ಒಂದು ಒನಕೆ ಏಳು ಸುತ್ತಿನ ಕೋಟೆ ಕಾದಿದೆ ಎನ್ನುವುದಾದರೆ, ರಾಜ್ಯದ ಉದ್ದಗಲಕ್ಕೂ ಇರುವ ಛಲವಾದಿ ಹೆಣ್ಣು ಮಕ್ಕಳು ಕೈಯಲ್ಲಿ ಒಂದೊಂದು ಒನಕೆ ಹಿಡಿದು ಬೀದಿಗಿಳಿದರೆ ಏನಾಗಬಹುದು ನೀವೇ ಊಹಿಸಿ. ಮುಖ್ಯಮಂತ್ರಿ ಹುದ್ದೆಯನ್ನು ದಲಿತರಿಗೆ ನೀಡಲಿಲ್ಲ. ದಲಿತರು ಕೇವಲ ಓಟು ಹಾಕಲು ಮಾತ್ರ ಹುಟ್ಟಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಬಯಸುವ ರಾಷ್ಟ್ರವಾಗಿದೆ. ಆದರೆ ಇಂತಹ ದೇಶದ ಅಖಂಡತೆಗೆ ರಾಷ್ಟ್ರೀಯ ಪಕ್ಷಗಳಿಂದಲೇ ಅಪಾಯವಿದೆ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು. ನಗರದ ಕನ್ನಡ ಭವನದಲ್ಲಿ ಬಲಗೈಜಾತಿಗಳ ಒಕ್ಕೂಟ ಸೋಮವಾರ ಏರ್ಪಡಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಶ್ರೀಗಳು ಮಾತನಾಡಿದರು.ಅಂಬೇಡ್ಕರ್ ಮಾತು ನೆನಪಿಸಿಕೊಳ್ಳಿ
1954ರಲ್ಲಿ ಬಾಬಾ ಸಾಹೇಬರು ಮಾಧ್ಯಮವನ್ನುದ್ದೇಶಿಸಿ ಒಂದು ಮಾತು ಹೇಳಿದ್ದಾರೆ. ನನಗೆ ಕಣ್ಣು ಕಾಣುತ್ತಿಲ್ಲ, ಕಾಲು ಊತ ಬಂದಿದೆ. ಮಧುಮೇಹದಿಂದ ಬಳಲುತ್ತಿದ್ದೇನೆ. ಊರುಗೋಲಿನ ಸಹಾಯದಿಂದ ನಿಮ್ಮ ಮುಂದೆ ನಿಂತಿದ್ದೇನೆ. ಆದರೆ ನಾನು ಬರೆದ ಸಂವಿಧಾನದ ಪ್ರತಿ ಅಕ್ಷರ ಪುಟದಲ್ಲಿ ಜೀವಂತ ಇರುತ್ತೇನೆ. ನನ್ನ ಜನ ಸಂವಿಧಾನ ರಕ್ಷಣೆ ಮಾಡಿಕೊಂಡರೆ ಸಾಕು. ಇಂದಲ್ಲ ನಾಳೆ ಈ ದೇಶದ ಪ್ರಧಾನಿ, ಮುಖ್ಯಮಂತ್ರಿ ಕುರ್ಚಿಯಲ್ಲಿ ನನ್ನ ಜನ ಕುಳಿತುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಈಬಗ್ಗೆ ನಾವು ನೀವೆಲ್ಲಾ ಎಚ್ಚರ ವಹಿಸಬೇಕು ಎಂದರು.ಅಂಬೇಡ್ಕರ್ ರಚಿಸಿದ ಸಂವಿಧಾನವೇ ದೊಡ್ಡದು. ಇದರ ಅಡಿಯಲ್ಲಿ ಸುಪ್ರಿಂಕೋರ್ಟ್ ಸೇರಿ ಎಲ್ಲ ವ್ಯವಸ್ಥೆ ಇವೆ. ಹೀಗಾಗಿಯೇ ಬರಾಕ್ ಒಬಾಮ ಭಾರತಕ್ಕೆ ಬಂದಿದ್ದಾಗ ಹೇಳಿದ್ದು ಭಾರತವನ್ನು ಕಾಪಾಡಲು ಅಂಬೇಡ್ಕರ್ ಬರೆದ ಸಂವಿಧಾನವೇ ಸಾಕು ಎಂದಿದ್ದರು ಇದಕ್ಕೆ ದಾಖಲೆಯಿದೆ. ಇದು ಭೀಮಶಕ್ತಿಯ ಮಹತ್ವ. ನಮ್ಮ ಸಮುದಾಯ ನಿದ್ದೆಯಿಂದ ಎಚ್ಚೆತ್ತರೆ ಸಾಕು, ದೇಶದ ಚಿತ್ರಣವೇ ಬದಲಾಗಲಿದೆ ಎಂದರು.
