ಸಾರಾಂಶ
ರಾಷ್ಟ್ರೀಯ ರೈತರ ದಿನಾಚರಣೆ ಹಿನ್ನೆಲೆಯಲ್ಲಿ ಸಂಡೂರಿನ ಶ್ರೀಶೈಲ ವಿದ್ಯಾಕೇಂದ್ರದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೃಷಿ ಪಾಠ ಹೇಳಲಾಯಿತು.
ಸಂಡೂರು: ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಕನ್ನಡ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ರೈತರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಕೃಷಿ ಕಾರ್ಯದ ಪ್ರಾತ್ಯಕ್ಷಿಕೆ ಮೂಲಕ ಕೃಷಿ ಪಾಠವನ್ನು ತಿಳಿಸಿಕೊಡಲಾಯಿತು.
ರೈತರ ಬದುಕು, ಶ್ರಮದಿಂದ ಕೂಡಿದ ಜೀವನ ಶೈಲಿ, ಜಮೀನುಗಳಲ್ಲಿ ರೈತರು ಬೀಜವನ್ನು ಬಿತ್ತಿ, ಪೈರನ್ನು ಬೆಳೆಯುವ ರೀತಿಯನ್ನು ಪ್ರತ್ಯಕ್ಷ ದರ್ಶನ ಮಾಡಿಸುವ ನಿಟ್ಟಿನಲ್ಲಿ ಸಮೀಪದ ಭುಜಂಗ ನಗರದ ಪ್ರಗತಿಪರ ರೈತ ಎಚ್.ಕೆ. ಸುರೇಶ್ ಅವರ ಜಮೀನಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ರೈತ ತನ್ನ ಜಮೀನಿನಲ್ಲಿ ಕೈಗೊಳ್ಳುವ ಕೃಷಿ ಕಾರ್ಯಗಳನ್ನು, ಕೃಷಿ ಸಲಕರಣೆಗಳನ್ನು ಹಾಗೂ ಸಮಗ್ರ ಕೃಷಿ ಪದ್ಧತಿ ವಿವರಿಸಲಾಯಿತು. ರೈತ ಎಚ್.ಕೆ. ಸುರೇಶ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಇಂದಿನ ಯುವಕರು ಕೃಷಿಯಿಂದ ವಿಮುಖರಾಗುತ್ತಿರುವ ಈ ಸಂದರ್ಭದಲ್ಲಿ ಶಾಲೆಯ ಮುಖ್ಯಸ್ಥರು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಕೃಷಿ ಕುರಿತು ಆಸಕ್ತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.ಶಾಲೆಯ ಆವರಣದಲ್ಲಿ ರೈತ ಮಲ್ಲಿಕಾರ್ಜುನ ಅವರಿಂದ ಕೃಷಿ ಕಾರ್ಯಕ್ಕೆ ಬಳಸುವ ಎತ್ತಿನ ಗಾಡಿ ಹಾಗೂ ಕೃಷಿ ಉಪಕರಣಗಳ ಕುರಿತಾದ ಪ್ರಾತ್ಯಕ್ಷಿಕೆಯ ಆನಂತರ ರೈತ ದಿನಾಚರಣೆ ಪ್ರಯುಕ್ತ ಅವರನ್ನು ಸನ್ಮಾನಿಸಲಾಯಿತು.ವಿದ್ಯಾಕೇಂದ್ರದ ಮುಖ್ಯೋಪಾಧ್ಯಾಯ ಬಿ. ಲೋಕೇಶ್, ಬಸವನಗೌಡ ಟಿ.ಆರ್., ಮಂಜುನಾಥ್ ಬಣಕಾರ್, ರೂಪಾ ಸಿ.ಆರ್. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.