ಸಂವಿಧಾನ ಹಕ್ಕಿನ ಜತೆ ಕರ್ತವ್ಯವನ್ನೂ ನೀಡಿದೆ

| Published : Jan 28 2024, 01:16 AM IST

ಸಾರಾಂಶ

ಸಂವಿಧಾನದ ಆಶಯಗಳನ್ನು ಚಾಚೂತಪ್ಪದೇ ತಮ್ಮ ಆಡಳಿತದಲ್ಲಿ ಜಾರಿಗೊಳಿಸಿದ ಕೀರ್ತಿ ಹುಣಸೂರು ಮಣ್ಣಿನ ಮಗ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರಿಗೆ ಸಲ್ಲುತ್ತದೆ. ಸಂವಿಧಾನದ ಆಶಯದಂತೆ ಅಧಿಕಾರ ನಡೆಸಿದ ಅವರು, ಸಾಮಾಜಿಕ ನ್ಯಾಯ ನೀಡುವಲ್ಲಿ ಇಡೀ ದೇಶಕ್ಕೆ ಮಾದರಿಯಾದರು. ಹಾಗಾಗಿ ಸಂವಿಧಾನ ಪಾಲನೆ ನಮ್ಮ ಜೀವನದ ಪ್ರತಿ ಕ್ಷಣದಲ್ಲೂ ಆಗಲಿ

- ಶಾಸಕ ಜಿ.ಡಿ. ಹರೀಶ್ ಗೌಡ

- 75ನೇ ಗಣರಾಜ್ಯೋತ್ಸವ ಆಚರಣೆ

---

ಕನ್ನಡಪ್ರಭ ವಾರ್ತೆ ಹುಣಸೂರು

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಹುಣಸೂರು ಉಪವಿಭಾಗಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರಾ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಜಿ.ಡಿ. ಹರೀಶ್ ಗೌಡ, ವಿಶ್ವವೇ ಒಪ್ಪಿಕೊಂಡಿರುವ ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನದ ಜಾರಿಯ ದಿನ ಇದಾಗಿದ್ದು, ಸಂವಿಧಾನದ ಆಶಯಗಳಂತೆ ನಾವೆಲ್ಲರೂ ಬದುಕುತ್ತಿದ್ದೇವೆ. ಸಂವಿಧಾನ ನಮಗೆ ಹಕ್ಕನ್ನು ನೀಡಿದೆ. ಜೊತೆಯಲ್ಲಿ ಕರ್ತವ್ಯಗಳನ್ನೂ ಸೂಚಿಸಿದೆ.

ಸಂವಿಧಾನದ ಆಶಯಗಳನ್ನು ಚಾಚೂತಪ್ಪದೇ ತಮ್ಮ ಆಡಳಿತದಲ್ಲಿ ಜಾರಿಗೊಳಿಸಿದ ಕೀರ್ತಿ ಹುಣಸೂರು ಮಣ್ಣಿನ ಮಗ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರಿಗೆ ಸಲ್ಲುತ್ತದೆ. ಸಂವಿಧಾನದ ಆಶಯದಂತೆ ಅಧಿಕಾರ ನಡೆಸಿದ ಅವರು, ಸಾಮಾಜಿಕ ನ್ಯಾಯ ನೀಡುವಲ್ಲಿ ಇಡೀ ದೇಶಕ್ಕೆ ಮಾದರಿಯಾದರು. ಹಾಗಾಗಿ ಸಂವಿಧಾನ ಪಾಲನೆ ನಮ್ಮ ಜೀವನದ ಪ್ರತಿ ಕ್ಷಣದಲ್ಲೂ ಆಗಲಿ ಎಂದರು.

ಎಸಿ ಮಹಮದ್ ಹ್ಯಾರೀಸ್ ಸುಮೇರ ಮಾತನಾಡಿ, ಸುಸಂಸ್ಕೃತ ಮತ್ತು ಸಾಂಸ್ಕೃತಿಕ ದೇಶವನ್ನು ಕಟ್ಟುವ ಕಾಂರ್ವನ್ನು ನಾವೆಲ್ಲರೂ ಮಾಡೋಣ. ಕರ್ನಾಟಕ ವೈಶಿಷ್ಟ್ಯಮಯ ರಾಜ್ಯ. ಸರ್ಕಾರಗಳು ವಿವಿಧ ಜನೋಪಯೋಗಿ ಕಾರ್ಯಕ್ರಮ ನೀಡುತ್ತಿವೆ. ಮೊದಲು ನಮ್ಮ ಊರಿನ ಅಭಿವೃದ್ಧಿಯತ್ತ ನಾವು ದುಡಿದಲ್ಲಿ ನಮ್ಮ ಜಿಲ್ಲೆ, ರಾಜ್ಯ ಮತ್ತು ದೇಶ ಸಹಜವಾಗಿ ಅಭಿವೃದ್ಧಿ ಹೊಂದುವ ಮೂಲಕ ಭಾರತ ವಿಶ್ವಗುರುವಾಗುವಲ್ಲಿ ಯಾವುದೇ ಸಂಶಯವಿಲ್ಲ. ಯುವಸಮೂಹ ಇತ್ತ ಹೆಚ್ಚು ಗಮನಹರಿಸಲಿ ಎಂದು ಆಶಿಸಿದರು.

ಸಮಾರಂಭದಲ್ಲಿ ನಗರದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿಕೊಟ್ಟರು. ವಿವಿಧ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ಆಕರ್ಷಕವಾಗಿ ನರ್ತಿಸಿ ನೋಡುಗರ ಮನಗೆದ್ದರು. ಸಂವಿಧಾನದ ಮಹತ್ವನ್ನು ಸಾರುವ ನೃತ್ಯರೂಪಕ ಎಲ್ಲರ ಮೆಚ್ಚುಗೆ ಗಳಿಸಿತು.

ಸಮಾರಂಭದಲ್ಲಿ ತಹಸೀಲ್ದಾರ್ ಮಂಜುನಾಥ್, ಇಒ ಬಿ.ಕೆ. ಮನು, ನಗರಸಭಾ ಸದಸ್ಯರಾದ ಕೃಷ್ಣರಾಜ ಗುಪ್ತ, ಶರವಣ, ವಿವೇಕ್, ಬಿಇಒ ಎಸ್. ರೇವಣ್ಣ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಪಿ.ಆರ್. ರಾಚಪ್ಪ, ಎಸ್. ಜಯರಾಂ, ಸುಬ್ಬರಾವ್, ಭಾಸ್ಕರ್ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.