ಕಣ್ಮನ ಸೆಳೆದ ಹೊನಲುಬೆಳಕಿನ ರಾಷ್ಟ್ರಮಟ್ಟದ ಕುಸ್ತಿಗಳು

| Published : Jan 20 2024, 02:02 AM IST

ಸಾರಾಂಶ

ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ರಾಯಣ್ಣ ಉತ್ಸವದ ಅಂಗವಾಗಿ ಸಂಗೊಳ್ಳಿಯಲ್ಲಿ ಪುರುಷರ ರಾಷ್ಟ್ರಮಟ್ಟದ ಜಂಗೀ ನಿಖಾಲಿ ಕುಸ್ತಿಯಲ್ಲಿ ವಿಶಾಲ ಡೋಲು ವಿಜಯಶಾಲಿಯಾದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಳಗಾವಿ ಆಶ್ರಯದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2024ರ ತಾಲೂಕಿನ ಸಂಗೊಳ್ಳಿ ಗ್ರಾಮದ ಗ್ರಾ.ಪಂ.ಆವರಣದಲ್ಲಿ ನಡೆದ ಪುರುಷರ ಮತ್ತು ಮಹಿಳೆಯರ ಹೊನಲುಬೆಳಕಿನ ರಾಷ್ಟ್ರ ಮಟ್ಟದ ಜಂಗೀ ನಿಖಾಲಿ ಕುಸ್ತಿಗಳು ಸಹಸ್ರಾರು ಕುಸ್ತಿಪ್ರೇಮಿಗಳ ಮಧ್ಯೆ ಅದ್ಧೂರಿಯಾಗಿ ಜರುಗಿ, ನೋಡುಗರ ಮೈರೋಮಾಂಚನಗೊಳಿಸಿತು.

ಗ್ರಾ.ಪಂ.ಆವರಣದಲ್ಲಿ ಕುಸ್ತಿಕಣವನ್ನು ಕೆಂಪು ಮಣ್ಣಿನಿಂದ ಕೂಡಿದ ಮೈದಾನವನ್ನು ಹೂವಿನ ಅಲಂಕಾರದಿಂದ ಶೃಂಗರಿಸಲಾಗಿತ್ತು. ಪೈಲ್ವಾನರನ್ನು ಪ್ರೇಕ್ಷಕರು ಹುರುದುಂಬಿಸಿದರು. ಕುಸ್ತಿಪಟುಗಳು ವಿಜೇತರಾಗುತ್ತಿದ್ದಂತೆ ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಪ್ರೋತ್ಸಾಹಿಸಿದರು. ವಿಜಯಪುರ ಭೂತನಾಳ ತಾಂಡಾದ ಅಶೋಕ ವಾಲಿಕರ ತಂಡದ ಹಲಿಗೆ ವಾದನ ಕುಸ್ತಿ ಪಟುಗಳಿಗೆ, ಪ್ರೇಕ್ಷಕರಿಗೆ ಹುಮಸ್ಸು ನೀಡಿತ್ತು. ಒಟ್ಟು 30ಕ್ಕೂ ಹೆಚ್ಚು ಜೋಡಿ ಕುಸ್ತಿ ಪಟುಗಳು ಭಾಗವಹಿಸಿದ್ದರು.

