ಸಾರಾಂಶ
ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು (ಐಐಎಚ್‌ಆರ್) ‘ಸುಸ್ಥಿರ ಅಭಿವೃದ್ಧಿಗಾಗಿ ನವೀನ ಪೀಳಿಗೆಯ ತೋಟಗಾರಿಕೆ ತಂತ್ರಜ್ಞಾನಗಳು’ ಶೀರ್ಷಿಕೆಯಡಿ ಮಾ.5ರಿಂದ 7ರವರೆಗೆ ರಾಷ್ಟ್ರೀಯ ತೋಟಗಾರಿಕೆ ಮೇಳವನ್ನು ಆಯೋಜಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು (ಐಐಎಚ್‌ಆರ್) ‘ಸುಸ್ಥಿರ ಅಭಿವೃದ್ಧಿಗಾಗಿ ನವೀನ ಪೀಳಿಗೆಯ ತೋಟಗಾರಿಕೆ ತಂತ್ರಜ್ಞಾನಗಳು’ ಶೀರ್ಷಿಕೆಯಡಿ ಮಾ.5ರಿಂದ 7ರವರೆಗೆ ರಾಷ್ಟ್ರೀಯ ತೋಟಗಾರಿಕೆ ಮೇಳವನ್ನು ಆಯೋಜಿಸಿದೆ.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಸ್ಥೆ ಪ್ರಭಾರ ನಿರ್ದೇಶಕ ಡಾ। ಪ್ರಕಾಶ್ ಪಾಟೀಲ್, ಮೇಳದಲ್ಲಿ ಬಿಇಎಲ್ ಸಂಸ್ಥೆಯ ಡ್ರೋನ್, ಅಧಿಕ ಇಳುವರಿ ಕೊಡುವ ‘ಅರ್ಕಾ ನಿಹಿರ’ ಮೆಣಸಿನಕಾಯಿ ತಳಿ ಐಐಎಚ್‍ಆರ್ ಅಭಿವೃದ್ಧಿಪಡಿಸಿರುವ ಈರುಳ್ಳಿ ನಾಟಿ ಮಾಡುವ ಯಂತ್ರ, ಯುವಿಬಿ ಲೈಟ್ ಅಡಿಯಲ್ಲಿ ಆವಿಷ್ಕರಿಸಿದ ಅಣಬೆಗಳ ವಿಟಮಿನ್ ಡಿ ಪುಷ್ಟೀಕರಣ ತಂತ್ರಜ್ಞಾನ ಸೇರಿದಂತೆ ನಾನಾ ವಿಶೇಷಗಳು ಇರಲಿವೆ ಎಂದರು.
ಮೇಳಕ್ಕೆ ಮಾ.5ರಂದು ಬೆಳಗ್ಗೆ 10ಕ್ಕೆ ಚಾಲನೆ ನೀಡಲಾಗುವುದು. ಈ ಬಾರಿ ದೇಶದ 50 ಸಾವಿರಕ್ಕೂ ಹೆಚ್ಚು ರೈತರು ಆಗಮಿಸುವರು. 350 ಮಳಿಗೆಗಳನ್ನು ತೆರೆಯಲಾಗುತ್ತಿದೆ. ಮೇಳಕ್ಕೆ ಬರುವ ರೈತರಿಗೆ ಊಟ, ವಸತಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.ಹೊಸ ತಂತ್ರಜ್ಞಾನಗಳು:
ಅರ್ಕಾ ಲಂಬ ಮಾದರಿ, ಅರ್ಕಾ ಕತ್ತರಿಸಿದ ತಾಜಾ ಹಣ್ಣುಗಳ ತಂತ್ರಜ್ಞಾನ, ಅರ್ಕಾ ಭೃಂಗರಾಜ್ ಸೊರಗು ರೋಗ ನಿರೋಧಕ ತಳಿ ಇತ್ಯಾದಿಗಳು ರೈತರಿಗೆ ಉಪಯುಕ್ತರ ತಂತ್ರಜ್ಞಾನಗಳಾಗಿವೆ. ಸ್ಮಾರ್ಟ್ ನೀರಾವರಿ, ನಿಯಂತ್ರಿತ ಪರಿಸರ ಕೃಷಿ, ಸಸ್ಯ ಆರೋಗ್ಯ ಕ್ಲಿನಿಕ್, ಸಸಿಗಳ ಖರೀದಿಗಾಗಿ ಮಾಲ್ ಮಾದರಿಯ ನರ್ಸರಿಗಳು ಮೇಳದಲ್ಲಿ ಗಮನ ಸೆಳೆಯಲಿವೆ.ಆನ್‌ಲೈನ್ ನೋಂದಣಿ
ಮೇಳದಲ್ಲಿ ಮಾರಾಟ ಮಳಿಗೆ ತೆರೆಯಲು ಈ ಬಾರಿ ಆನ್‍ಲೈನ್‍ನಲ್ಲೇ ನೋಂದಣಿ ಆರಂಭಿಸಲಾಗಿದೆ. ವೆಬ್‌ಸೈಟ್: http://nhf2024.in ಮೂಲಕ ಮಳಿಗೆಗಳಿಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮೇಳಕ್ಕೆ ಬರುವ ರೈತರಿಗೆ ಮಾಹಿತಿ ಪಡೆಯಲು ಸಹಾಯವಾಣಿ (94038 91704) ತೆರೆಯಲಾಗಿದೆ ಎಂದು ಐಐಎಚ್‍ಆರ್ ಪ್ರಧಾನ ವಿಜ್ಞಾನಿ ನಂದೀಶ್ ತಿಳಿಸಿದರು.ಡ್ರ್ಯಾಗನ್ ಫ್ರೂಟ್-ಸಿರಿಧಾನ್ಯ ಜ್ಯೂಸ್
ಐಐಎಚ್‍ಆರ್‌ನವರು ಇದೇ ಮೊದಲ ಬಾರಿಗೆ ಡ್ರ್ಯಾಗನ್ ಫ್ರೂಟ್‍ಗೆ ಸಿರಿಧಾನ್ಯಗಳನ್ನು ಮಿಶ್ರಣ ಮಾಡಿ ಜ್ಯೂಸ್ ತಯಾರಿಸುವ ತಂತ್ರಜ್ಞಾನವನ್ನು ಪರಿಚಯಿಸಿದ್ದಾರೆ. ಇದರಿಂದ ಡ್ರ್ಯಾಗನ್ ಹಣ್ಣುಗಳಿಗೆ ವಿಶೇಷ ಮಾರುಕಟ್ಟೆ ಸೌಲಭ್ಯವೂ ಸಿಗಲಿದೆ ಎನ್ನುತ್ತಾರೆ ಧನಂಜಯ.