ರಾಷ್ಟ್ರೀಯ ಡೆಂಘೀ ದಿನಾಚರಣೆ: ನಗರದಲ್ಲಿ ಜಾಗೃತಿ ಜಾಥಾ

| Published : May 17 2024, 12:32 AM IST / Updated: May 17 2024, 12:33 AM IST

ಸಾರಾಂಶ

ರಾಷ್ಟ್ರೀಯ ಡೆಂಘೀ ದಿನಾಚರಣೆ ಅಂಗವಾಗಿ ನಗರದಲ್ಲಿ ಜಾಗೃತಿ ಜಾಥಾ ಹಾಗೂ ನಗರದ ಹೃದಯ ಭಾಗದಲ್ಲಿರುವ ಪಚ್ಚಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸೊಳ್ಳೆ ಕಚ್ಚುವಿಕೆಯಿಂದ ಉಂಟಾಗುವ ಡೆಂಘೀ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಷ್ಟ್ರೀಯ ಡೆಂಘೀ ದಿನಾಚರಣೆ ಅಂಗವಾಗಿ ನಗರದಲ್ಲಿ ಜಾಗೃತಿ ಜಾಥಾ ಹಾಗೂ ನಗರದ ಹೃದಯ ಭಾಗದಲ್ಲಿರುವ ಪಚ್ಚಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸೊಳ್ಳೆ ಕಚ್ಚುವಿಕೆಯಿಂದ ಉಂಟಾಗುವ ಡೆಂಘೀ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಘಟಕದ ಸಹಯೋಗದಲ್ಲಿ ನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗದಿಂದ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ ಅವರು ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್. ಚಿದಂಬರ ಸೊಳ್ಳೆ ಕಚ್ಚುವಿಕೆಯಿಂದ ಹರಡುವ ಡೆಂಘೀ ಜ್ವರದ ಕುರಿತು ಜನರಿಗೆ ಅರಿವು ಮೂಡಿಸುವ ಮೂಲಕ ಸಾರ್ವಜನಿಕರ ರಕ್ಷಣೆಗೆ ಮುಂದಾಗಬೇಕು. ಈ ಜ್ವರಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಲಭ್ಯವಿಲ್ಲ. ಹಾಗಾಗಿ ರೋಗ ಬರದಂತೆ ತಡೆಯಬೇಕು. ಡೆಂಘೀ ನಿಯಂತ್ರಣ ಸರ್ಕಾರ ಅಥವಾ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ, ಅದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಎಲ್ಲರು ಸೇರಿ ಒಟ್ಟಾಗಿ ಡೆಂಘೀ ನಿಯಂತ್ರಣದಲ್ಲಿ ಭಾಗಿಯಾಗೋಣ ಎಂದರು.

ಹಗಲು ಹೊತ್ತಿನಲ್ಲಿ ಈಡಿಸ್ ಸೊಳ್ಳೆ ಕಚ್ಚುವಿಕೆಯಿಂದ ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು, ವಾಕರಿಕೆ, ವಾಂತಿಯಾಗುವುದು ಡೆಂಘೀ ಜ್ವರದ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು. ಡೆಂಘೀ ಉಲ್ಭಣದಿಂದ ದೇಹದ ಜೀವಕೋಶಗಳು ನಾಶವಾಗುತ್ತವೆ. ಡೆಂಘೀಯನ್ನು ರಕ್ತ ಪರೀಕ್ಷೆಯಿಂದ ಪತ್ತೆ ಹಚ್ಚಬಹುದು. ಡೆಂಘೀ ಪರೀಕ್ಷೆಯನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಡೆಂಘೀ ಕಾಯಿಲೆ ವರ್ಷ ಪೂರ್ತಿ ಕಾಣಿಸಿಕೊಂಡರೂ ಮೇ ಮಾಹೆಯಿಂದ ಅಕ್ಟೋಬರ್‌ವರೆಗೂ ಅಂದರೆ ಮಾನ್ಸೂನ್ ಸಮಯದಲ್ಲಿ ಹೆಚ್ಚಾಗಿ ಕಂಡುಬರಲಿದೆ. ಮನೆ ಸುತ್ತಲಿನ ಪರಿಸರದಲ್ಲಿ ನೀರು ನಿಲ್ಲದ ಹಾಗೇ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಮಲಗುವಾಗ ಸೊಳ್ಳೆಪರದೆ ಬಳಸಬೇಕು. ಹಗಲಿನ ವೇಳೆಯಲ್ಲಿ ಮೈತುಂಬ ಬಟ್ಟೆ ಧರಿಸಬೇಕು. ಮನೆಯಲ್ಲಿ ನೀರು ಶೇಖರಣೆಯನ್ನು ಪ್ರತಿ ಮೂರು ದಿನಕ್ಕೊಮ್ಮೆ ಖಾಲಿ ಮಾಡಿ ಹೊಸ ನೀರನ್ನು ತುಂಬಿಸಿಕೊಳ್ಳುವ ಮೂಲಕ ಸೊಳ್ಳೆಯಿಂದ ರಕ್ಷಣೆ ಪಡೆಯಬೇಕು. ಈ ಬಗ್ಗೆ ನಾವು ಇಡೀ ಸಮುದಾಯಕ್ಕೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ನಗರದ ಚಾಮರಾಜೇಶ್ವರ ದೇವಸ್ಥಾನದಿಂದ ಹೊರಟ ಜಾಥಾದಲ್ಲಿ ರಾಷ್ಟ್ರೀಯ ಡೆಂಘೀ ದಿನಾಚರಣೆಯ ಈ ಬಾರಿಯ ಸಮುದಾಯದೊಂದಿಗೆ ಸೇರಿ ಡೆಂಘೀ ಜ್ವರವನ್ನು ನಿಯಂತ್ರಿಸೋಣ’ ಘೋಷವಾಕ್ಯವನ್ನು ಜಾಥಾದಲ್ಲಿ ಮೊಳಗಿಸಲಾಯಿತು. ಜಾಥಾ ಪಚ್ಚಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅರಿವು ಮೂಡಿಸಿದ್ದು ನಾಗರಿಕರ ಗಮನ ಸೆಳೆಯಿತು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರಾಜೇಶ್‌ಕುಮಾರ್, ಆರೋಗ್ಯ ಮತ್ತು ಶಿಕ್ಷಣ ಅಧಿಕಾರಿ ದೊರೆಸ್ವಾಮಿ ನಾಯಕ್, ಆರೋಗ್ಯ ಮೇಲ್ವಿಚಾರಣ ಅಧಿಕಾರಿ ವೆಂಕಟೇಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ನಾರಾಯಣ್, ಸರ್ಕಾರಿ ನರ್ಸಿಂಗ್ ಕಾಲೇಜೀನ ವಿದ್ಯಾರ್ಥಿನಿಯರು, ಆಶಾ ಕಾರ್ಯಕರ್ತೆಯರು ಜಾಥಾ ಹಾಗೂ ಮಾನವ ಸರಪಳಿಯಲ್ಲಿ ಪಾಲ್ಗೊಂಡಿದ್ದರು.