ಪುರುಷ ವಿಭಾಗ: ಮಹಾರಾಷ್ಟ್ರ ಮಹಾನ್ ಭಾರತ ಕೇಸರಿ ಪೈ.ಜ್ಞಾನೇಶ್ವರ (ಮೌಳಿ) ಜಮದಾಳೆ ಜೊತೆ ಸೆಣಸಿದ ಹರಿಯಾಣದ ರಾಷ್ಟ್ರೀಯ ಮಟ್ಟದ ಪದಕ ವಿಜೇತ ಕುಸ್ತಿಪಟು ವಿಶಾಲ ಡೊಲು ಇವರು ಪ್ರಂಟ್ ಜೀಸಾ ಡಾವ್ ಪೇಚ್ ಮೂಲಕ ವಿಜಯದ ನಗೆ ಬೀರಿದರು. ದೆಹಲಿ ಪೈ.ಸಚಿನ ಕುಮಾರ ಜೊತೆ ರಾಣೆಬೆನ್ನೂರಿನ ಕರ್ನಾಟಕ ಕೇಸರಿ ಪೈ.ಕಾರ್ತಿಕ ಕಾಟೆ ಸೆಣಸಾಟದ ಕುಸ್ತಿಯಲ್ಲಿ ಕಾಟೆ ಇವರು ಏಕ ಲಂಗೀ ಡಾಂಗ್ ಮೂಲಕ ವಿಜಯ ಪತಾಕೆ ಹಾರಿಸಿದರು. ಧಾರವಾಡದ ಕರ್ನಾಟಕ ಕೇಸರಿ ಪೈ.ನಾಗರಾಜ ಬಸಿಡೋಣಿ ಇವರು ಏಕ ಚಕ್ಕ್ ಡಾವ್ ಪೇಚ್ ಮೂಲಕ ಹರಿಯಾಣದ ಪೈ.ಉದಯ ಸೋಲುಣಿಸಿದರು. ಕಲಬುರಗಿಯ ಪೈ.ಪ್ರವೀಣ ಹಿಪ್ಪರಗಿ ಜೊತೆ ಸೆಣಸಿದ ಮಹಾರಾಷ್ಟ್ರದ ಪೈ.ಪ್ರಣಿತ್ ಭೋಸಲೆ ಸೋಲುಂಡರು.

ದಾವಣೆಗೆರೆಯ ಪೈ.ಬಸವರಾಜ ಹುದಲಿ ಜೊತೆ ಸೆಣಸಿದ ಸೊಲ್ಲಾಪೂರದ ಪೈ.ಸಾಗರ ಚೌಗಲೆ ವಿಜಯ ಪತಾಕೆ ಹಾರಿಸಿದರು. ಅಥಣಿಯ ಪೈ.ಮಹೇಶಕುಮಾರ ಲಂಗೋಟಿ ಜೊತೆ ಮಹಾರಾಷ್ಟ್ರದ ಪೈ.ಚೇತನ ಕತಗಾರ ಸೋಲುಂಡರು.

ಮಹಿಳಾ ವಿಭಾಗ: ದಸರಾ ಕಿಶೋರಿ ಹಳಿಯಾಳದ ಪೈ.ಪ್ರಿನ್ಸಟ್ ಸಿದ್ಧಿ ಜೊತೆ ಮಹಾರಾಷ್ಟ್ರ ರಾಷ್ಟ್ರೀಯ ಪದಕ ವಿಜೇತ ಕುಸ್ತಿ ಪಟು ಪೈ.ದೀಪಾಲಿ ಇವರ ನಡುವೆ ನಡೆದ ಕುಸ್ತಿಗಳು ಸಮಬಲಗೊಂಡವು. ಹಲಗಾ ರಾಷ್ಟ್ರೀಯ ಪದಕ ವಿಜೇತೆ ಪೈ.ಲಕ್ಷ್ಮೀ ಪಾಟೀಲ ಜೊತೆ ಮಹಾರಾಷ್ಟ್ರದ ರಾಷ್ಟ್ರೀಯ ಪದಕ ವಿಜೇತೆ ಪೈ.ಸಾಧನಾ ಕಾಟ್ಕರ ಇವರ ನಡುವೆ ನಡೆದ ಕುಸ್ತಿಗಳು ಸಮಬಲಗೊಂಡವು.

