12ರಂದು ರಾಷ್ಟ್ರೀಯ ಲೋಕ್ ಅದಾಲತ್; ಸದ್ಬಳಕೆಗೆ ಬನ್ನಿ

| Published : Jul 10 2025, 12:49 AM IST

ಸಾರಾಂಶ

ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜು.12ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದ್ದು, 10 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳ ಇತ್ಯರ್ಥದ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಕೆ.ವೇಲಾ ಹೇಳಿದ್ದಾರೆ.

- 10 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳ ಇತ್ಯರ್ಥ ಗುರಿ: ಜಿಲ್ಲಾ ನ್ಯಾಯಾಧೀಶರಾದ ಡಿ.ಕೆ.ವೇಲಾ ಮಾಹಿತಿ - ಅದಾಲತ್‍ನಲ್ಲಿ ಇತ್ಯರ್ಥವಾಗುವ ಪ್ರಕರಣ ತೀರ್ಪಿನಂತಿರುತ್ತದೆ, ಅಪೀಲು ಹೋಗಲು ಅವಕಾಶ ಇರಲ್ಲ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜು.12ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದ್ದು, 10 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳ ಇತ್ಯರ್ಥದ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಕೆ.ವೇಲಾ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯಗಳ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕ್ ಅದಾಲತ್ ಮೂಲಕ ಪ್ರಕರಣಗಳ ಇತ್ಯರ್ಥ ಮಾಡುವ ಗುರಿ, ಶೀಘ್ರ ನ್ಯಾಯದಾನ, ಕಕ್ಷಿದಾರರ ಸಮಯ, ಹಣ ಉಳಿತಾಯ ಮಾಡುವ ನಿಟ್ಟಿನಲ್ಲಿ ಕಕ್ಷಿದಾರರೂ ಭಾಗಿಯಾಗಬೇಕು ಎಂದರು.

ಅಪೀಲಿಗೆ ಅವಕಾಶ ಇರುವುದಿಲ್ಲ:

ರಾಜಿ, ಸಂಧಾನ ನಡೆಸಲು ನ್ಯಾಯಾಂಗ ಇಲಾಖೆ, ವಕೀಲರ ಕಡೆಯಿಂದಲೂ ಪ್ರತ್ಯೇಕ ಮಧ್ಯಸ್ಥಿಕೆಗಾರರು ಇರುತ್ತಾರೆ. ರಾಜಿ, ಸಂಧಾನದ ಅಧಿಕಾರ ಕಾನ್ಸಿಲೇಟರ್‌ಗಳಿಗೆ ನೀಡಲಾಗಿರುತ್ತದೆ. ಅದಾಲತ್‍ನಲ್ಲಿ ವ್ಯಾಜ್ಯಪೂರ್ವ ಮತ್ತು ಕೋರ್ಟ್‌ನ ಪ್ರಕರಣ ತೆಗೆದುಕೊಳ್ಳಲಾಗುವುದು. ಅದಾಲತ್‍ನಲ್ಲಿ ಇತ್ಯರ್ಥವಾಗುವ ಪ್ರಕರಣ ನ್ಯಾಯಾಲಯದ ತೀರ್ಪಿನಂತಿರುತ್ತದೆ. ಇಲ್ಲಿ ಇತ್ಯರ್ಥ ಮಾಡಿಕೊಂಡಲ್ಲಿ ಮತ್ತೆ ಅಪೀಲು ಹೋಗಲು ಅವಕಾಶ ಇರುವುದಿಲ್ಲ ಎಂದು ಹೇಳಿದರು.

ರಾಜಿಯಾಗಬಲ್ಲ ಅಪರಾಧಿಕ ಪ್ರಕರಣ, ಚೆಕ್‌ ಅಮಾನ್ಯ, ಬ್ಯಾಂಕ್ ಪ್ರಕರಣ, ಮೋಟಾರ್ ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳೂ ಸೇರಿದಂತೆ ಕಾರ್ಮಿಕ ವಿವಾದ ಹಾಗೂ ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮು, ವಿದ್ಯುತ್ ಹಾಗೂ ನೀರಿನ ಶುಲ್ಕ, ವೈವಾಹಿಕ, ಕೌಟುಂಬಿಕ ನ್ಯಾಯಾಲಯ ಪ್ರಕರಣ, ಭೂಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದ ಸೇವಾ ಪ್ರಕರಣ ಹಾಗೂ ಪಿಂಚಣಿ ಪ್ರಕರಣ, ಕಂದಾಯ ಪ್ರಕರಣ ಲೋಕ ಅದಾಲತ್‍ನಲ್ಲಿ ಬಗೆಹರಿಸಲಾಗುವುದು ಎಂದು ಮಾಹಿತಿ ನೀಡಿದರು.

