ಸಾರಾಂಶ
ಮೈಸೂರು, ಭಾರತೀಯ ಪ್ರಜೆಗಳಿಗೆ ಅವಶ್ಯವಾದ ರೇಷನ್ ಕಾರ್ಡ್, ಆಯುಷ್ಮಾನ್ ಕಾರ್ಡ್ ಗಳೇ ಲೈಂಗಿಕ ಕಾರ್ಯಕರ್ತೆಯರ ಬಳಿ ಇಲ್ಲ
ಕನ್ನಡಪ್ರಭ ವಾರ್ತೆ ಮೈಸೂರು
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೌಲಭ್ಯದಿಂದ ವಂಚಿತರಾಗಿರುವ ಲೈಂಗಿಕ ಕಾರ್ಯಕರ್ತೆಯರನ್ನು ಸಮಾಜದ ಮುನ್ನಲೆಗೆ ತರುವ ಕೆಲಸ ಆಗಬೇಕಿದೆ ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಅಧ್ಯಕ್ಷ ಕಿಶೋರ್ ಭಾಯಿ ಮಕ್ವಾನ ತಿಳಿಸಿದರು.ನಗರದ ಸದರ್ನ್ ಸ್ಟಾರ್ ಹೋಟೆಲ್ ನಲ್ಲಿ ಆಶೋದಯ ಸಮಿತಿಯು ಶನಿವಾರ ಆಯೋಜಿಸಿದ ಲೈಂಗಿಕ ಕಾರ್ಯಕರ್ತೆಯರು ಹಾಗೂ ದುರ್ಬಲ ಮಹಿಳೆಯರ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ಕೆಲವು ಲೈಂಗಿಕ ಕಾರ್ಯಕರ್ತೆಯರ ಮನೆಗೆ ಭೇಟಿ ನೀಡಿ ಅವರ ಸಮಸ್ಯೆ ಬಗ್ಗೆ ತಿಳಿದುಕೊಂಡಿದ್ದೇನೆ ಎಂದರು.ಭಾರತೀಯ ಪ್ರಜೆಗಳಿಗೆ ಅವಶ್ಯವಾದ ರೇಷನ್ ಕಾರ್ಡ್, ಆಯುಷ್ಮಾನ್ ಕಾರ್ಡ್ ಗಳೇ ಲೈಂಗಿಕ ಕಾರ್ಯಕರ್ತೆಯರ ಬಳಿ ಇಲ್ಲ. ಇದರಿಂದ ಕೇಂದ್ರ ಸರ್ಕಾರದ ಯೋಜನೆಗಳು ಅವರಿಗೆ ತಲುಪುತ್ತಿಲ್ಲ. ಎಚ್ಐವಿ ಸೋಂಕಿತ ಅನೇಕರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಅರಿವಿಲ್ಲ ಎಂದು ಅವರು ಹೇಳಿದರು.ಈ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಜಿ. ಲಕ್ಷೀಕಾಂತ ರೆಡ್ಡಿ ಅವರೊಂದಿಗೆ ಚರ್ಚಿಸಿದ ಬಳಿಕ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅನೇಕರು ರೇಷನ್ ಹಾಗೂ ಆಯುಷ್ಮಾನ್ ಕಾರ್ಡ್ ಮುಂತಾದ ದಾಖಲೆಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದರು.ಮೈಸೂರು ಹಾಗೂ ಮಂಡ್ಯದ 103 ಹಳ್ಳಿಗಳಿಂದ ನೂರಾರು ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸರ್ಕಾರಿ ಸೌಲಭ್ಯಕ್ಕಾಗಿ ಕಾರ್ಡ್ ಗಳನ್ನು ಮಾಡಿಸಲು ಅವರಿಗೆ ಮನೆ ಹಾಗೂ ಇನ್ನಿತರ ಗೌಪ್ಯ ಮಾಹಿತಿ ನೀಡಲು ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ಆ ಬಗ್ಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. ಆಶೋದಯ ಸಮಿತಿಯ ನಿರ್ದೇಶಕಿ ಲಕ್ಷ್ಮಿ ಮೊದಲಾದವರು ಇದ್ದರು.