ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿನ ಕೊಡಗು ಜಿಲ್ಲೆಯಲ್ಲಿರುವ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಮಾ.25 ಮತ್ತು 26ರಂದು ಎರಡು ದಿನಗಳ ‘ಜೀವವೈವಿದ್ಯತೆಯ ಸಂರಕ್ಷಣೆ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಹವಾಮಾನ ಬದಲಾವಣೆಯ ತಗ್ಗಿಸುವಿಕೆ’ ಕುರಿತು ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.ಮಾರ್ಚ್ 25ರಂದು ಬೆಳಗ್ಗೆ 9.30ಕ್ಕೆ ಪೊನ್ನಂಪೇಟೆ ಸಿಒಪಿ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಸಮ್ಮೇಳನದಲ್ಲಿ ದೇಶದ ವಿವಿಧ ವಿಶ್ವವಿದ್ಯಾಲಯಗಳು, ವೈಜ್ಞಾನಿಕ ಸಂಸ್ಥೆಗಳು ಮತ್ತು ಜೀವವೈವಿದ್ಯತೆಯ ಕುರಿತು ಸಂಶೋಧನೆ, ಶಿಕ್ಷಣದಲ್ಲಿ ತೊಡಗಿಕೊಂಡಿರುವ ವಿಜ್ಞಾನಿಗಳು ಭಾಗವಹಿಸಲಿದ್ದಾರೆ.ಎರಡು ದಿನಗಳ ಸಮ್ಮೇಳನದಲ್ಲಿ, ಜೀವವೈವಿದ್ಯತೆ ಪ್ರಸ್ತುತ ಸ್ಥಿತಿ, ಅಪಾಯಗಳು ಹಾಗೂ ಸಂರಕ್ಷಣೆ, ಜೈವಿಕ ಪರಿಶೋಧನೆ ಮತ್ತು ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ, ಹವಾಮಾನ ಬದಲಾವಣೆ: ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯದ ಸವಾಲುಗಳು ಹಾಗೂ ಹವಾಮಾನ ಬದಲಾವಣೆ ಎದುರಿಸಲು ಪರ್ಯಾಯ ಶಕ್ತಿ ಮೂಲಗಳ ಈ ನಾಲ್ಕು ಪ್ರಮುಖ ವಿಷಯಗಳ ಬಗ್ಗೆ ಪ್ರಬಂಧ ಮಂಡನೆ, ವಿಚಾರ ವಿನಿಮಯ, ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಿರುವ ಸಂಶೋಧನೆಗಳ ಬಗ್ಗೆ ಚರ್ಚೆಗಳು ಇರಲಿವೆ. ಸಮ್ಮೇಳನದಲ್ಲಿ ಒಟ್ಟು 100ಕ್ಕೂ ಅಧಿಕ ವಿಜ್ಞಾನಿಗಳು ಪಾಲ್ಗೊಂಡು, ವಿವಿಧ ವಿಷಯಗಳ ಒಟ್ಟು 123 ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಪಾರಿಸರಿಕ ವಿಷಯದಲ್ಲಿ ನುರಿತ 10 ತಜ್ಞರು ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಉಪನ್ಯಾಸ ನೀಡಲಿದ್ದಾರೆ.ಉದ್ಘಾಟನಾ ಕಾರ್ಯಕ್ರಮ:
ಸಮ್ಮೇಳನವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದ ಗೌರವಾನ್ವಿತ ಕುಲಪತಿ ಡಾ.ಆರ್.ಸಿ.ಜಗದೀಶ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಎನ್.ಎಸ್.ಲಿಂಗರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮ್ಮೇಳನದ ಪ್ರಬಂಧ ಸಾರಾಂಶದ ಪುಸ್ತಕವನ್ನು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ ಕಾರ್ಯದರ್ಶಿ ಡಾ.