ರಾಷ್ಟ್ರೀಯ ಪಕ್ಷಗಳೆಲ್ಲ ಮತ ಚೋರರೇಇತ್ತೀಚೆಗೆ ಮತಚೋರಿ ಜೋರಾಗಿ ಸದ್ಧು ಮಾಡುತ್ತಿದೆ. ನನ್ನ ಪ್ರಕಾರ ರಾಷ್ಟ್ರೀಯ ಪಕ್ಷಗಳೆಲ್ಲಾ ಮತಚೋರರೇ ಆಗಿದ್ದಾರೆ.ಅಧಿಕಾರ ಇಲ್ಲದಿದ್ದಾಗ ಇವರ ಮೇಲೆ ಅವರು ದೂರುತ್ತಾರೆ.ಅವರ ಮೇಲೆ ಇವರು ದೂರುತ್ತಾರೆ.ಆದ್ದರಿಂದ ಡಾ.ವೆಂಕಟಸ್ವಾಮಿ ಹೇಳುವಂತೆ ಕಾಂಗ್ರೆಸ್ ಪಕ್ಷವು ಕಾಶ್ಮೀರಿ ಬ್ರಾಹ್ಮಣರ ಕೈಗೊಂಬೆ, ಬಿಜೆಪಿ ಆರ್‌ಎಸ್‌ಎಸ್ ಜನಸಂಘಗಳು ಚಿತ್ಪಾವನ ಬ್ರಾಹ್ಮಣರ ಕೈಗೊಂಬೆ, ಸಿಪಿಐಎಂ, ಸಿಪಿಐ ಪಶ್ಚಿಮ ಬಂಗಾಳದ ಬ್ರಾಹ್ಮಣರ ಕಂಟ್ರೋಲ್‌ನಲ್ಲಿವೆ. ಇವರು ಶೋಷಿತರನ್ನು, ದಲಿತರನ್ನು, ನೊಂದವರನ್ನು ಎಂದಿಗೂ ಕಾಪಾಡುವುದಿಲ್ಲ. ಕಾಪಾಡುವವರು ಯಾರೆಂದರೆ ಬಾಬಾ ಸಾಹೇಬರು ಬರೆದ ಸಂವಿಧಾನ ಮಾತ್ರ ಎಂದರು.
ಸಂವಿಧಾನದ ಪೀಠಿಕೆಯಲ್ಲಿ ಇರುವ ಭಾರತದ ಪ್ರಜೆಗಳಾದ ನಾವು ಎಂಬ ಶಬ್ಧಗಳೇ ದೇಶವಾಸಿಗಳನ್ನು 78 ವರ್ಷಗಳಿಂದ ಒಂದಾಗಿ ಹಿಡಿದಿಟ್ಟಿವೆ. ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಏಳು ಸುತ್ತಿನ ಕೋಟೆ ರಕ್ಷಣೆ ಮೂಲಕ ಮದಕರಿ ನಾಯಕರ ಕೀರ್ತಿ ಬೆಳಗುವಂತೆ ಮಾಡಿದ ಒನಕೆ ಓಬವ್ವ ಇಬ್ಬರೂ ಕೂಡ ಛಲವಾದಿ ಸಮುದಾಯದವರು ಎನ್ನುವುದೇ ಹೆಮ್ಮೆಯ ವಿಚಾರವಾಗಿದೆ ಎಂದರು.ಒನಕೆಯಿಂದ ಅಧಿಕಾರ:ರಾಜ್ಯವಿರಲಿ ಕೇಂದ್ರವಿರಲಿ ಹಸಿದವರ ಹಕ್ಕುಗಳನ್ನು ಕಸಿಯುವ ಸರ್ಕಾರಗಳು ನಮ್ಮ ಮುಂದಿವೆ. ನಮ್ಮ ರಾಜ್ಯದಲ್ಲಿ 7029 ಹಳ್ಳಿಗಳಲ್ಲಿ ದಲಿತರಿಗೆ ಸ್ಮಶಾನಕ್ಕೆ ಭೂಮಿಯೇ ಇಲ್ಲ. ನಮ್ಮ ಸ್ಥೀತಿ ಹೇಗಿದೆ ನೋಡಿ. ಒಂದು ಒನಕೆ ಏಳು ಸುತ್ತಿನ ಕೋಟೆ ಕಾದಿದೆ ಎನ್ನುವುದಾದರೆ, ರಾಜ್ಯದ ಉದ್ದಗಲಕ್ಕೂ ಇರುವ ಛಲವಾದಿ ಹೆಣ್ಣು ಮಕ್ಕಳು ಕೈಯಲ್ಲಿ ಒಂದೊಂದು ಒನಕೆ ಹಿಡಿದು ಬೀದಿಗಿಳಿದರೆ ಏನಾಗಬಹುದು ನೀವೇ ಊಹಿಸಿ. ಮುಖ್ಯಮಂತ್ರಿ ಹುದ್ದೆಯನ್ನು ದಲಿತರಿಗೆ ನೀಡಲಿಲ್ಲ. ದಲಿತರು ಕೇವಲ ಓಟು ಹಾಕಲು ಮಾತ್ರ ಹುಟ್ಟಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಡಿ ರಾಷ್ಟ್ರೀಯ ಅಧ್ಯಕ್ಷ ಎಂ.ವೆಂಕಟಸ್ವಾಮಿ,ಬಸವನಾಗಿದೇವ ಸ್ವಾಮೀಜಿ, ಓಬವ್ವ ವಂಶಸ್ಥ ನಿರಂಜನಮೂರ್ತಿ,ಉದ್ಯಮಿ ಸುರೇಶ್‌ರಾಜ್, ಶಶಿಕುಮಾರ್, ಶ್ರೀನಿವಾಸ್, ಮುನಿಆಂಜಿನಪ್ಪ, ಕೈವಾರ ಮಂಜಣ್ಣ,ಎಸ್‌ಎಸ್‌ಡಿ ರಾಷ್ಟ್ರೀಯಪ್ರಧಾನ ಕಾರ್ಯದರ್ಶಿ ಜಿ.ಸಿ.ವೆಂಕಟರೋಣಪ್ಪ, ಮೇಲೂರು ಮಂಜುನಾಥ್, ತ್ಯಾಗರಾಜ್, ಮತ್ತಿತರರು ಇದ್ದರು.