ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಿಳೆಯರು ವಚನ ಸಾಹಿತ್ಯ ಅಧ್ಯಯನ ಮಾಡಬೇಕಿದೆ. ವಚನ ಸಾಹಿತ್ಯ ಓದುವುದರಿಂದ ನೈತಿಕ ಹಾಗೂ ಆತ್ಮ ಬಲ ಹೆಚ್ಚುತ್ತದೆ ಎಂದು ಕೂಡಲಸಂಗಮ ಬಸವಧರ್ಮಪೀಠದ ಪೀಠಾಧ್ಯಕ್ಷೆ ಡಾ.ಗಂಗಾ ಮಾತಾಜಿ ಹೇಳಿದರು.ನಗರದ ನಾಗನೂರು ರುದ್ರಾಕ್ಷಿ ಮಠದ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಆಯೋಜಿಸಿದ ಎರಡು ದಿನಗಳ ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ ಸಮಾನತೆ ತಂದುಕೊಟ್ಟ ವಚನ ಸಾಹಿತ್ಯವನ್ನು ಮಹಿಳೆಯರು ಅಧ್ಯಯನ ಮಾಡುವ ಅಗತ್ಯವಿದೆ. ಒಬ್ಬ ಮಹಿಳೆಗೆ ಧಾರ್ಮಿಕ ಸಂಸ್ಕಾರ ಬಂದರೆ ಇಡೀ ಮನೆತನಕ್ಕೆ ಸಂಸ್ಕಾರ ಬಂದಂತೆ. ಹೀಗಾಗಿ ಮಹಿಳೆಯರು ಸಂಸ್ಕಾರವಂತರಾಗುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಹಿಂದೆಂದಿಗಿಂತ ಇಂದಿನ ದಿನಮಾನಗಳಲ್ಲಿ ಮಹಿಳೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಾಯಿಗೆ ಧಾರ್ಮಿಕ ಸಂಸ್ಕಾರ ಇದ್ದರೆ, ಆಕೆ ತನ್ನ ಮಕ್ಕಳಿಗೂ ಅದೇ ಸಂಸ್ಕಾರ ನೀಡುತ್ತಾಳೆ. ತನ್ಮೂಲಕ ಇಡೀ ಮನೆತನವನ್ನೇ ಆಕೆ ಸರಿಯಾದ ಮಾರ್ಗಕ್ಕೆ ಕೊಂಡೊಯ್ಯುವಲ್ಲಿ ಶಕ್ತಳಾಗುತ್ತಾಳೆ. ಧಾರ್ಮಿಕ ಸ್ವಾತಂತ್ರ್ಯ ಮತ್ತು ತತ್ವ ಸಿದ್ಧಾಂತಗಳ ಅರಿವು ಇಲ್ಲದಿದ್ದಲ್ಲಿ ಆಕೆ ತನ್ನ ಮಕ್ಕಳಿಗೆ ಏನು ಕೊಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಮಹಿಳೆಯ ಸ್ಥಾನ ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದರು.ಜಗತ್ತಿನಲ್ಲಿ ಪ್ರಪ್ರಥಮವಾಗಿ ಮಹಿಳೆಯೊಬ್ಬಳಿಗೆ ಜಗದ್ಗುರು ಸ್ಥಾನ ನೀಡಿ ಗೌರಿಸಿದ ಧರ್ಮ ಎಂದರೆ ಅದು ಲಿಂಗಾಯತ ಮಾತ್ರ. ಮಹಿಳೆಯನ್ನು ಕಸಕ್ಕಿಂತ ಕಡೆಯಾಗಿ ಕಾಣುತ್ತಿದ್ದ ಸಮಯದಲ್ಲಿ ಮಹಿಳೆಗೆ ತಮ್ಮ ಸರಿ ಸಮಾನವಾದ ಸ್ಥಾನಮಾನ ನೀಡಿ ಬೆಳೆಸಿದ ಬಸವಣ್ಣನ ಆದಿಯಾಗಿ ಸಮಸ್ತ ಶರಣರು ಹಾಕಿಕೊಟ್ಟ ಧರ್ಮ, ತತ್ವ ಸಿದ್ಧಾಂತ ಅರಿತು ಅವರ ಮಾರ್ಗದಲ್ಲಿ ನಡೆಯುವ ಮೂಲಕ ಅವರೆಲ್ಲರನ್ನು ಗೌರವಿಸಬೇಕು. ಐವತ್ತು ವರ್ಷಗಳ ಹಿಂದೆ ಕೂಡಲಸಂಗಮ ಬಸವ ಧರ್ಮ ಪೀಠದ ಜಗದ್ಗುರುವಾಗಿ ಮಾತೇ ಮಹದೇವಿಯವರನ್ನು ನೇಮಿಸಲ್ಪಟ್ಟಾಗ ಅದನ್ನು ಸಮಾಜ ಸುಲಭವಾಗಿ ಸ್ವೀಕರಿಸಲಿಲ್ಲ ಸವಾಲುಗಳ ಮತ್ತು ಕಷ್ಟಗಳನ್ನು ಅವರು ಎದುರಿಸಬೇಕಾಗಿತ್ತು, ಅದಕ್ಕೆಲ್ಲ ಧೈರ್ಯ ತುಂಬಿ ಬೆನ್ನೆಲುಬಾಗಿ ನಿಂತ ಲಿಂಗೈಕ್ಯ ಜಗದ್ಗುರು ಲಿಂಗಾನಂದ ಸ್ವಾಮಿಜಿಯವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು ಎಂದು ನುಡಿದರು.
