ನ್ಯಾಷನಲ್‌ ಹೆರಾಲ್ಡ್‌ : ಕಾಂಗ್ರೆಸ್‌ ನಾಯಕರನ್ನ ಅನರ್ಹಗೊಳಿಸಲು ಬಿಜೆಪಿ ಆಗ್ರಹ

| Published : Apr 18 2025, 12:39 AM IST

ನ್ಯಾಷನಲ್‌ ಹೆರಾಲ್ಡ್‌ : ಕಾಂಗ್ರೆಸ್‌ ನಾಯಕರನ್ನ ಅನರ್ಹಗೊಳಿಸಲು ಬಿಜೆಪಿ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಸಿಲುಕಿರುವ ಕಾಂಗ್ರೆಸ್ ನಾಯಕರ ಸಂಸತ್ ಸ್ಥಾನವನ್ನು ಅನರ್ಹಗೊಳಿಸಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಚಿಕ್ಕಮಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ,

ಕನ್ನಡಪ್ರಭವಾರ್ತೆ ಚಿಕ್ಕಮಗಳೂರು

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಸಿಲುಕಿರುವ ಕಾಂಗ್ರೆಸ್ ನಾಯಕರ ಸಂಸತ್ ಸ್ಥಾನವನ್ನು ಅನರ್ಹಗೊಳಿಸಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಬಿಜೆಪಿ ಯುವ ಮೋರ್ಚಾದ ನೇತೃತ್ವದಲ್ಲಿ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸಂತೋಷ್‌ ಕೋಟ್ಯಾನ್‌, ಗಾಂಧೀಜಿ ಹೆಸರಿನ ಅಧಿಕಾರ ನಡೆಸುತ್ತಿರುವ ನಕಲಿ ಗಾಂಧಿಗಳ ಕುಟುಂಬ ದೇಶವನ್ನು ಲೂಟಿ ಮಾಡಿದೆ. ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ಪರಿಶ್ರಮದ ನ್ಯಾಷನಲ್‌ ಹೆರಾಲ್ಡ್ ಸಂಸ್ಥೆ, ಇದು, ಕೇವಲ ಐದು ಜನರ ಕೈಯಲ್ಲಿರುವುದು ದುರ್ಧೈವದ ಸಂಗತಿ ಎಂದು ಆರೋಪಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಮುಖವಾಣಿಯಾಗಿ ಕಾರ್ಯನಿರ್ವಹಿಸಿದ ಸಂಸ್ಥೆ ಇಂದು ನಕಲಿ ಗಾಂಧಿಗಳ ಕುಟುಂಬದಲ್ಲಿ ಸಿಲುಕಿ ಭಾರೀ ಭ್ರಷ್ಟಾಚಾರ ನಡೆಸಿದೆ. 2014 ರಲ್ಲಿ ನ್ಯಾ.ಸುಬ್ರಹ್ಮಣ್ಯಸ್ವಾಮಿ ದಾಖಲಿಸಿದ ಪ್ರಕರಣದಲ್ಲಿ ಸೋನಿಯಾಗಾಂಧಿ, ರಾಹುಲ್‌ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಹಲವು ಮಂದಿ ಭ್ರಷ್ಟಾಚಾರ ಶಾಮೀಲಾಗಿ ದ್ದರೆಂದು ಆರೋಪಿಸಲಾಗಿತ್ತು.