ಯು.ಟಿ.ವಿಜಯ್ ಬಿಡುಗಡೆಗೊಳಿಸಲಿದ್ದಾರೆ. ಬೆಂಗಳೂರು ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಲ್.ಜಿ.ಸ್ವಾಮಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಉನ್ನತಾಧಿಕಾರಿ ಡಾ.ಬಿ.ಹೇಮಳಾ ನಾಯಕ್, ಶಿಕ್ಷಣ ನಿರ್ದೇಶಕರಾದ ಡಾ.ಕೆ.ಸಿ.ಶಶಿಧರ್, ಕುಲಸಚಿವರಾದ ಡಾ.ಬಿ.ಎಂ.ದುಶ್ಯಂತ್ ಕುಮಾರ್, ಸಂಶೋಧನಾ ನಿರ್ದೇಶಕರಾದ ಡಾ.ಕೆ.ಟಿ.ಗುರುಮೂರ್ತಿ, ವಿಸ್ತರಣಾ ನಿರ್ದೇಶಕರಾದ ಡಾ.ಎಸ್.ಯು.ಪಾಟೀಲ್, ಡೀನ್(ಸ್ನಾತಕೋತ್ತರ ಶಿಕ್ಷಣ) ಹಾಗೂ ಡೀನ್(ವಿದ್ಯಾರ್ಥಿ ಕಲ್ಯಾಣ) ಡಾ.ನಾರಾಯಣ ಎಸ್. ಮಾವರ್ಕರ್ ಪಾಲ್ಗೊಳ್ಳಲಿದ್ದಾರೆ.ನಾಳೆ ಸಮಾರೋಪ ಕಾರ್ಯಕ್ರಮ:ಮಾರ್ಚ್ 26ರಂದು ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭ ಪೊನ್ನಂಪೇಟೆ ಸಿಒಎಫ್ ಸಭಾಂಗಣದಲ್ಲಿ ನಡೆಯಲಿದೆ. ನೂತನವಾಗಿ ಸ್ಥಾಪಿತವಾಗಿರುವ ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವಿಶೇಷಾಧಿಕಾರಿಗಳಾದ ಡಾ.ಕೆ.ಎಂ.ಹರಿಣಿಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಎಚ್.ಸಿ., ಪಾಲಿಬೆಟ್ಟ ಟಾಟಾ ಕಾಫಿ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ಪೊನ್ನಪ್ಪ ಬಿ.ಜಿ., ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯದ ಅಧಿಕಾರಿ, ಡೀನ್(ತೋಟಗಾರಿಕೆ) ಡಾ.ಸುರೇಶ್ ಡಿ.ಎಕಬೋಟೆ, ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಶ್ರೀನಿವಾಸ್ ವಿ., ಶಿವಮೊಗ್ಗ ಕೃಷಿ ಮಹಾವಿದ್ಯಾಲಯದ ಡೀನ್(ಕೃಷಿ) ಡಾ.ತಿಪ್ಪೇಶ್ ಡಿ., ಆಡಳಿತಾಧಿಕಾರಿ ಡಾ.ಬಿ.ಸಿ.ಧನಂಜಯ ಇತರರು ಪಾಲ್ಗೊಳ್ಳಲಿದ್ದಾರೆ. ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶ ಪೊನ್ನಂಪೇಟೆಯಲ್ಲಿ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಹಲವಾರು ವಿಚಾರಗಳ ಕುರಿತು ಚರ್ಚೆಗಳಾಗಿ, ಜೀವಿವೈವಿದ್ಯತೆಯ ಸಂರಕ್ಷಣೆಗೆ ಹಲವು ಶಿಫಾರಸ್ಸುಗಳು ಹೊರಬರಲಿದ್ದು, ಮುಂದಿನ ಸಂಶೋಧನೆಗಳಿಗೆ ಈ ಶಿಪಾರಸುಗಳು ದಾರಿದೀಪವಾಗಲಿದೆ ಎಂದು ಪೊನ್ನಂಪೇಟೆ ಮಹಾವಿದ್ಯಾಲಯದ ಡೀನ್(ಅರಣ್ಯ) ಹಾಗೂ ಸಮ್ಮೇಳನ ಆಯೋಜನ ಮಂಡಳಿಯ ಅಧ್ಯಕ್ಷ ಡಾ.ಜಿ.ಎಂ.ದೇವಗಿರಿ ತಿಳಿಸಿದ್ದಾರೆ.