ರಾಷ್ಟ್ರೀಯ ಓಪನ್‌ ಸರ್ಫಿಂಗ್‌: ತಮಿಳುನಾಡು ಸಮಗ್ರ ಚಾಂಪಿಯನ್‌

| Published : Jun 03 2024, 12:31 AM IST

ರಾಷ್ಟ್ರೀಯ ಓಪನ್‌ ಸರ್ಫಿಂಗ್‌: ತಮಿಳುನಾಡು ಸಮಗ್ರ ಚಾಂಪಿಯನ್‌
Share this Article
  • FB
  • TW
  • Linkdin
  • Email

ಸಾರಾಂಶ

ಮೂಲ್ಕಿಯ ಮಂತ್ರ ಸರ್ಫಿಂಗ್‌ ಕ್ಲಬ್‌ನ ಭರವಸೆಯ ಆಟಗಾರ ಪ್ರದೀಪ್‌ ಪೂಜಾರ್‌ (5.34) ಅಂಕದೊಂದಿಗೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಲ್ಕಿ ಸಸಿಹಿತ್ಲು ಮುಂಡಾ ಬೀಚ್‌ನಲ್ಲಿ ಮೂರು ದಿನಗಳ ಕಾಲ ನಡೆದ ಇಂಡಿಯನ್‌ ಓಪನ್‌ ಸರ್ಫಿಂಗ್‌ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪುರುಷರ, ಮಹಿಳೆಯರ, 16 ರ ಕೆಳ ಹರೆಯದ ಬಾಲಕ ಮತ್ತು ಬಾಲಕಿಯರ ವಿಭಾಗದ ಎಲ್ಲ ನಾಲ್ಕು ಪ್ರಶಸ್ತಿಗಳನ್ನು ತಮಿಳುನಾಡು ಪಡೆದುಕೊಂಡು ಸಮಗ್ರ ಚಾಂಪಿಯನ್‌ ಆಗಿ ಮೂಡಿ ಬಂದಿದೆ.

ಅಂತಾರಾಷ್ತ್ರೀಯ ಸರ್ಫಿಂಗ್‌ ಅಸೋಸಿಯೇಶನ್‌ನಿಂದ ಮಾನ್ಯತೆ ಪಡೆದ ಸರ್ಫಿಂಗ್‌ ಫೆಡರೇಶನ್‌ ಆಫ್‌ ಇಂಡಿಯಾದ ಆಶ್ರಯದಲ್ಲಿ ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಇಲಾಖೆ, ಸರ್ಫಿಂಗ್‌ ಸ್ವಾಮಿ ಫೌಂಡೇಶನ್‌, ಮೂಲ್ಕಿಯ ಮಂತ್ರ ಸರ್ಫಿಂಗ್‌ ಕ್ಲಬ್‌ ಸಹಯೋಗದೊಂದಿಗೆ ನವಮಂಗಳೂರು ಬಂದರು ಪ್ರಾಧಿಕಾರದ ಟೈಟಲ್‌ ಪ್ರಾಯೋಜಕತ್ವದೊಂದಿಗೆ ಮೂರು ದಿನಗಳ ಕಾಲ ಸರ್ಫಿಂಗ್ ಸ್ಪರ್ಧೆ ನಡೆಯಿತು.

ಭಾನುವಾರ ನಡೆದ ಫೈನಲ್‌ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಅಜೀಶ್‌ ಆಲಿ ಚಾಂಪಿಯನ್‌, ಮಹಿಳೆಯರ ವಿಭಾಗದಲ್ಲಿ ಹಾಗೂ 16ರ ಕೆಳ ಹರೆಯದ ಬಾಲಕಿಯರ ವಿಭಾಗದಲ್ಲಿ ಕಮಲಿಮೂರ್ತಿ ಚಾಂಪಿಯನ್‌ ಹಾಗೂ 16 ರ ಕೆಳ ಹರೆಯದ ಬಾಲಕರ ಚಾಂಪಿಯನ್‌ ಆಗಿ ತಾಯಿನ್‌ ಅರುಣ್‌ ಮೂಡಿ ಬಂದಿದ್ದಾರೆ.

