ಸಾರಾಂಶ
- ಜಿಲ್ಲಾ ಆಟದ ಮೈದಾನದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ । ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದ ಸಚಿವರು
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಮ್ಮ ಭಾರತದ ಜನತೆಗೆ ಸ್ವಾತಂತ್ರ್ಯ ದಿನಾಚರಣೆ ಎಂದರೆ ರಾಷ್ಟ್ರೀಯ ಹಬ್ಬದ ಗೌರವ, ಅಭಿಮಾನ. ಭಾರತೀಯರಾದ ನಾವು, ನಮ್ಮ ದೇಶದ ಬಗ್ಗೆ ಹೆಮ್ಮೆ ಪಡಲು ಮತ್ತು ದೇಶದ ಸುರಕ್ಷಿತ ಭವಿಷ್ಯ ರೂಪಿಸುವ ಸಂಕಲ್ಪಕ್ಕೆ ಸದಾವಕಾಶ ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಆಟದ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಆ ಕಾಲಘಟ್ಟದಲ್ಲಿ ಇಂದಿನಂತೆ ಯಾವುದೇ ರೀತಿಯ ತಂತ್ರಜ್ಞಾನ, ಸಾರಿಗೆ ವ್ಯವಸ್ಥೆ, ಮೂಲ ಸೌಲಭ್ಯಗಳಾದ ಶಿಕ್ಷಣ, ಆರೋಗ್ಯ, ಸಂವಹನ, ಸಾಮಾಜಿಕ ಜಾಲತಾಣಗಳು ಇಲ್ಲದಂತಹ ಸಂದರ್ಭದಲ್ಲಿ ಬ್ರಿಟೀಷರಿಂದ ನಮ್ಮ ದೇಶವನ್ನು ಸ್ವಾತಂತ್ರ್ಯಗೊಳಿಸುವುದಕ್ಕೆ ಜನರನ್ನು ಸಂಘಟಿಸುವುದು, ಮಾಹಿತಿ ರವಾನಿಸುವುದು, ಚಳುವಳಿಗೆ ಕರೆ ನೀಡುವುದು ಮುಂತಾದ ಸ್ವಾತಂತ್ರ್ಯ ಹೋರಾಟದ ಪೂರಕ ಕೆಲಸಗಳನ್ನು ನಮ್ಮ ದೇಶದ ಹಿರಿಯರು ಮಾಡಿದರು. ಇಂತಹ ಅಭೂತ ಪೂರ್ವ ಕಾರ್ಯದ ನಾಯಕತ್ವ ವಹಿಸಿದವರು ನಮ್ಮ ಹೆಮ್ಮೆಯ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಎಂದು ಹೇಳಿದರು.ನಮ್ಮ ಈ ಸ್ವಾತಂತ್ರ್ಯದ ಉಸಿರಿಗೆ ಹಲವು ರೀತಿ ಹೋರಾಟದ ಯಜ್ಞದಲ್ಲಿ ತಮ್ಮನ್ನು ತಾವೇ ಸಮರ್ಪಿಸಿಕೊಂಡ ಮಹನೀಯ ರಾದ ಮಹಾತ್ಮ ಗಾಂಧೀಜಿ, ಗೋಪಾಲ ಕೃಷ್ಣ ಗೋಖಲೆ, ಲಾಲ ಲಜಪತ್ ರಾಯ್, ಭಗತ್ ಸಿಂಗ್, ಅರವಿಂದ ಘೋಷ್, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಪಂಡಿತ್ ಜವಹರಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಡಾ.ಬಿ.ಆರ್.ಅಂಬೇಡ್ಕರ್, ಡಾ.ಮೌಲಾನಾ ಅಬ್ದುಲ್ ಕಲಾಂ ಆಜಾದ್, ಸುಭಾಷ್ ಚಂದ್ರ ಬೋಸ್, ಅನಿಬೆಸೆಂಟ್ ಇಂತಹ ಹಲವು ಮಹನೀಯರ ಜೊತೆಗೆ ಕರ್ನಾಟಕದ ಮಹನೀಯರುಗಳಾದ ಟಿ.ಸುಬ್ರಹ್ಮಣ್ಯಂ, ಕಾರ್ನಾಡ್ ಸದಾಶಿವ ರಾವ್, ಶ್ರೀನಿವಾಸರಾವ್ ಕೌಜಲಗಿ, ನಿಟ್ಟೂರು ಶ್ರೀನಿವಾಸ್ ರಾವ್ ಮೊದಲಾದವರ ತ್ಯಾಗ ಬಲಿದಾನಗಳ ಆದರ್ಶವೂ ಇರುತ್ತದೆ ಎಂದು ಹೇಳಿದರು. ಚಿಕ್ಕಮಗಳೂರು ಜಿಲ್ಲೆಯಲ್ಲೂ ಸಹ ಹಲವಾರು ಸ್ವಾತಂತ್ರ ಹೋರಾಟ ನಡೆದವು. ಅವುಗಳಲ್ಲಿ ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಟ, ವಿದೇಶಿ ವಸ್ತ್ರ ಹಾಗೂ ವಸ್ತುಗಳ ಬಹಿಷ್ಕಾರ. ಸ್ವದೇಶಿ ವಸ್ತುಗಳ ಬಳಕೆಗೆ ಪ್ರೋತ್ಸಾಹ, ಚರಕದಿಂದ ನೂಲು ತೆಗೆಯುವುದು, ಖಾದಿ ವಸ್ತ್ರ ಬಳಕೆ, ಕಾನೂನು ಭಂಗ ಚಳುವಳಿ ಇಂತಹ ಅನೇಕ ಹೋರಾಟ ಮೂಡಿ ಬಂದವು ಎಂದರು.