ಕಾಂಗ್ರೆಸ್ ನಾಯಕರು ರಾಷ್ಟ್ರದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಂವಿಧಾನಕ್ಕೆ ಅವಮಾನಿಸಿದ್ದಾರೆ. ಸತ್ಯ ಬಯಲಿ ಗೆಳೆಯಲು ಕೇಂದ್ರ ಸರ್ಕಾರ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದಾಗ ಕೆಲವು ನಕಲಿ ಗೂಂಡಾಗಳನ್ನು ಕಾಂಗ್ರೆಸ್ ನಾಯಕರು ಬಳಸಿಕೊಂಡು ಇಡಿ ಕಚೇರಿ ಮುಂಭಾಗ ಪ್ರತಿಭಟನೆ ನಾಟಕವಾಡಿ ದೇಶದ ಜನತೆಗೆ ಮಂಕುಬೂದಿ ಎರಚು ತ್ತಿದ್ದಾರೆ ಎಂದು ದೂರಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರು ಇಡಿ ಹಾಗೂ ಐಟಿ ಸಂಸ್ಥೆಗಳು ಆರ್‌ಎಸ್‌ಎಸ್ ಕಚೇರಿ ಮೇಲೆ ಏಕೆ ದಾಳಿ ನಡೆಸುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಸ್ತುತ ಕಚೇರಿ ಕೋಟ್ಯಾಂತರ ಸ್ವಯಂ ಸೇವಕರ ಬೆವರಿನ ಹಣದಿಂದ ಕಟ್ಟಿದೆ ಹೊರತು ನಗರದಲ್ಲಿ ನಿರ್ಮಾಣವಾಗುತ್ತಿರುವ ಕಾಂಗ್ರೆಸ್ ನೂತನ ಕಚೇರಿಯಂಥಲ್ಲ ಎಂದು ಲೇವಡಿ ಮಾಡಿದರು.

ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಬಿಜೆಪಿ ವಿನಾಕಾರಣ ಕಾಂಗ್ರೆಸ್ ಮೇಲೆ ಸುಳ್ಳು ಆರೋಪ ವೆಸಗಲ್ಲ. ಸತ್ಯಾಸತ್ಯತೆ ಅರಿತು ದೂರುತ್ತಿದೆ. ಈ ಬಾರಿ ನ್ಯಾಷನಲ್ ಹೆರಾಲ್ಡ್‌ನ ಅಕ್ರಮ ಹಣ ವರ್ಗಾವಣೆ ಖಚಿತತೆ ಅರಿತು ಆರೋಪ ಮಾಡಿದೆ. ಅಲ್ಲದೇ ಪತ್ರಿಕೆಯ ಮೂಲ ವಾರಸುದಾರರಿಗೂ ನೆರವು ನೀಡದೇ ಸಂಪೂರ್ಣ ಲೂಟಿವೆಸಗಿದೆ ಎಂದು ದೂರಿದರು.

ಬಿಜೆಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್ ಮಾತನಾಡಿ, 1938 ರಲ್ಲಿ ಪ್ರಾರಂಭವಾಗಿ ಹಾಲಿ ₹2500 ಕೋಟಿ ಒಡೆತನದ ನ್ಯಾಷನಲ್‌ ಹೆರಾಲ್ಡ್ ಪತ್ರಿಕೆಯನ್ನು ಕೇವಲ ₹50 ಲಕ್ಷ ಗಳಿಗೆ ಖರೀದಿಸಿ ಭಾರೀ ಭ್ರಷ್ಟಾಚಾರ ಎಸಗಿರುವ ಆರೋಪ ಸೋನಿಯಾ, ರಾಹುಲ್‌ ಮೇಲಿದೆ, ಈ ಬಗ್ಗೆ ಇ.ಡಿ. ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಈರ್ವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಅಂಕಿತಾ, ಕಾರ್ಯದರ್ಶಿಗಳಾದ ರಾಜೇಶ್, ಶಶಿ ಆಲ್ದೂರು, ಪ್ರಧಾನ ಕಾರ್ಯದರ್ಶಿ ಸಚಿನ್‌ಗೌಡ, ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಜೀವನ್ ಕೋಟೆ, ಗ್ರಾಮಾಂತರ ಮಂಡಲ ಅಧ್ಯಕ್ಷ ಪುನೀತ್, ನಗರಸಭೆ ಸದಸ್ಯರಾದ ಮಧುಕುಮಾರ್ ಅರಸ್, ರೂಪ, ಓಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ಕಬೀರ್, ಕೌಶಿಕ್, ಓಂಕಾರೇಗೌಡ, ಪ್ರದೀಪ್, ಎಸ್‌ಡಿಎಂ ಮಂಜು, ಅನ್ವರ್, ಚೈತ್ರಗೌಡ, ಮಂಜುನಾಥ್ ಸಂಗೀತ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. 17 ಕೆಸಿಕೆಎಂ 1ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಸಿಲುಕಿರುವ ಕಾಂಗ್ರೆಸ್ ನಾಯಕರ ಸಂಸತ್ ಸ್ಥಾನವನ್ನು ಅನರ್ಹಗೊಳಿಸಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಚಿಕ್ಕಮಗಳೂರಿನಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.