ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಸಲ್ಲದು: ಡಿ.ಎಸ್‌.ಅರುಣ್‌

| Published : Jan 19 2024, 01:47 AM IST

ಸಾರಾಂಶ

ಎನ್‌ಇಪಿಯನ್ನು ರಾಜ್ಯ ಸರ್ಕಾರ ಕಡೆಗಣಿಸಿದರೆ, ಬಹುತೇಕ ಎಲ್ಲಾ ಖಾಸಗಿ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು, ಸಿಬಿಎಸ್‌ಇಗೆ ಬದಲಾವಣೆಯಾಗುತ್ತಾರೆ. ಬಡ ವಿದ್ಯಾರ್ಥಿಗಳ ಜ್ಞಾನ ದಾಹಕ್ಕೂ ಇದು ಕಂಠಕವಾಗುತ್ತದೆ ಎಂದು ಡಿ.ಎಸ್‌.ಅರುಣ್‌ ಪ್ರತಿಪಾದಿಸಿದರು.

- ಬಿಜೆಪಿ ತಂದ ಯೋಜನೆ ಎಂಬ ಕಾರಣಕ್ಕಾಗಿ ವಿರೋಧ: ಕನ್ನಡಪ್ರಭ ವಾರ್ತೆ ಶಿವಮೊಗ್ಗ ರಾಜ್ಯಸರ್ಕಾರ ಕೇವಲ ಬಿಜೆಪಿ ಸರ್ಕಾರ ತಂದ ಯೋಜನೆ ಎಂಬ ಕಾರಣಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡಲು ಹೊರಟಿದೆ ಎಂದು ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ಅರುಣ್‌ ಟೀಕಿಸಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಗೊಂದಲ ಮೂಡುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೆಲವು ಬೆಂಬಲಿಗರಾದ ಎಡಪಂಥಿಯರು ಕಾರಣ ಎಂದು ಆರೋಪಿಸಿದರು. ಎನ್‌ಇಪಿ ಎಂಬುವುದು ಹಲವು ಚರ್ಚೆಗಳ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ, ಪೋಷಕರ, ಸಾರ್ವಜನಿಕರ ಮತ್ತು ಚಿಂತಕರ, ಶಿಕ್ಷಣತಜ್ಞರ ಅಭಿಪ್ರಾಯದೊಂದಿಗೆ ಚರ್ಚಿಸಿ ಒಮ್ಮತದಿಂದ ಕೇಂದ್ರ ಸರ್ಕಾರ ಇದನ್ನು ಜಾರಿಗೆತಂದಿದೆ. ಆದರೆ, ರಾಜ್ಯ ಸರ್ಕಾರ ಕೇವಲ ಬಿಜೆಪಿ ಸರ್ಕಾರ ತಂದ ಯೋಜನೆ ಎಂಬ ಕಾರಣಕ್ಕಾಗಿ ಇದನ್ನು ರದ್ದುಮಾಡಲು ಹೊರಟಿದೆ ಎಂದು ಆರೋಪಿಸಿದರು.ಎನ್‌ಇಪಿ ಎಂಬುವುದು ಹೊಸದೇನಲ್ಲ, ಇದು ೧೯೬೮ರಲ್ಲಿಯೇ ಜಾರಿಗೆ ತರಲಾಗಿತ್ತು. ನಂತರ ೧೯೮೬ರಲ್ಲಿ ಅನುಮೋದನೆಗೊಂಡಿತ್ತು. ೧೯೯೨ರಲ್ಲಿ ಜಾರಿಗೆ ಬಂದಿತ್ತು. ಇದೆಲ್ಲವೂ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಅಳವಡಿಸಿದ್ದು, ಆದರೆ, ೨೦೨೦ರಲ್ಲಿ ಮೋದಿಜಿಯವರು ತಂದ ಯೋಜನೆ ಎಂಬ ಕಾರಣಕ್ಕಾಗಿ ವಿರೋಧ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನೆ ಮಾಡಿದರು.

ಕನ್ನಡ ಮತ್ತು ಕನ್ನಡ ಸಂಸ್ಕೃತಿಯ ಪರಿಚಯ ಮಕ್ಕಳಿಗೆ ಎನ್‌ಇಪಿಯಿಂದ ಸಾಧ್ಯವಿಲ್ಲ ಎಂದು ಹೇಳಿರುವುದು ಎಷ್ಟರಮಟ್ಟಿಗೆ ಸರಿ? ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಹೊಂದಿರುವ ಕನ್ನಡದವರೇ ಶಿಕ್ಷಣ ತಜ್ಞರು ಇರುವಾಗ ಹೊರಗಿನವರನ್ನು ಸರ್ಕಾರ ಗುರುತಿಸಿ ತಂದಿರುವುದು ಸರಿಯೇ ಎಂದು ಪ್ರಶ್ನೆ ಮಾಡಿದರು.

ಎನ್‌ಇಪಿಯನ್ನು ರಾಜ್ಯ ಸರ್ಕಾರ ಕಡೆಗಣಿಸಿದರೆ, ಬಹುತೇಕ ಎಲ್ಲಾ ಖಾಸಗಿ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು, ಸಿಬಿಎಸ್‌ಇಗೆ ಬದಲಾವಣೆಯಾಗುತ್ತಾರೆ. ಬಡ ವಿದ್ಯಾರ್ಥಿಗಳ ಜ್ಞಾನ ದಾಹಕ್ಕೂ ಇದು, ಕಂಠಕವಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎ.ಜೆ. ರಾಮಚಂದ್ರ, ಡಾ.ರವಿಕಿರಣ್, ಪ್ರವೀಣ್, ರಾಮಲಿಂಗಪ್ಪ, ಚಂದ್ರಶೇಖರ್, ಧರ್ಮಪ್ರಸಾದ್ ಇದ್ದರು.

ಸಹಿ ಸಂಗ್ರಹ ಅಭಿಯಾನ

ಈಗಾಗಲೇ ಪ್ರತಿ ಜಿಲ್ಲೆಯಲ್ಲೂ ನಮ್ಮ ವೇದಿಕೆ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದು, ಅಂದಾಜು 10 ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹವಾಗಿದೆ. ಇದರಲ್ಲಿ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳೂ ಇದ್ದಾರೆ. ಆದ್ದರಿಂದ ಎನ್‌ಇಪಿಯನ್ನು ಸರ್ಕಾರ ಯಾವುದೇ ಕಾರಣಕ್ಕೂ ರದ್ದುಪಡಿಸಬಾರದು ಎಂದು ಡಿ.ಎಸ್‌.ಅರುಣ್‌ ಒತ್ತಾಯಿಸಿದರು.