ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ, ೮೦ ಕಿಮೀ ಮಾನವ ಸರಪಳಿ ನಿರ್ಮಾಣ

| Published : Sep 13 2024, 01:41 AM IST

ಸಾರಾಂಶ

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಸೆ. ೧೫ರಂದು ೮೦ ಕಿಮೀ ಮಾನವ ಸರಪಳಿ ನಿರ್ಮಿಸುವ ಕಾರ್ಯದಲ್ಲಿ ಯಾವುದೇ ಗೊಂದಲವಾಗದಂತೆ ಅತ್ಯಂತ ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಹೇಳಿದರು.

ಹಾವೇರಿ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಸೆ. ೧೫ರಂದು ೮೦ ಕಿಮೀ ಮಾನವ ಸರಪಳಿ ನಿರ್ಮಿಸುವ ಕಾರ್ಯದಲ್ಲಿ ಯಾವುದೇ ಗೊಂದಲವಾಗದಂತೆ ಅತ್ಯಂತ ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಹೇಳಿದರು.

ನಗರದ ಜಿಲ್ಲಾ ಗುರುಭವನದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ತಯಾರಿ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ನಮಗೆಲ್ಲ ಸಮಾನ ಅವಕಾಶ, ಸಮಾನ ಹಕ್ಕು, ನಾವೆಲ್ಲರೂ ಒಂದೇ ಎಂಬ ಮನೋಭಾವನೆ, ನಾವೆಲ್ಲರೂ ಸ್ವಾಲಂಬಿಗಳಾಗಿ ಜೀವಿಸಲು ಹಾಗೂ ಸಮುದಾಯಗಳನ್ನು ಶಸಕ್ತಗೊಳಿಸಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಪ್ರಜಾಪ್ರಭುತ್ವದ ಮಹತ್ವವನ್ನು ಎಲ್ಲರಿಗೂ ತಿಳಿಪಡಿಸಲು ಸರ್ಕಾರ ಪ್ರಜಾಪ್ರಭುತ್ವ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಿದೆ ಎಂದರು.

ಪ್ರಜಾಪ್ರಭುತ್ವದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಳ್ಳಲಿದ್ದು, ಎಲ್ಲ ಶಾಲಾ ಶಿಕ್ಷಕರು ಅಗತ್ಯ ಮುಂಜಾಗ್ರತೆ ವಹಿಸಬೇಕು. ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಮಕ್ಕಳಿಗೆ ಮನೆಯಿಂದಲೇ ಕುಡಿಯುವ ನೀರು ತರುವಂತೆ ತಿಳಿಸಬೇಕು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಕುರಿತು ಪ್ರಮಾಣಪತ್ರಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದರು.

ಸೆ. ೧೫ರಂದು ಬೆಳಗ್ಗೆ ೯ ಗಂಟೆಯಿಂದ ೯.೩೦ರ ವರೆಗೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕು ಕುಮಾರಪಟ್ಟಣಂದಿಂದ -ಕವಲೆತ್ತು- ಚಳಗೇರಿ- ರಾಣಿಬೆನ್ನೂರು - ಗುಡ್ಡದಾನ್ವೇರಿ-ಕೆರಿಮಲ್ಲಾಪುರ- ಗುಡಿಹೊನ್ನತ್ತಿ -ಹಳೇಹೊನ್ನತ್ತಿ- ಮಾದಾಪುರ ತಿಮ್ಮಾಪುರ- ಗುತ್ತಲ- ನೆಗಳೂರು- ಮರೋಳ- ಹಾಲಗಿ ಮಾರ್ಗವಾಗಿ ಲಕ್ಷ್ಮೇಶ್ವರ ತಾಲೂಕು ಬಾಲೇಹೊಸೂರ ವರೆಗೆ ಅಂದಾಜು ೮೦ ಕಿ.ಮೀ. ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

ಈ ಮಾರ್ಗದಲ್ಲಿ ಶಾಲಾ-ಕಾಲೇಜುಗಳನ್ನು ಗುರುತಿಸಲಾಗಿದ್ದು, ಪ್ರತಿ ಒಂದು ಕಿ.ಮೀ.ಗೆ ಒಂದು ಸಾವಿರ ಜನರು ಬೇಕಾಗುತ್ತಾರೆ. ಹಾಗಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಜಿಲ್ಲೆಯ ಎಲ್ಲ ಸಂಘ-ಸಂಸ್ಥೆಗಳು, ಕನ್ನಡಪರ ಸಂಘಟನೆಗಳು, ರೈತಪರ ಸಂಘಟನೆಗಳು, ದಲಿತ ಸಂಘಟನೆಗಳು, ಸಹಕಾರಿ ಸಂಘಟನೆಗಳು, ಸ್ತ್ರೀ ಶಕ್ತಿ ಸಂಘಗಳ ಸದಸ್ಯರು, ಕಲಾವಿದರು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.

ಪ್ರತಿ ಎರಡೂವರೆ ಕಿ.ಮೀ.ಗೆ ಓರ್ವ ತಾಲೂಕು ಮಟ್ಟದ ನೋಡಲ್ ಅಧಿಕಾರಿ ಹಾಗೂ ಪ್ರತಿ ಐದು ಕಿ.ಮೀ.ಗೆ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಪ್ರತಿ ಅರ್ಧ ಕಿ.ಮೀ.ಗೆ ಓರ್ವ ಎ.ಎಸ್.ಐ. ಹೆಡ್ ಕಾನ್‌ಸ್ಟೆಬಲ್‌, ಕಾನ್‌ಸ್ಟೇಬಲ್‌ಗಳನ್ನು ಸೂಕ್ತ ಬಂದೋಬಸ್ತ್‌ಗೆ ನಿಯೋಜಿಸಲಾಗುವುದು. ಆರೋಗ್ಯ ಸಿಬ್ಬಂದಿ ಸಹ ನೇಮಕ ಮಾಡಲಾಗುವುದು ಎಂದರು.

ಸಭೆಯಲ್ಲಿ ತಹಸೀಲ್ದಾರ್ ಶರಣಮ್ಮ ಕಾರೆ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಮೃತಗೌಡ ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರಶಾಂತ ವರಗಪ್ಪನವರ, ಸಹಾಯಕ ನಿರ್ದೇಶಕ ಆಂಜನಪ್ಪ, ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.