ಇಂದಿನಿಂದ ದೃಷ್ಠಿಚೇತನರ ರಾಷ್ಟ್ರಮಟ್ಟದ ಚೆಸ್ ಪಂದ್ಯಾವಳಿ: ಆನಂದರಾಜು ಪ್ರಭು

| Published : Feb 08 2024, 01:37 AM IST

ಇಂದಿನಿಂದ ದೃಷ್ಠಿಚೇತನರ ರಾಷ್ಟ್ರಮಟ್ಟದ ಚೆಸ್ ಪಂದ್ಯಾವಳಿ: ಆನಂದರಾಜು ಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ಮಾಣಿಕನಗರ ಸಂಸ್ಥಾನದಲ್ಲಿ ಆಯೋಜನೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಚೆಸ್‌ ಕ್ರೀಡಾಪಟುಗಳು ಭಾಗವಹಿಸಿ ಪಂದ್ಯಾವಳಿ ಯಶಸ್ವಿಗೊಳಿಸಬೇಕು ಎಂದು ಮಾಣಿಕಪ್ರಭು ಸಂಸ್ಥಾನದ ಕಾರ್ಯದರ್ಶಿ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಹುಮನಾಬಾದ್‌

ಚೆಸ್‌ ಆಟ ಬುದ್ಧಿವಂತರ ಆಟವಾಗಿದ್ದು, ದೃಷ್ಠಿ ಚೇತನರು ಚೆಸ್‌ಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ರಾಷ್ಟ್ರಮಟ್ಟದ ದೃಷ್ಠಿ ವಿಕಲಚೇತನರ ಚೆಸ್‌ (ಚದುರಂಗ) ಪಂದ್ಯಾವಳಿ ಮಾಣಿಕನಗರ ಸಂಸ್ಥಾನದಿಂದ ಫೆ. 8ರಂದು ಸಂಜೆ ಉದ್ಘಾಟನೆಗೊಳ್ಳಲಿದೆ ಎಂದು ಮಾಣಿಕಪ್ರಭು ಸಂಸ್ಥಾನದ ಕಾರ್ಯದರ್ಶಿ ಆನಂದರಾಜ ಪ್ರಭುಗಳು ಮಾಹಿತಿ ನೀಡಿದರು.

ತಾಲೂಕಿನ ಮಾಣಿಕನಗರ ಗ್ರಾಮದ ಮಾಣಿಕಪ್ರಭು ಸಂಸ್ಥಾನ ಸಭಾಮಂಟಪದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳ್ಳಿ ಮಹೋತ್ಸವ ಅಂಗವಾಗಿ ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ದೃಷ್ಠಿ ವಿಕಲಚೇತನರ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಮಾಣಿಕ್ಯ ಸೌಧದಲ್ಲಿ ಚೆಸ್‌ ಆಟಗಾರರ ರೋಚಕ ಪೈಪೋಟಿಗೆ ಸಾಕ್ಷಿಯಾಗಲಿದೆ ಎಂದರು.

ಇದು ಅವರ ಬುದ್ಧಿಮತ್ತೆಯನ್ನು ಇನ್ನಷ್ಟು ಚುರುಕಾಗಿಸುತ್ತದೆ. ಈ ನಿಟ್ಟಿನಲ್ಲಿ ಈ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಚೆಸ್‌ ಪ್ರಿಯರಿಗೆ ಹೊಸ ಅನುಭವ ನೀಡಲಿದೆ. ಪಂದ್ಯಾವಳಿಯಲ್ಲಿ ಬೋರ್ಡ್‌ ಹಾಗೂ ಕಾಯಿಗಳಲ್ಲಿ ಬ್ರೇಲ್‌ ಲಿಪಿಯ ಅಂಕಿಗಳು, ಆಂಗ್ಲ ಅಕ್ಷರ ಅಳವಡಿಕೆ ಮಾಡಲಾಗಿದೆ. ಅಷ್ಟೆ ಅಲ್ಲದೇ ಕಪ್ಪು ಹಾಗೂ ಬಿಳಿ ಮನೆಗಳನ್ನು ಗುರುತಿಸಲು ಅಪ್‌ಡೌನ್‌ ಮಾಡಲಾಗಿದೆ. ಕಾಯಿಗಳಲ್ಲಿ ಬಿಳಿ ಮತ್ತು ಕಪ್ಪು ಎಂದು ಗುರುತಿಸಲು ಕಪ್ಪು ಕಾಯಿಗಳ ಮೇಲೆ ಚುಕ್ಕೆ ಗುರುತು ಮಾಡಲಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಚೆಸ್‌ ಕ್ರೀಡಾಪಟುಗಳು ಭಾಗವಹಿಸಿ ಪಂದ್ಯಾವಳಿ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಶಿಕ್ಷಕ ಕುಪೇಂದ್ರ ಹುಲಸೂರೆ ಮಾತನಾಡಿ, ಪಂದ್ಯಾವಳಿಯಲ್ಲಿ ಪ್ರತಿಭೆಗೆ ಅನುಗುಣವಾಗಿ ಟಾಪ್‌ 25ರ ಶ್ರೇಣಿಯಲ್ಲಿ ನಗದು ಹಾಗೂ ಮೆಡಲ್‌ ನೀಡಿ ಪ್ರೋತ್ಸಾಹಿಸಲಾಗುವುದು. ಇದಕ್ಕೆ ತಗಲುವ ಖರ್ಚು ವೆಚ್ಚವನ್ನು ಮಾಣಿಕಪ್ರಭು ಸಂಸ್ಥಾನದಿಂದಲೆ ಭರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಭು ಪಂಚಾಳ, ತುಕಾರಾಮ ಎಸ್‌ಕೆ, ವಿಲಾಸ ನಾಯಕ, ಮಹಾದೇವ ಜಲಸಂಗಿ, ಮಲ್ಲಿಕಾರ್ಜುನ್‌ ಇದ್ದರು.