ವಿವರ: ಪುರುಷರ ವಿಭಾಗದ ಫೈನಲ್‌ ಪಂದ್ಯದಲ್ಲಿ 2023ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್‌ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದ ತಮಿಳುನಾಡಿನ ಅಜೀಶ್‌ ಆಲಿ(14.70) ಅಂಕದೊಂದಿಗೆ ಪ್ರಶಸ್ತಿಯನ್ನು ಪಡೆದರು. ತಮಿಳುನಾಡಿನ ಶ್ರೀಕಾಂತ್‌ ಡಿ. (12.57) ಹಾಗೂ ಸಂಜಯ್‌ ಕುಮಾರ್‌ ಎಸ್‌. (11.10) ಅಂಕದೊಂದಿಗೆ ಪ್ರಥಮ ಹಾಗೂ ದ್ವಿತೀಯ ರನ್ನರ್ಸ್‌ ಆಗಿ ಮೂಡಿ ಬಂದಿದ್ದಾರೆ.

ಮಹಿಳೆಯರ ವಿಭಾಗದ ಫೈನಲ್‌ ಪಂದ್ಯದಲ್ಲಿ ಕಳೆದ ವರ್ಷದ ಚಾಂಪಿಯನ್‌ ತಮಿಳುನಾಡಿನ ಕಮಲಿಮೂರ್ತಿ (12.40) ಅಂಕದೊಂದಿಗೆ ಈ ಬಾರಿಯೂ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 2022ರ ಚಾಂಪಿಯನ್‌ ಗೋವಾದ ಸುಗರ್‌ ಬನರಸೆ (12.13) ಪ್ರಥಮ ರನ್ನರ್‌ ಅಪ್‌ಗೆ ತೃಪ್ತಿಪಟ್ಟಿದ್ದಾರೆ. ಮುಂಬೈನ ನೇಹಾ ವೈದ್‌ (2.97) ಅಂಕದೊಂದಿಗೆ ದ್ವಿತೀಯ ರನ್ನರ್ಸ್‌ ಆಗಿ ಮೂಡಿ ಬಂದಿದ್ದಾರೆ. 16 ರ ಕೆಳ ಹರೆಯದ ಬಾಲಕಿಯರ ವಿಭಾಗದದಲ್ಲಿಯೂ ತಮಿಳುನಾಡಿನ ಕಮಲಿಮೂರ್ತಿ (12.17)ಅಂಕದೊಂದಿಗೆ ಪ್ರಶಸ್ತಿಯನ್ನು ಪಡೆದಿದ್ದಾರೆ. ದಮಯಂತಿ (5.93) ಹಾಗೂ ಮಹತಿ ಶ್ರೀನಿವಾಸ ಭಾರತಿ (2.07) ಅಂಕದೊಂದಿಗೆ ಪ್ರಥಮ ಹಾಗೂ ದ್ವಿತೀಯ ರನ್ನರ್ಸ್‌ ಆಗಿ ಮೂಡಿ ಬಂದಿದ್ದಾರೆ.

16ರ ಕೆಳ ಹರೆಯದ ಬಾಲಕರ ವಿಭಾಗದಲ್ಲಿ ತಮಿಳುನಾಡಿನ ತಾಯಿನ್‌ ಅರುಣ್‌ 10.17 ಅಂಕದೊಂದಿಗೆ ಪ್ರಶಸ್ತಿಯನ್ನು ಪಡೆದಿದ್ದಾರೆ. ಹರೀಶ್‌ ಪಿ (8.40) ಹಾಗೂ ಪ್ರಹ್ಲಾದ್‌ ಶ್ರೀರಾಮ್‌ (7.43) ಅಂಕದೊಂದಿಗೆ ಪ್ರಥಮ ಹಾಗೂ ದ್ವಿತೀಯ ರನ್ನರ್ಸ್‌ ಆಗಿ ಮೂಡಿ ಬಂದಿದ್ದಾರೆ.