ಸದುಪಯೋಗಕ್ಕೆ ಮುಂದಾಗಿ:

ನಿಗದಿತ ದಿನಾಂಕಗಳ ಹೊರತಾಗಿಯೂ ಸತತವಾಗಿ ನಡೆಯುವ ಲೋಕ ಅದಾಲತ್ ಮುಖಾಂತರ ಕೂಡ ಕಕ್ಷಿದಾರರು ಪ್ರಕರಣ ಇತ್ಯರ್ಥಪಡಿಸಿಕೊಳ್ಳಬಹುದು. ಜು.12ರಂದು ಬೇರೆ ಯಾವುದೇ ಕಲಾಪಗಳು ನಡೆಯದೇ, ಸಂಪೂರ್ಣವಾಗಿ ಲೋಕ್ ಅದಾಲತ್ ಪ್ರಕರಣಗಳ ರಾಜಿ ಸಂಧಾನ ನಡೆಯಲಿದೆ. ಜಿಲ್ಲಾ ಮಟ್ಟದಲ್ಲಿ ನ್ಯಾಯಾಧೀಶರು ವಕೀಲರ ಸಹಕಾರದಲ್ಲಿ ಕಲಾಪ ನಡೆಸುವರು. ಇದೇ ರೀತಿ ತಾಲೂಕು ಮಟ್ಟದಲ್ಲೂ ಅದಾಲತ್ ನಡೆಯಲಿದೆ. ಸಾರ್ವಜನಿಕರು ಶೀಘ್ರ ನ್ಯಾಯ ಪಡೆದುಕೊಳ್ಳಲು ಲೋಕ್‌ ಅದಾಲತ್‍ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ರಾಜಿ ಸಂಧಾನಕ್ಕಾಗಿ 12853 ಪ್ರಕರಣ:

ಜು.12ರಂದು ನಡೆಯುವ ಲೋಕ್ ಅದಾಲತ್‌ನಲ್ಲಿ ರಾಜಿಯಾಗಬಲ್ಲ 10 ಸಾವಿರ ಪ್ರಕರಣಗಳ ಇತ್ಯರ್ಥದ ಗುರಿ ಹೊಂದಲಾಗಿದೆ. ಕಳೆದ ಮಾರ್ಚ್‌ನಲ್ಲಿ ಲೋಕ್ ಅದಾಲತ್ ಮೂಲಕ 10186 ಬಾಕಿ ಪ್ರಕರಣ, ವ್ಯಾಜ್ಯ ಪೂರ್ವದ 187026 ಸೇರಿದಂತೆ 197215 ಪ್ರಕರಣ ಇತ್ಯರ್ಥಪಡಿಸಲಾಗಿತ್ತು. ಈಗ ಎಲ್ಲ ನ್ಯಾಯಾಲಯಗಳಲ್ಲಿ 45508 ಕೇಸ್ ಬಾಕಿ ಇದ್ದು, ರಾಜಿ, ಸಂಧಾನಕ್ಕಾಗಿ 12853 ಪ್ರಕರಣ ಗುರುತಿಸಿದೆ. ಇದರಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರಕರಣ ಇತ್ಯರ್ಥದ ಗುರಿ ಹೊಂದಿದೆ. ವ್ಯಾಜ್ಯಪೂರ್ವ ಪ್ರಕರಣಗಳ ಇತ್ಯರ್ಥಪಡಿಸಲಾಗುವುದು. ಇನ್ನೂ ಹೆಚ್ಚಿನ ಪ್ರಕರಣಗಳ ಇತ್ಯರ್ಥ ಮಾಡಲಿದ್ದು, ನಿಖರ ಅಂಕಿ ಅಂಶ ಶನಿವಾರ ಸಿಗಲಿವೆ ಎಂದು ತಿಳಿಸಿದರು.