ಭಾರತ ಸ್ವಾತಂತ್ರ್ಯ ಅಭಿಯಾನದಲ್ಲಿ ಕಾಂಗ್ರೆಸ್‌ನ ಒಟ್ಟಾರೆ ಸಾಧನೆ ಅತ್ಯಂತ ಮಹತ್ವದ್ದು. ಅದೇ ರೀತಿಯಲ್ಲಿ ಭಾರತೀ ಯರಿಗೆ ಒಳ್ಳೆಯ ಆಡಳಿತದ ಸುಭದ್ರತೆ ನೀಡಬೇಕೆಂಬುದು ನಮ್ಮ ಕಾಂಗ್ರೆಸ್ ಪಕ್ಷದ ದೃಢ ಸಂಕಲ್ಪ. ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಅಳುಕಿಲ್ಲದೆ ನಿರ್ಭಯವಾಗಿ ಅತ್ಯಂತ ಸಮರ್ಪಕವಾಗಿ ಜಾರಿಗೆ ತಂದಿರುವುದು ಇಡೀ ದೇಶದಲ್ಲಿಯೇ ಮಾದರಿ ಎಂದರು.ಆರಕ್ಷಕ ಗೆಳತಿ:ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆಯಿಂದ ‘ಮನೆ ಮನೆ ಪೊಲೀಸ್’ ‘ಆರಕ್ಷಕ ಗೆಳತಿ’ ಮತ್ತು ‘ಮಾದಕ ವಸ್ತು ವಿರೋಧಿ ದಿನಾಚರಣೆ’ ಈ ಮೂರು ವಿನೂತನ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ಆರಕ್ಷಕ ಗೆಳತಿ ಕಾರ್ಯಕ್ರಮದಡಿ ಬಾಲಕಿಯರ ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿನಿಯರಿಗೆ ಕಾನೂನಿನ ಅರಿವು ಮೂಡಿಸಲು ಹಾಗೂ ಅವರ ಕುಂದುಕೊರತೆ ವಿಚಾರಿಸಿ ಪರಿಹರಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.ಜಿಲ್ಲೆಯ ಕಡೂರು ತಾಲೂಕು ವ್ಯಾಪ್ತಿಯಲ್ಲಿ 25 ಕೆರೆಗಳಿಗೆ ನೀರು ಪೂರೈಸುವ ಮದಗದ ಕೆರೆ ಮತ್ತು ಕಾಲುವೆಗಳ ಆಧುನೀಕರಣ ಕಾಮಗಾರಿಯನ್ನು ₹50 ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿಯಿಂದ ನೀಡಲಾಗಿದೆ. ಅನುಷ್ಠಾನಗೊಳಿಸಲು ಅನುಮೋದನೆ ಮುಂದುವರಿದು ಅಜ್ಜಂಪುರ ತಾಲೂಕು ಗಡಿರಂಗಾಪುರ ಮತ್ತು ಇತರೆ 19 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ₹48 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.ಭದ್ರಾ ಉಪ ಕಣಿವೆ ಯೋಜನೆಯಡಿ ಕಡೂರು ಮತ್ತು ಚಿಕ್ಕಮಗಳೂರು ತಾಲೂಕುಗಳ ಕೆರೆಗಳಿಗೆ ನೀರು ತುಂಬಿಸಲು₹407 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ಜಿಲ್ಲೆಯ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಒಟ್ಟು 89 ಕಾಮಗಾರಿಗಳಿಗೆ ₹150 ಕೋಟಿಗೆ ಅನುಮೋದನೆ ನೀಡಲಾಗಿದೆ. ಎನ್.ಆರ್.ಪುರ ಪಟ್ಟಣದ ರಸ್ತೆ ಅಭಿವೃದ್ಧಿಗಾಗಿ ₹60 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.
ಶಾಸಕ ಎಚ್.ಡಿ. ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಪ ಸದಸ್ಯ ಸಿ.ಟಿ. ರವಿ, ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಡಾ. ಅಂಶುಮಂತ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಯಾಜ್ ಅಹಮದ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಉಪಸ್ಥಿತರಿದ್ದರು.15 ಕೆಸಿಕೆಎಂ 3ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಶುಕ್ರವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರು ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಸಿಇಓ ಕೀರ್ತನಾ ಇದ್ದರು.
15 ಕೆಸಿಕೆಎಂ 4ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಥ ಸಂಚಲನ ನಡೆಯಿತು.