13ರಂದು ಜಿಲ್ಲೆ ಎಲ್ಲ ಕೋರ್ಟ್‌ಗಳಲ್ಲಿ ರಾಷ್ಟ್ರೀಯ ಲೋಕ್‌ ಅದಾಲತ್

| Published : Jul 11 2024, 01:31 AM IST

ಸಾರಾಂಶ

ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜುಲೈ 13ರಂದು ರಾಷ್ಟ್ರೀಯ ಲೋಕ್‌ ಅದಾಲತ್ ನಡೆಯಲಿದ್ದು, ಇಲ್ಲಿ ರಾಜಿಯಾಗಬಲ್ಲ ಎಲ್ಲ ಪ್ರಕರಣಗಳನ್ನು ಸಂಧಾನ ಮೂಲಕ ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಲು ಅತ್ಯುತ್ತಮ ಅವಕಾಶವಿದೆ. ಕಕ್ಷಿದಾರರು ಸದುಪಯೋಗ ಮಾಡಿಕೊಳ್ಳಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಶೀಘ್ರ ನ್ಯಾಯ ಪಡೆಯಲು ರಾಜಿ ಸಂಧಾನ ಸೂಕ್ತ: ನ್ಯಾ.ರಾಜೇಶ್ವರಿ ಎನ್. ಹೆಗಡೆ ಸಲಹೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜುಲೈ 13ರಂದು ರಾಷ್ಟ್ರೀಯ ಲೋಕ್‌ ಅದಾಲತ್ ನಡೆಯಲಿದ್ದು, ಇಲ್ಲಿ ರಾಜಿಯಾಗಬಲ್ಲ ಎಲ್ಲ ಪ್ರಕರಣಗಳನ್ನು ಸಂಧಾನ ಮೂಲಕ ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಲು ಅತ್ಯುತ್ತಮ ಅವಕಾಶವಿದೆ. ಕಕ್ಷಿದಾರರು ಸದುಪಯೋಗ ಮಾಡಿಕೊಳ್ಳಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.

ಮಂಗಳವಾರ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜುಲೈ 13ರಂದು ಆಯೋಜಿಸಲಾಗಿರುವ ರಾಷ್ಟ್ರೀಯ ಲೋಕ್‌ ಅದಾಲತ್ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.

ವಾಜ್ಯಪೂರ್ವ ಪ್ರಕರಣಗಳು:

ಚೆಕ್‌ ಅಮಾನ್ಯ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು ಸೇರಿದಂತೆ ಕಾರ್ಮಿಕ ವಿವಾದಗಳು ಹಾಗೂ ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ಮೇಂಟನೆನ್ಸ್ ಪ್ರಕರಣಗಳು ಹಾಗೂ ಇತರೆ ಪ್ರಕರಣಗಳು (ರಾಜಿ ಆಗಬಲ್ಲ ಅಪರಾಧಿಕ ಪ್ರಕರಣಗಳು, ವೈವಾಹಿಕ) ಕುಟುಂಬ ನ್ಯಾಯಾಲಯ ಹಾಗೂ ಇತರೆ ಸಿವಿಲ್ ಪ್ರಕರಣಗಳು ಇತ್ಯರ್ಥಪಡಿಸಿಕೊಳ್ಳಬಹುದು ಎಂದರು.

ಬಾಕಿ ಪ್ರಕರಣಗಳು:

ರಾಜಿ ಆಗಬಲ್ಲ ಅಪರಾಧಿಕ ಪ್ರಕರಣಗಳು, ಚೆಕ್ಕು ಅಮಾನ್ಯದ ಪ್ರಕರಣಗಳು, ಬ್ಯಾಂಕ್ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು, ಉದ್ಯೋಗದಲ್ಲಿ ಪುನರ್‌ ಸ್ಥಾಪಿಸಲ್ಪಡುವ ಪ್ರಕರಣಗಳು ಸೇರಿದಂತೆ ಕಾರ್ಮಿಕ ವಿವಾದಗಳು ಹಾಗೂ ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ವೈವಾಹಿಕ/ಕುಟುಂಬ ನ್ಯಾಯಾಲಯ ಪ್ರಕರಣಗಳು, ಭೂ ಸ್ವಾಧೀನ ಪ್ರಕರಣಗಳು, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳು, ಕಂದಾಯ ಪ್ರಕರಣಗಳನ್ನು ಲೋಕ್‌ ಅದಾಲತ್‌ನಲ್ಲಿ ಬಗೆಹರಿಸಲಾಗುವುದು. ಈ ದಿನಾಂಕಗಳ ಹೊರತಾಗಿಯೂ ಸತತವಾಗಿ ನಡೆಯುವ ಲೋಕ್‌ ಅದಾಲತ್ ಮುಖಾಂತರ ಕೂಡ ಕಕ್ಷಿದಾರರು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಜಿಲ್ಲಾಮಟ್ಟದಲ್ಲಿ ನ್ಯಾಯಾಧೀಶರು ವಕೀಲರ ಸಹಕಾರದೊಂದಿಗೆ ಕಲಾಪ ನಡೆಸುವರು. ಇದೇ ರೀತಿ ತಾಲೂಕು ಮಟ್ಟದಲ್ಲೂ ಅದಾಲತ್ ನಡೆಯಲಿದೆ. ಸಾರ್ವಜನಿಕರು ಶೀಘ್ರ ನ್ಯಾಯ ಪಡೆದುಕೊಳ್ಳಲು ಲೋಕ್‌ ಅದಾಲತ್‌ ಸದುಪಯೋಗ ಪಡೆಯಬಹುದು ಎಂದರು.

ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಎಲ್.ಎಚ್. ಅರುಣಕುಮಾರ ಮಾತನಾಡಿ, ವಕೀಲರ ಸಂಘದಿಂದಲೂ ಲೋಕ್ ಅದಾಲತ್‌ಗಳಲ್ಲಿ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಕಾನೂನು ಸೇವಾ ಪ್ರಾಧಿಕಾರದಿಂದ ಕಳೆದ ಹಲವಾರು ವರ್ಷದಿಂದ ಜಿಲ್ಲೆಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ನಿರಂತರ ನಡೆಸಲಾಗಿದೆ ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ್ ಎಂ. ಸಂತೋಷ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಸಿಜೆಎಂ ನ್ಯಾಯಾಧೀಶೆ ನಿವೇದಿತಾ ಉಪಸ್ಥಿತರಿದ್ದರು.

- - -

ಬಾಕ್ಸ್‌-1 * 6 ಸಾವಿರ ಪ್ರಕರಣ ಇತ್ಯರ್ಥ ಗುರಿ ಜು.13ರಂದು ನಡೆಯುವ ಲೋಕ್‌ ಅದಾಲತ್‌ನಲ್ಲಿ ರಾಜಿ ಆಗಬಲ್ಲ ಸುಮಾರು 5ರಿಂದ 6 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ. 2019ರ ಡಿಸೆಂಬರ್ ಅಂತ್ಯದವರೆಗೆ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಒಟ್ಟು 40,713 ಪ್ರಕರಣಗಳು ಬಾಕಿ ಇವೆ. ಈ ಪೈಕಿ 8871 ರಾಜಿ ಆಗಬಲ್ಲ ಪ್ರಕರಣಗಳನ್ನು ಗುರುತಿಸಿ ರೆಫರ್ ಮಾಡಲಾಗಿದೆ.

- - - ಬಾಕ್ಸ್‌-2* ಸುಪ್ರೀಂ ಕೋರ್ಟಿನಲ್ಲಿ ವಿಶೇಷ ಲೋಕ್‌ ಅದಾಲತ್‌ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಮತ್ತು ರಾಜಿ ಆಗಬಲ್ಲ ಪ್ರಕರಣಗಳ ಬಗ್ಗೆ ಜು.29ರಿಂದ ಆ.3 ರವರೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಲೋಕ್ ಅದಾಲತ್ ಆಯೋಜಿಸಲಾಗಿದೆ. ಬೇರೆ ಬೇರೆ ತಾಲೂಕಿನಿಂದ 31 ಪ್ರಕರಣಗಳಿವೆ. ಅದಾಲತ್ತಿಗೆ ಅನುಕೂಲ ಆಗಲೆಂದು ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ರಾಜಿಪೂರ್ವ ಸಮಾಲೋಚನೆಗಳ ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಆಸ್ತಿ ತೆರಿಗೆ ಪಾವತಿಸಲು ಅನುಕೂಲ ಆಗಲೆಂದು 5% ರಿಯಾಯಿತಿಯನ್ನು ಸರ್ಕಾರ ಆದೇಶದ ಮೂಲಕ ಜಾರಿಗೊಳಿಸಿದೆ. ಈ ಸದಾವಕಾಶ ಸಾರ್ವಜನಿಕರು ಬಳಸಿಕೊಳ್ಳಬಹುದು ಎಂದರು.

ಸಾರ್ವಜನಿಕರು ರಾಷ್ಟ್ರೀಯ ಲೋಕ್ ಅದಾಲತ್‌ನ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಗೆ ದಾವಣಗೆರೆ ಹಳೆಯ ನ್ಯಾಯಾಲಯ ಸಂಕೀರ್ಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ದಾವಣಗೆರೆ ಅವರನ್ನು ದೂ: 08192-296364, ತಾಲೂಕು ಕಾನೂನು ಸೇವಾ ಸಮಿತಿಗಳಾದ ಹರಿಹರ- ದೂ: 08192-296885, ಹೊನ್ನಾಳಿ- ದೂ: 08188-251732, ಚನ್ನಗಿರಿ- ದೂ: 08189-229195 ಮತ್ತು ಜಗಳೂರು ದೂ: 08196-227600 ಅವರನ್ನು ಸಂಪರ್ಕಿಸಬಹುದು ಎಂದರು.

- - - -9ಕೆಡಿವಿಜಿ32ಃ:

ದಾವಣಗೆರೆಯಲ್ಲಿ ಜು.13ರಂದು ಲೋಕ್‌ ಅದಾಲತ್ ಆಯೋಜಿಸಿರುವ ಕುರಿತು ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.