ಸಾಮಾನ್ಯವಾಗಿ ಲೋಕ್ ಅದಾಲತ್‍ ಅನ್ನು ಜನತಾ ನ್ಯಾಯಾಲಯ ಎಂದೂ ಕರೆಯಲಾಗುತ್ತದೆ. ಜನತಾ ನ್ಯಾಯಾಲಯದಲ್ಲಿ ಸಮಯ, ಹಣ ಉಳಿತಾಯ, ಕಕ್ಷಿದಾರರು ಮತ್ತು ಎದುರುದಾರರಿಗೆ ಸಮಾಧಾನ ತರುವ ನ್ಯಾಯದಾನ ಸಿಗಲಿದೆ. ಮಾನವ ಸಂಬಂಧ ಬೆಸೆಯಬೇಕು, ಸಣ್ಣ ವಿಷಯ ತೆಗೆದುಕೊಂಡು ಪ್ರತಿಷ್ಠೆಯಾಗಿ ಸ್ವೀಕರಿಸಿ ವರ್ಷಾನುಗಟ್ಟಲೆ ನ್ಯಾಯಾಲಯಕ್ಕೆ ಅಲೆದಾಡುವವರೇ ಹೆಚ್ಚು. ಇದಕ್ಕಾಗಿ ಹೆಚ್ಚು ಹೆಚ್ಚು ಜನರು ತಮ್ಮ ಪ್ರಕರಣಗಳ ಇತ್ಯರ್ಥಕ್ಕಾಗಿ ಲೋಕ್ ಅದಾಲತ್‍ನಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

ಅದಾಲತ್‍ನಲ್ಲಿ ಭಾಗವಹಿಸಲು ದಾವಣಗೆರೆ ಹಳೆಯ ನ್ಯಾಯಾಲಯ ಸಂಕೀರ್ಣದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ (ದೂ.08192-296364), ಹರಿಹರ ತಾಲೂಕು ಕಾನೂನು ಸೇವಾ ಸಮಿತಿ (08192-296885), ಹೊನ್ನಾಳಿ (08188-251732), ಚನ್ನಗಿರಿ (08189-229195), ಜಗಳೂರು (08196-227600) ಕಚೇರಿಗೆ ಸಂಪರ್ಕಿಸಲು ನ್ಯಾ.ಡಿ.ಕೆ.ವೇಲಾ ತಿಳಿಸಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ, ಹಿರಿಯ ಸಿವಿಲ್ ನ್ಯಾಯಾಧೀಶ, ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ, ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ, ಕಾರ್ಯದರ್ಶಿ ಬಸವರಾಜ ಇತರರು ಇದ್ದರು.

- - -

(ಕೋಟ್‌) ತಹಸೀಲ್ದಾರ್ ಕೋರ್ಟ್, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳ ಕೋರ್ಟ್‍ನಲ್ಲಿದ್ದ ಅನೇಕ ಆಸ್ತಿ ಪ್ರಕರಣಗಳನ್ನು ಕಕ್ಷಿದಾರರು, ಎದುರುದಾರರಿಗೆ ಕಾನೂನು ಅವಕಾಶ, ದಾಖಲಾತಿ ಕುರಿತು ಮನವರಿಕೆ ಮಾಡಿಕೊಟ್ಟು ಕಡಿಮೆ ಸಮಯದಲ್ಲಿ ಪ್ರಕರಣ ಮುಕ್ತಾಯಗೊಳಿಸಲಾಗಿದೆ. ರಾಜಿ, ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸುವುದರಿಂದ ಜನತೆಗೆ ಹಣ, ಸಮಯ ಮತ್ತು ಮಾನಸಿಕ ಸ್ಥಿಮಿತತೆ ಕಾಪಾಡಲು ಸಹಾಯಕವಾಗಿದೆ. ಅಲ್ಲದೇ ಜನ, ರೈತರು ಆರ್ಥಿಕವಾಗಿ ಸದೃಢವಾಗಲು ಹೆಚ್ಚು ಸಹಾಯವಾಗಲಿದೆ.

- ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ

- - - ಪ್ರತಿಯೊಬ್ಬ ನಾಗರೀಕನಿಗೂ ತ್ವರಿತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳ ಸಹಕಾರದೊಂದಿಗೆ ಹಲವಾರು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಲೋಕ್‌ ಅದಾಲತ್ ಮೂಲಕ ಸರಳ ಮತ್ತು ಬಾಕಿ ಪ್ರಕರಣಗಳಿಗೆ ತ್ವರಿತಗತಿಯಲ್ಲಿ ನ್ಯಾಯ ಒದಗಿಸಬಹುದಾಗಿದೆ. ಕಕ್ಷಿದಾರರು ಲೋಕ್ ಅದಾಲತ್‌ ಅವಕಾಶ‍ವನ್ನು ಸದ್ಬಳಖೆ ಮಾಡಿಕೊಳ್ಳಬೇಕು.

- ಉಮಾ ಪ್ರಶಾಂತ, ಜಿಲ್ಲಾ ಪೊಲೀಸ್ ಅಧೀಕ್ಷಕಿ.

- - -

-9ಕೆಡಿವಿಜಿ1, 2, 3.ಜೆಪಿಜಿ:

ದಾವಣಗೆರೆಯಲ್ಲಿ ಬುಧವಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಕೆ.ವೇಲಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.