ಸಮಾವೇಶ ಉದ್ಘಾಟಿಸಿದ ಗದಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಮಹಿಳೆಯರು ವೈದಿಕ ಧರ್ಮಾಚರಣೆ ನಿಲ್ಲಿಸಿ ಶರಣ ಧರ್ಮದ ಆಚರಣೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಲಿಂಗಾಯಿತ ಧರ್ಮದ ನಿಜ ಆಚರಣೆಗಳ ಬಗ್ಗೆ ತಿಳಿದುಕೊಳ್ಳಬೇಕು. ಅಲ್ಲದೆ ತಮ್ಮ ಮನೆಯ ಜನಕ್ಕೂ ಅವುಗಳನ್ನು ತಿಳಿಸುವ ಕಾರ್ಯ ಮಾಡಬೇಕು. ಲಿಂಗ ನಿಷ್ಠೆಯನ್ನು ಬೆಳೆಸಿಕೊಳ್ಳಬೇಕು. ಜಾತಿ, ಮತ, ಪಂಥ, ಲಿಂಗಭೇದ, ವರ್ಗ, ವರ್ಣಭೇದವೆನ್ನದೆ ಜಗತ್ತಿನಲ್ಲಿ ಮೊಟ್ಟ ಮೊದಲಿಗೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಜಾರಿಗೆ ತಂದವರು ಬಸವಣ್ಣನವರು. ಅವರ ಅನುಯಾಯಿಗಳು ಮೂಢನಂಬಿಕೆಯಿಂದ ಕೂಡಿರುವ ವೈದಿಕ ಆಚರಣೆಗೆ ಜೋತು ಬೀಳದೆ ಲಿಂಗಾಯತ ನಿಜಾಚರಣೆ ಅಳವಡಿಸಿಕೊಂಡು ಸಾಮಾಜಿಕ, ಧಾರ್ಮಿಕವಾಗಿ ಬೆಳಕಿಗೆ ಬರಬೇಕು ಎಂದರು.ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಆಡಿ ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ, ಓರ್ವ ಮಹಿಳೆ ಸಂಘಟಿತವಾದರೆ ಕೇವಲ ತಾಲೂಕು, ಜಿಲ್ಲೆ, ರಾಜ್ಯ ಮಾತ್ರವಲ್ಲ ಇಡೀ ಭಾರತವೇ ಸಂಘಟಿತವಾದಂತೆ ಎಂದರು. ಅಥಣಿ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ, ಭೂಮಿಯ ಮೇಲಿನ ಸಕಲ ಜೀವರಾಷಿಗಳಿಗೆ ಲೇಸನ್ನೆ ಬಯಸಿದ, ಹಾಮಾನವತಾವಾದಿ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರನ್ನಾಗಿ ಸರ್ಕಾರ ಘೋಷಿಸಿರುವುದು ಅಭಿನಂದನೀಯ ಎಂದರು.
ಜಾಗತಿಕ ಲಿಂಗಾಯತ ಮಹಾಸಭೆ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಮಾತನಾಡಿ, ಈಚೆಗೆ ಕೆಲವು ಮಠಾಧೀಶರು ಮೀಸಲಾತಿ ಹೆಸರಿನಲ್ಲಿ ಸಮಾಜವನ್ನು ಉಪಜಾತಿಗಳಾಗಿ ವಿಂಗಡಿಸಿ ಸಮಾಜ ಒಡೆಯುತ್ತಿರುವುದು ದುರಂತದ ಸಂಗತಿ ಎಂದರು. ಅತ್ತಿವೇರಿ ಬಸವಧಾಮದ ಬಸವೇಶ್ವರಿ ತಾಯಿಯವರು ಹೆಣ್ಣಿಗೆ ಸರ್ವ ಸಮಾನವಾದ ಸಮಾನತೆಯ ಸ್ಥಾನಮಾನ ನೀಡಿದ್ದು ಲಿಂಗಾಯತ ಧರ್ಮ. ಹೆಣ್ಣು ಮಕ್ಕಳು ಮೂಢನಂಬಿಕೆಗೆ ಜೋತು ಬೀಳದೆ ವೈಜ್ಞಾನಿಕವಾಗಿ ಆಲೋಚಿಸಿ ಬಸವ ಆಶಯದಂತೆ ಬದುಕಬೇಕು ಎಂದರು.ಸಮಾರಂಭಕ್ಕೂ ಮುಂಚೆ ಶ್ರೀನಗರದ ಉದ್ಯಾನವನದಿಂದ ಪ್ರಾರಂಭವಾಗಿ ಶಿವಬಸವ ನಗರದ ಲಿಂಗಾಯತ ಭವನ, ಕೆಇಬಿ ಮಾರ್ಗದ ಮೂಲಕ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ವರೆಗೆ ಸರ್ವಾಧ್ಯಕ್ಷರ ವೈಭವದ ಮೆರವಣಿಗೆ ಜರುಗಿತು. ಮೆರವಣಿಗೆಗೆ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಚಾಲನೆ ನೀಡಿದರು. ಪ್ರೇಮಾ ಅಂಗಡಿ, ಗೌರಿ ಕರ್ಕಿ ನಿರೂಪಿಸಿದರು. ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಸ್ವಾಗತಿಸಿದರು. ಪ್ರಭಾ ಪಾಟೀಲ ವಂದಿಸಿದರು.