ಬಾಗಲಕೋಟೆಯ ಪೈ.ಕಾವೇರಿ ಯಾಡಹಳ್ಳಿ ಜೊತೆ ಗದಗದ ಪೈ.ಭುವನೇಶ್ವರಿ ನಗೆ ವಿಜಯದ ಪತಾಕೆ ಹಾರಿಸಿದರು. ಬೆಳಗಾವಿಯ ಪೈ.ಭಾಗ್ಯಶ್ರೀ ಜೊತೆ ಗದಗದ ಪೈ.ವೈಷ್ಣವಿ ನಡುವೆ ನಡೆದ ಕುಸ್ತಿ ಸಮಬಲಗೊಂಡವು. ಬೆಳಗಾವಿಯ ಪೈ.ನಿಹಾರಿಕಾ ಯಾದವ ಜೊತೆ ಮಹಾರಾಷ್ಟ್ರದ ಅಮೃತಾ ಮಿರಗೆ ಗೆಲುವಿನ ನಗೆ ಬೀರಿದರು.

ಶಾಸಕ ಮಹಾಂತೇಶ ಕೌಜಲಗಿ, ತಾ.ಪಂ.ಇಒ ಸುಭಾಸ ಸಂಪಗಾಂವಿ, ತಹಸೀಲ್ದಾರ ಸಚ್ಚಿದಾನಂದ ಕುಚನೂರ, ಗ್ರಾ.ಪಂ.ಅಧ್ಯಕ್ಷೆ ರೂಪಾ ಚಚಡಿ, ಉಪಾಧ್ಯಕ್ಷ ಫಕ್ಕೀರಪ್ಪ ಕುರಿ, ಸದಸ್ಯ ಬಸವರಾಜ ಕೊಡ್ಲಿ, ಇಮಾಮಹುಸೇನ ಖುದ್ದುನವರ, ರತ್ನಾ ಆನೇಮಠ, ಈರಣ್ಣಾ ಹಳಿಮನಿ, ಶಿವಕುಮಾರ ಪೂಜೇರ, ಬಾಬು ತಳವಾರ, ಸಂಗನಗೌಡ ಪಾಟೀಲ, ದೀಪಾ ಬಡವಣ್ಣವರ, ಗಂಗವ್ವಾ ಹೊಳೆಪ್ಪನವರ, ಮಂಜುಳಾ ಕೊಡೊಳ್ಳಿ, ಸನಾ ಖುದ್ದುನವರ, ಗಂಗವ್ವಾ ಪೂಜೇರ, ಪಿಡಿಒ ಮಾರುತಿ ಕಾಂಬಳೆ, ಗಣ್ಯರಾದ ಅರುಣ ಯಲಿಗಾರ, ಮಹೇಶ ಹಿರೇಮಠ, ಆಕಾಶ ಮಾಲಬನ್ನವರ, ಹಾಗೂ ಅನೇಕ ಗಣ್ಯರು, ಕುಸ್ತಿಪ್ರೇಮಿಗಳು ಇದ್ದರು.

ಮಾಜಿ ಪೈ.ರತ್ನಕುಮಾರ ಮಠಪತಿ, ತರಬೇತುದಾರ ನಾಗರಾಜ ಎ.ಆರ್‌.ಕೆ. ಆಕರ್ಷಕ ನಿರೂಪಣೆ ಮಾಡಿದರು. ಮಾಜಿ ಪೈ.ವಿಠ್ಠಲ ಅಂದಾನಿ, ಅಶೋಕ ಮತ್ತಿಕೊಪ್ಪ, ರಾಜೇಸಾಬ ಉಗರಗೋಳ, ನಾಗರಾಜ ಭಟ್ಟಿ, ಮೀರಾ, ಮಹಾಂತೇಶ ತುರಮರಿ, ಮಲ್ಲಿಕಾರ್ಜುನ ಹೊಂಗಲಮಠ, ಅಶೋಕ ನಾಗನೂರ ಪಂಚರಾಗಿ ಕಾರ್ಯನಿರ್ವಹಿಸಿದರು.