ಮೂಲ್ಕಿಯ ಮಂತ್ರ ಸರ್ಫಿಂಗ್‌ ಕ್ಲಬ್‌ನ ಭರವಸೆಯ ಆಟಗಾರ ಪ್ರದೀಪ್‌ ಪೂಜಾರ್‌ (5.34) ಅಂಕದೊಂದಿಗೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಸ್ಪರ್ಧಾ ಕೂಟದ ಟೈಟಲ್‌ ಪ್ರಾಯೋಕಕತ್ವ ವಹಿಸಿದ್ದ ನವ ಮಂಗಳೂರು ಬಂದರು ಪ್ರಾಧಿಕಾರದ ಚೇರ್‌ಮನ್‌ ಡಾ. ವೆಂಕಟರಮಣ ಅಕ್ಕರಾಜು, ಸರ್ಫಿಂಗ್ ಸ್ವಾಮಿ ಫೌಂಡೇಶನ್‌ನ ನಿರ್ದೇಶಕ ಧನಂಜಯ ಶೆಟ್ಟಿ ,ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ನಗದು ಸಹಿತ ಪ್ರಶಸ್ತಿಯನ್ನು ನೀಡಲಾಯಿತು. ---

ಇವತ್ತಿನ ಅಲೆಗಳು ನಿಧಾನವಾಗಿದ್ದು ತುಂಬಾ ಸವಾಲಾಗಿತ್ತು. ಪರಿಸ್ತಿತಿಗೆ ಹೊಂದಿಕೊಂಡು ಹೋಗಿದ್ದು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಅಂತಾರಾಷ್ತ್ರೀಯ ಮಟ್ಟದ ಸರ್ಫರ್‌ಗಳಿಂದ ಕಲಿತ ಅನುಭವದಿಂದ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು-

- ಅಜೀಶ್‌ ಆಲಿ, ಪುರುಷರ ಚಾಂಪಿಯನ್‌, ಐದನೇ ಇಂಡಿಯನ್‌ ಓಪನ್‌ ಸರ್ಫಿಂಗ್‌

ಸಸಿಹಿತ್ಲಿನಲ್ಲಿ ಸ್ಪರ್ಧಿಸುವುದು ತುಂಬಾ ಖುಷಿ ನೀಡುತ್ತದೆ. ನಾನು ಯಾವುದೇ ಒತ್ತಡವಿಲ್ಲದೆ ಆಡುತ್ತಿದ್ದು ನಿರಂತರವಾಗಿ ಎರಡು ವರ್ಷ ಮಹಿಳೆಯರ ಮತ್ತು 16 ರ ಕೆಳರ ಹರೆಯದ ಬಾಲಕಿಯರ ಪ್ರಶಸ್ತಿಯನ್ನು ಪಡೆದಿದ್ದು ಸಂತೋಷ ತಂದಿದೆ.

- ಕಮಲಿಮೂರ್ತಿ, ಮಹಿಳೆಯರ ವಿಭಾಗದ ಚಾಂಪಿಯನ್‌...................

ಇಲ್ಲಿ ಸರ್ಫಿಂಗ್‌ಗೆ ಉತ್ತಮ ವಾತಾವರಣವಿದ್ದು ಸರ್ಫರ್‌ಗಳು ಕಠಿಣ ಪರಿಶ್ರಮ ಹಾಕಿದಲ್ಲಿ ಹಾಗೂ ಇದೇ ರೀತಿ ತರಬೇತಿ ಪಡೆದಲ್ಲಿ ಮುಂದಿನ ದಿನಗಳಲ್ಲಿ ಸ್ಥಳೀಯ ಪ್ರತಿಭೆಗಳು ಒಲಿಂಪಿಕ್‌ನಲ್ಲಿ ಪದಕಗಳನ್ನು ತರಲು ಸಾಧ್ಯವಿದೆ

- ಡೈಲನ್‌ ಅಮರ್‌ ಇಂಡೋನೇಷ್ಯಾ, ತೀರ್ಪುಗಾರರು.