ರಾಷ್ಟ್ರೀಯ ಲೋಕ ಅದಾಲತ್ ಕುರಿತಂತೆ ಜಿಲ್ಲಾ ನ್ಯಾಯಾಧೀಶ ರೋಣ್ ವಾಸುದೇವ್ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಾರ್ಚ್ 14ರ ಎರಡನೇ ಶನಿವಾರ ಪ್ರಸಕ್ತ ವರ್ಷದ ಮೊದಲ ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ್ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್ ಹಾಗೂ ವಿಶೇಷ ಅಭಿಯಾನ-ಮಧ್ಯಸ್ಥಿಕೆ ರಾಷ್ಟ್ರಕ್ಕಾಗಿ-2.0 ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ರಾಷ್ಟ್ರೀಯ ಲೋಕ ಅದಾಲತ್ ಜಿಲ್ಲಾ ಹಾಗೂ ಎಲ್ಲ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ ಎಂದರು.

ಕಳೆದ 2025ರ ಡಿಸೆಂಬರ್ ನಲ್ಲಿ ನಡೆದ ಮೆಗಾ ಲೋಕ ಅದಾಲತ್‍ನಲ್ಲಿ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿ ಇದ್ದಂತಹ ಒಟ್ಟು 3,840 ಪ್ರಕರಣಗಳು ಹಾಗೂ ವ್ಯಾಜ್ಯಪೂರ್ವ 75,637 ಪ್ರಕರಣಗಳನ್ನು ಸೇರಿಸಿ ಒಟ್ಟು 79,477 ಪ್ರಕರಣಗಳನ್ನು ಜಿಲ್ಲಾ ವ್ಯಾಪ್ತಿಯಲ್ಲಿ ವಿಲೇವಾರಿ ಮಾಡಲಾಗಿದೆ. ಸಣ್ಣಪುಟ್ಟ ವಿಷಯಗಳಲ್ಲಿ ವಿರಸ, ವ್ಯತ್ಯಾಸದಿಂದಾಗಿ ನ್ಯಾಯಾಲಯಕ್ಕೆ ಬರುವ ಸಾಧ್ಯತೆ ಸಾಕಷ್ಟಿರುತ್ತದೆ. ಅಂತಹ ಪ್ರಕರಣಗಳಲ್ಲಿ ಮಾನವೀಯತೆಯಿಂದ ತಿಳುವಳಿಕೆ ಹಾಗೂ ಕಾನೂನು ಬಗ್ಗೆ ಅರಿವು ಮೂಡಿಸಿದಾಗ ಅವರು ಒಂದಾಗುವ ಸಾಧ್ಯತೆಗಳಿರುತ್ತದೆ. ಅದರ ಪ್ರತಿಫಲವಾಗಿ ಚಿತ್ರದುರ್ಗ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ಒಟ್ಟು 07 ಜೋಡಿಗಳನ್ನು ಪುನಃ ಒಂದು ಮಾಡಲಾಗಿದೆ ಎಂದು ತಿಳಿಸಿದರು.

ಮಧ್ಯಸ್ಥಿಕೆ ರಾಷ್ಟ್ರಕ್ಕಾಗಿ-2.0 ವಿಶೇಷ ಅಭಿಯಾನವ ಆರಂಭ ಮಾಡಲಾಗಿದೆ. ಕಳೆದ ಬಾರಿಯ ಅಭಿಯಾನದಲ್ಲಿ ರಾಜ್ಯದಲ್ಲಿ 5 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳು ಇತ್ಯರ್ಥವಾಗಿವೆ. ಇದೀಗ 2ನೇ ಬಾರಿ ಮಧ್ಯಸ್ಥಿಕೆ ರಾಷ್ಟ್ರಕ್ಕಾಗಿ 2.0 ಈಗಾಗಲೇ ಇದೇ ಜನವರಿ 02 ರಿಂದ ಆರಂಭವಾಗಿದ್ದು, ಜನವರಿ ತಿಂಗಳ ಅಂತ್ಯದವರೆಗೆ ಮಧ್ಯಸ್ಥಿಕೆಗೆ ಯೋಗ್ಯವಾದ ಪ್ರಕರಣಗಳನ್ನು ಗುರುತಿಸಿ, ಮಧ್ಯಸ್ಥಿಕೆ ಕೇಂದ್ರಕ್ಕೆ ಕಳುಹಿಸಿ, ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಒಟ್ಟು 42 ನುರಿತ ಮಧ್ಯಸ್ಥಿಕೆದಾರರು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಪಕ್ಷಗಾರರಿಗೆ ಕಾನೂನಾತ್ಮಕವಾಗಿ ಸಹಕಾರ ನೀಡುತ್ತಾರೆ. ಈಗಾಗಲೇ ಜಿಲ್ಲೆ ವ್ಯಾಪ್ತಿಯ 24 ನ್ಯಾಯಾಲಯಗಳಲ್ಲಿ ಈ ಸಂಬಂಧವಾಗಿ ಪ್ರತಿದಿನ ಮಧ್ಯಸ್ಥಿಕೆ ಮುಖಾಂತರ ಇತ್ಯರ್ಥಪಡಿಸಿಕೊಳ್ಳಬಹುದಾದ ಪ್ರಕರಣಗಳನ್ನು ನ್ಯಾಯಾಲಯವು ಗುರುತಿಸಿ, ಪ್ರತಿ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಇರುವ ಮಧ್ಯಸ್ಥಿಕೆ ಕೇಂದ್ರಕ್ಕೆ ಪ್ರಕರಣಗಳನ್ನು ರವಾನಿಸುತ್ತಿದ್ದಾರೆ ಎಂದರು.

ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಸದ್ಯ 51,026 ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಪ್ರಸ್ತುತ ಜಿಲ್ಲೆಯ ಐದು ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಕೊರತೆ ಇದ್ದರೂ, ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಕರಣಗಳ ಶೀಘ್ರ ವಿಲೇವಾರಿಗೆ ಪ್ರಯತ್ನಿಸಲಾಗುತ್ತಿದೆ. ಮುಂಬರುವ ಮಾರ್ಚ್ ನಲ್ಲಿನ ಲೋಕ್ ಅದಾಲತ್‍ಗಾಗಿ ಈಗಾಗಲೇ 6,480 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದೇ ಜನವರಿ 17 ರವರೆಗೆ 798 ಪ್ರಕರಣಗಳು ಇತ್ಯರ್ಥಗೊಂಡಿವೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳ ಆಗುತ್ತಿರುವ ಬಗ್ಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೋಣ್ ವಾಸುದೇವ್ ಕಳವಳ ವ್ಯಕ್ತಪಡಿಸಿದರು.ಪೋಕ್ಸೋ ಕುರಿತು ಗ್ರಾಮ , ತಾಲೂಕು ಮಟ್ಟದಲ್ಲಿಯೂ ವಿವಿಧ ಇಲಾಖೆಗಳು ಸಮನ್ವಯದೊಂದಿಗೆ ನಾವು ಕೂಡ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಬೇಸರದ ಸಂಗತಿ ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಇದ್ದರು.