ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಬಿರಡಹಳ್ಳಿ ಗ್ರಾಮ ಪಂಚಾಯಿತಿಯ ಕ್ರಿಯಾಶೀಲ ಆಡಳಿತ ಮಂಡಳಿಯು ತನ್ನ ಗ್ರಾಮಸ್ಥರಿಗೆ ನವೀನ ತಂತ್ರಜ್ಞಾನದ ಸಂಯೋಗದೊಂದಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿರುವುದನ್ನು ಪರಿಗಣಿಸಿ ರಾಷ್ಟ್ರೀಯ ಅವಾರ್ಡ್‌ಗೆ ಆಯ್ಕೆ ಮಾಡಲಾಗಿದೆ.ಪ್ರಸ್ತುತ ೧೧ ಚುನಾಯಿತ ಸದಸ್ಯ ಬಳಗದೊಂದಿಗೆ ೪೧೪೫ ಜನಸಂಖ್ಯೆಯನ್ನು ಈ ಗ್ರಾಮ ಪಂಚಾಯಿತಿಯು ಒಳಗೊಂಡಿದೆ. ಹಸಿರ ಸಿರಿಯ ನಡುವೆ ಕಂಗೊಳಿಸುತ್ತಿರುವ ಈ ಗ್ರಾಮ ಪಂಚಾಯಿತಿಯು ಜೀರೋ ಕಾರ್ಬೋನ್ ಗುರಿಯೆಡೆಗೆ ಸಾಗುವತ್ತ ಹಲವು ಕ್ರಮಗಳನ್ನು ಕೈಗೊಂಡಿದೆ.ಗ್ರಾಮ ಪಂಚಾಯಿತಿ ಕಚೇರಿಗೆ ಸೋಲಾರ್ ರೂಫ್ ಟಾಪ್ ಅಳವಡಿಸಿಕೊಂಡು ಸಂಪೂರ್ಣ ಕಚೇರಿಗೆ ಬೇಕಾದ ವಿದ್ಯುತ್ ಉತ್ಪಾದಿಸಿಕೊಳ್ಳುತ್ತಿದೆ. ಇದರ ಜೊತೆಗೆ ಮಳೆಮಾಪನ ಯಂತ್ರ, ಸೋಲಾರ್ ಆಧಾರಿತ ತಂತಿ ಬೇಲಿ, ಸಿಸಿ ಕ್ಯಾಮೆರಾಗಳು, ಇಂಟರ್ನೆಟ್ ಸಂಪರ್ಕ, ಯಂತ್ರ ಮತ್ತು ಅಂಚೆ ಕಚೇರಿಗಳು ಸಹ ಸೋಲಾರ್ ಸಹಾಯದಿಂದ ನಡೆಯುತ್ತಿವೆ.ಗ್ರಾಮ ಪಂಚಾಯಿತಿ ಪ್ರದೇಶದಲ್ಲಿ ಇಪ್ಪತ್ತು ಸೋಲಾರ್ ಹೈ ಮಾಸ್ಕ್ ಬೀದಿದೀಪಗಳು, ಮತ್ತು ೧೯೦ ಸೋಲಾರ್ ಬೀದಿ ದೀಪಗಳನ್ನು ಅಳವಡಿಸುವ ಮೂಲಕ ವಿದ್ಯುತ್ ವೆಚ್ಚವನ್ನು ನಿಯಂತ್ರಿಸಲು ಪ್ರಯತ್ನಿಸಲಾಗಿದೆ.ಸೋಲಾರ್ ಲಾಟಿನು:
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಮನೆಗಳು ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸಿಕೊಂಡು ಸ್ವಾವಲಂಬಿಯಾಗಿವೆ. ಗ್ರಾಮ ಪಂಚಾಯಿತಿಯ ಸ್ವಂತ ಸಂಪನ್ಮೂಲದಿಂದ ಸೋಲಾರ್ ಲಾಟಿನುಗಳನ್ನು ದುರ್ಬಲ ವರ್ಗದ ಸಮುದಾಯಕ್ಕೆ ವಿತರಿಸಲಾಗಿದೆ.ಹಲವು ಮನೆಗಳು ಸೋಲಾರ್ ಆಧಾರಿತ ನೀರು ಕಾಯಿಸುವ ವ್ಯವಸ್ಥೆಯನ್ನು ಹೊಂದಿವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇಕಡಾ ೧೦೦ರಷ್ಟು ಮನೆಗಳು ಅಡಿಗೆ ಮಾಡಲು ಐPಉ ಬಳಸುವ ಮೂಲಕ ಇಂಗಾಲ ಸೂಸುವಿಕೆ ತಗ್ಗಲು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿವೆ.
ಎಲೆಕ್ಟ್ರಿಕ್ ಕಾರು ಮತ್ತು ಬೈಕುಗಳ ಉಪಯೋಗದ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಷೇಧಿಸಲು ನಿರಂತರ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ಗ್ರಾಮ ಸಭೆಗಳಲ್ಲಿ ಪ್ರತಿಜ್ಞೆ ಸ್ವೀಕಾರ, ರಸ್ತೆ ಜಾಥಾ, ಎಚ್ಚರಿಕೆ ಫಲಕಗಳನ್ನು ಅಳವಡಿಸುವ ಮೂಲಕ ಜಾಗೃತಿಯನ್ನು ಹೆಚ್ಚಿಸಲಾಗಿದೆ.ಒಂದು ಲಕ್ಷ ಗಿಡ:
ಹಸಿರೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವನಮಹೋತ್ಸವ ಕಾರ್ಯಕ್ರಮ ಮತ್ತು ನರೇಗಾ ಯೋಜನೆಯಡಿಯಲ್ಲಿ ಇದುವರೆಗೂ ಒಂದು ಲಕ್ಷ ವಿವಿಧ ಜಾತಿಯ ಸಸಿಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಡಲಾಗಿದೆ.ರೈತರ ಜಮೀನಿನಲ್ಲಿ ಸ್ಪ್ರಿಂಕ್ಲೆರ್ ಮತ್ತು ಡ್ರಿಪ್ ಇರಿಗೇಷನ್ ಮೂಲಕ ನೀರು ಹಾಯಿಸುವ ವ್ಯವಸ್ಥೆಗೆ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ. ಗ್ರಾಮ ಪಂಚಾಯಿತಿಯಿಂದ ನಿರ್ಮಿಸಿರುವ ಘನ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ವೈಜ್ಞಾನಿಕವಾಗಿ ಹಸಿ ಮತ್ತು ಒಣ ಕಸಗಳನ್ನು ಬೇರ್ಪಡಿಸಿ ಸಂಸ್ಕರಣೆ ಮಾಡಲಾಗುತ್ತಿದೆ.ಹಲವು ವಿನೂತನ ಕಾರ್ಯಕ್ರಮಗಳನ್ನು ಕೈಗೊಂಡ ಪರಿಣಾಮ ಬಿರಡಹಳ್ಳಿ ಗ್ರಾಮ ಪಂಚಾಯಿತಿಯು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಅನೇಕ ಪುರಸ್ಕಾರಗಳನ್ನು ಪಡೆದುಕೊಂಡಿದೆ. ಮತ್ತು ಉತ್ತಮ ಸೇವೆಯನ್ನು ಗ್ರಾಮೀಣ ಜನರಿಗೆ ತಲುಪಿಸುವುದನ್ನು ಮುಂದುವರೆಸುತ್ತಿದೆ.