧಾನ ಪ್ರತಿಜ್ಞಾ ವಿಧಿಯನ್ನು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಚ್.ಎ. ಪೂರ್ಣಿಮಾ ಬೋಧಿಸಿದರು.

ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ, ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ ಇದ್ದರು. ಅಶ್ವಿನಿ ಪ್ರಾರ್ಥಿಸಿದರು. ಎಂ. ಐಶ್ವರ್ಯಾ ಸ್ವಾಗತಿಸಿದರು. ಕೆ.ಎಸ್. ಐಶ್ವರ್ಯಾ ನಿರೂಪಿಸಿದರು. ಕೆ.ಬಿ. ಚೈತ್ರಾ ವಂದಿಸಿದರು.