ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಡೇ-ಎನ್.ಆರ್.ಎಲ್.ಎಂ ಯೋಜನೆಯಡಿ ಉತ್ತಮ ಸಾಧನೆ ಮಾಡಿದ ಕಟಗೇರಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ ರಾಷ್ಟ್ರಮಟ್ಟದಲ್ಲಿ ಆತ್ಮ ನಿರ್ಭರ್ ಸಂಘಟನಾ ಪ್ರಶಸ್ತಿಗೆ ಭಾಜನವಾಗಿದೆ.ಬಾಗಲಕೋಟೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರ ನಿರಂತರ ಮಾರ್ಗದರ್ಶನ, ಸಲಹೆ ಹಾಗೂ ಪ್ರೋತ್ಸಾಹದ ಪರಿಣಾಮ ಕರ್ನಾಟಕದಿಂದ ಗುಳೇದಗುಡ್ಡ ತಾಲೂಕಿನ ಕಟಗೇರಿ ಗ್ರಾಮ ಪಂಚಾಯತಿಯ ಚಾಮುಂಡೇಶ್ವರಿ ಸಂಜೀವಿನಿ ಮಹಿಳಾ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಕ್ಕೆ 2024ನೇ ಸಾಲಿನ ಉತ್ತಮ ಒಕ್ಕೂಟದ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಆತ್ಮನಿರ್ಭರ್ ಸಂಘಟನಾ ಪ್ರಶಸ್ತಿ ಲಭಿಸಿದೆ. ಚಾಮುಂಡೇಶ್ವರಿ ಕಟಗೇರಿ ಗ್ರಾಮ ಪಂಚಾಯತಿ ಒಕ್ಕೂಟದ ಅಡಿಯಲ್ಲಿ 1400 ಕುಟುಂಬಗಳನ್ನು ಸಂಘಟಿಸಿ 112 ಸ್ವ-ಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಈ ಒಕ್ಕೂಟದ ಮಹಿಳೆಯರು ಯೋಜನೆಯಡಿ ಜಿಪಂನಿಂದ ಸ್ವ-ಉದ್ಯೋಗ ಕೌಶಲ್ಯ ತರಬೇತಿ ಪಡೆದುಕೊಂಡು ಸುತ್ತುನಿಧಿ, ಸಮುದಾಯ ಬಂಡವಾಳ ನಿಧಿ, ದುರ್ಬಲ ವರ್ಗದವರ ನಿಧಿ ಹಾಗೂ ಕಾರ್ಯಸಾಧ್ಯತಾ ಅಂತರ ನಿಧಿ ಸೇರಿ ಒಟ್ಟು ₹25 ಲಕ್ಷ ಅನುದಾನ ಹಾಗೂ ಬ್ಯಾಂಕ್ ಲಿಂಕೇಜ್ ಮೂಲಕ ಸಾಲ ಸೌಲಭ್ಯ ಪಡೆದುಕೊಂಡು ವಿವಿಧ ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಗ್ರಾಮ ಪಂಚಾಯತಿಯಲ್ಲಿ ಘನತಾಜ್ಯ ನಿರ್ವಹಣೆಯನ್ನು ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಮಹಿಳೆಯರು ಗ್ರಾಮದಲ್ಲಿ ಸಾಮಾಜಿಕ ಚಟುವಟಿಕೆಗಳಾದ ಲಿಂಗತ್ವ, ಪೋಷಣೆ ಹಾಗೂ ಪರಿವರ್ತನೆ ಅಭಿಯಾನ ಮೂಲಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಎಲ್ಲಾ ಕಾರ್ಯಚಟುವಟಿಕೆಗಳಿಂದ ರಾಷ್ಟ್ರಮಟ್ಟದ ಉತ್ತಮ ಸಂಘಟನಾ ಪ್ರಥಮ ಪ್ರಶಸ್ತಿ ದೊರೆತಿದೆ.ಪ್ರಶಸ್ತಿಯನ್ನು ಆಗಸ್ಟ್ 15ರ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.