ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮುಂಬೈನ ಎಸ್.ಪಿ.ಜೈನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ರಿಸರ್ಚ್ (SPJIMR) ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಸೋಷಿಯಲ್ ಇಂಪಾಕ್ಟ ಅವಾರ್ಡ’ಗೆ ಮೈಸೂರು ಮೂಲದ ದೇಸಿ ಸೀಡ್ ಪ್ರಡ್ಯೂಸರ್ ಕಂಪನಿ ಭಾಜನವಾಗಿದೆ.ಕೃಷಿ ಮತ್ತು ಜೀವನೋಪಾಯ ಕ್ಷೇತ್ರದಲ್ಲಿ ಅಪರಿಮಿತ ಸೇವೆ ಸಲ್ಲಿಸಿದ ಕಂಪನಿಗಳನ್ನು ಗುರುತಿಸಿ ಸಾಮಾಜಿಕ ಪರಿಣಾಮ ಪ್ರಶಸ್ತಿ ನೀಡಲಾಗುತ್ತದೆ. ಸಹಜ ಸೀಡ್ಸ್ ಬ್ರಾಂಡ್ ಮೂಲಕ ದೇಸಿ ಬೀಜ ಮಾರಾಟ ಮಾಡುತ್ತಿರುವ ರೈತರ ಮಾಲಿಕತ್ವದ ದೇಸಿ ಸೀಡ್ ಪ್ರಡ್ಯೂಸರ್ ಕಂಪನಿಯ ನಾಡು ತಳಿ ಬೀಜ ಸಂರಕ್ಷಣೆ, ರೈತರ ಆದಾಯ ಹೆಚ್ಚಳ ಮತ್ತು ಗ್ರಾಮೀಣ ಮಹಿಳೆಯರ ಸಬಲೀಕರಣ ಕಾರ್ಯ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
1 ಲಕ್ಷ ರು. ನಗದು ಪುರಸ್ಕಾರ ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುವ ಈ ಪ್ರಶಸ್ತಿಯನ್ನು ಮುಂಬೈಯಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಸಹಜ ಸೀಡ್ಸ್ ಪರವಾಗಿ, ಸಂಸ್ಥಾಪಕಿ ಸೀಮಾ ಪ್ರಸಾದ್, ನಿರ್ದೇಶಕ ಸಿದ್ದನಹುಂಡಿ ಶ್ರೀನಿವಾಸಮೂರ್ತಿ ಮತ್ತು ಬೀಜೋತ್ಪಾದನಾ ವಿಭಾಗದ ಮುಖ್ಯಸ್ಥ ಕೆ.ಎಸ್. ಮಂಜು ಅವರು ಪ್ರಶಸ್ತಿ ಸ್ವೀಕರಿಸಿದರು.ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಬೆಜವಾಡ ವಿಲ್ಸನ್ ಪ್ರಶಸ್ತಿ ಪ್ರದಾನ ಮಾಡಿದರು.
ಸಹಜ ಸೀಡ್ಸ್, ಭಾರತದ ಮೊದಲ ರೈತರ ಮಾಲಿಕತ್ವದ ಸಾವಯವ ಬೀಜ ಕಂಪನಿಯಾಗಿದ್ದು, ಗುಣಮಟ್ಟದ ದೇಸಿ ಬೀಜವನ್ನು ಕೈಗೆಟುಕುವ ಬೆಲೆಯಲ್ಲಿ ಉತ್ಪಾದಿಸಿ ಮಾರುತ್ತಿದೆ. 200ಕ್ಕೂ ಹೆಚ್ಚಿನ ನಾಡು ತಳಿಗಳನ್ನು ಮಾರುಕಟ್ಟೆಗೆ ತಂದಿದೆ.ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ 56 ಬೀಜ ಉತ್ಪಾದಕರು ಮತ್ತು 10 ಮಹಿಳಾ ಸಂಘಗಳು ಬೀಜೋತ್ಪಾದನೆಯಲ್ಲಿ ಸಕ್ರಿಯವಾಗಿವೆ. 2023-24 ಹಣಕಾಸು ವರ್ಷದಲ್ಲಿ ಸಹಜ ಸೀಡ್ಸ 1.25 ಕೋಟಿ ರೂ. ಮೌಲ್ಯದ ದೇಸಿ ಬೀಜಗಳನ್ನು ಮಾರಾಟ ಮಾಡಿ, 20 ಲಕ್ಷ ರೂ. ಲಾಭ ಗಳಿಸಿದೆ. ಬಂದ ಲಾಭವನ್ನು ಪ್ರತಿವರ್ಷ ರೈತರಿಗೆ ಹಂಚುವುದು ಸಹಜ ಸೀಡ್ಸನ ಹೆಗ್ಗಳಿಕೆ.
ರೈತರ ಮಾಲೀಕತ್ವದ ಬೀಜ ಕಂಪನಿ ಹುಟ್ಟಿ ಹಾಕಿ ಬೀಜ ಸ್ವಾತಂತ್ರ್ಯದ ಕಲ್ಪನೆ ಸಾಕಾರಗೊಳಿಸುವ ನಮ್ಮ ಪ್ರಯತ್ನ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ನಮಗೆ ಹೆಮ್ಮೆ ತಂದಿದೆ. ದೇಸಿ ಬೀಜ ಮತ್ತು ಕೃಷಿ ವೈವಿಧ್ಯವನ್ನು ಜನಪ್ರಿಯಗೊಳಿಸುವ ನಮ್ಮ ಕೆಲಸಕ್ಕೆ ಸ್ಫೂರ್ತಿ ದೊರೆತಂತಾಗಿದೆ ಎಂದು ಸಹಜ ಸೀಡ್ಸ್ ನ ಸಂಸ್ಥಾಪಕ ಜಿ. ಕೃಷ್ಣ ಪ್ರಸಾದ್ ಹರ್ಷ ವ್ಯಕ್ತಪಡಿಸಿದರು.ಹೆಚ್ಚಿನ ಮಾಹಿತಿಗೆ ಕೃಷ್ಣ ಪ್ರಸಾದ್ ಮೊ. 98808 62058 ಸಂಪರ್ಕಿಸಬಹುದು.