ಸಾರಾಂಶ
ಗಣಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು ಎಂದು ಹೇಳಿಕೊಳ್ಳುವವರ ದೊಡ್ಡ ಪಡೆಯೇ ಇದೆ. ಆದರೆ, ಕಾಂಗ್ರೆಸ್‌ಗೆ ಮಾತ್ರ ಜಿಲ್ಲಾ ಕೇಂದ್ರದಲ್ಲಿ ಸ್ವಂತದೊಂದು ಸೂರಿಲ್ಲ!
ಮಂಜುನಾಥ ಕೆ.ಎಂ.
ಬಳ್ಳಾರಿ: ಜಿಲ್ಲೆಯ ತುಂಬೆಲ್ಲ ಕಾಂಗ್ರೆಸ್ ಶಾಸಕರಿದ್ದಾರೆ. ಸಂಸದ, ರಾಜ್ಯಸಭಾ ಸದಸ್ಯರು ಸಹ ಕಾಂಗ್ರೆಸ್ಸಿನವರು. ಮಹಾನಗರ ಪಾಲಿಕೆ, ಬಳ್ಳಾರಿ ಅಭಿವೃದ್ಧಿ ಪ್ರಾಧಿಕಾರದಲ್ಲೂ ಕಾಂಗ್ರೆಸ್ಸಿನವರೇ ಅಧಿಕಾರದಲ್ಲಿದ್ದಾರೆ. ಗಣಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು ಎಂದು ಹೇಳಿಕೊಳ್ಳುವವರ ದೊಡ್ಡ ಪಡೆಯೇ ಇದೆ. ಆದರೆ, ಕಾಂಗ್ರೆಸ್‌ಗೆ ಮಾತ್ರ ಜಿಲ್ಲಾ ಕೇಂದ್ರದಲ್ಲಿ ಸ್ವಂತದೊಂದು ಸೂರಿಲ್ಲ!
ಕಾಂಗ್ರೆಸ್ ಭದ್ರಕೋಟೆ ಎಂದೇ ಬಿಂಬಿತಗೊಂಡಿರುವ ಬಳ್ಳಾರಿ ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷವೊಂದರ ಸ್ಥಿತಿಯಿದು.
ಹೌದು, ರಾಜಕೀಯ ವಲಯದಲ್ಲಿ ಬಳ್ಳಾರಿ ಎಂದರೆ ಕಾಂಗ್ರೆಸ್‌ನ ಗಟ್ಟಿನೆಲ ಎಂಬ ಮಾತಿದೆ. ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ಸಿನ ರಾಜಕೀಯ ಶಕ್ತಿ ಹಾಗೂ ಸಾಮರ್ಥ್ಯ ಸಾಬೀತಾಗುತ್ತಲೇ ಇದೆ. ಪಕ್ಷದಿಂದ ಸ್ಪರ್ಧಿಸಿ ಶಾಸಕರು, ಸಂಸದರು ಸೇರಿದಂತೆ ನಾನಾ ರಾಜಕೀಯ ಸ್ಥಾನಮಾನಗಳನ್ನು ಕಂಡುಕೊಂಡವರು ರಾಜಕೀಯ ಭವಿಷ್ಯ ಕಟ್ಟಿಕೊಳ್ಳುತ್ತಿದ್ದಾರೆ. ವಿಪರ್ಯಾಸ ಎಂದರೆ ಪಕ್ಷಕ್ಕೊಂದು ಶಾಶ್ವತ ನೆಲೆ ಮಾಡಬೇಕೆಂಬ ಇಚ್ಛಾಶಕ್ತಿ ಈ ಹಿಂದಿನ ನಾಯಕರಿಗೂ ಬಂದಿರಲಿಲ್ಲ, ಈಗಿನ ಕಾಂಗ್ರೆಸಿಗರಲ್ಲೂ ಅಂತಹ ಲಕ್ಷಣಗಳು ಕಂಡು ಬರುತ್ತಿಲ್ಲ. ಹೀಗಾಗಿ ಕಳೆದ ಹತ್ತಾರು ದಶಕಗಳಿಂದಲೂ ಬಾಡಿಗೆ ಕಟ್ಟಡದಲ್ಲಿಯೇ ಕಚೇರಿ ನಿರ್ವಹಣೆ ಮಾಡುವ ಅನಿವಾರ್ಯ ತಪ್ಪಿಲ್ಲ.
ಪಕ್ಷದ ಕಚೇರಿಯ ಅಲೆದಾಟ:
ಕಾಂಗ್ರೆಸ್ಸಿಗೆ ಸ್ವಂತ ಕಟ್ಟಡವಿಲ್ಲವಾದ್ದರಿಂದ ಜಿಲ್ಲೆಯಲ್ಲಿ ಅಧ್ಯಕ್ಷರು ಬದಲಾದಂತೆ ಪಕ್ಷದ ಕಚೇರಿಯೂ ಬದಲಾಗುತ್ತದೆ. ಆಯಾ ಅಧ್ಯಕ್ಷರು ತಮಗೆ ಅನುಕೂಲಕ್ಕೆ ತಕ್ಕ ಜಾಗದಲ್ಲಿ ಕಚೇರಿ ಆರಂಭಿಸುತ್ತಾರೆ. ಚುನಾವಣೆ ಸಂದರ್ಭದಲ್ಲಿ ಒಂದು ಕಡೆ, ಸಾಮಾನ್ಯ ದಿನಗಳಲ್ಲಿ ಒಂದು ಕಡೆ ಹೀಗೆ ಕಚೇರಿಯ ಸ್ಥಾನ ಬದಲಾಗುತ್ತಲೇ ಇರುತ್ತದೆ. ಕಚೇರಿ ಅಲೆದಾಟದಿಂದ ಪಕ್ಷಕ್ಕೆ ನಗರದಲ್ಲಿ ಶಾಶ್ವತ ವಿಳಾಸವೇ ಇಲ್ಲದಂತಾಗಿದೆ.
ಬಳ್ಳಾರಿಯಲ್ಲಿ ಸುಸಜ್ಜಿತ ಕಾಂಗ್ರೆಸ್ ಭವನ ನಿರ್ಮಿಸಲಾಗುವುದು. ಇದಕ್ಕಾಗಿ ಜಾಗ ಹುಡಕಾಟದಲ್ಲಿದ್ದೇವೆ ಎಂದು ಅನೇಕ ವರ್ಷಗಳಿಂದಲೂ ಕಾಂಗ್ರೆಸ್ ನಾಯಕರು ಹೇಳುತ್ತಲೇ ಬಂದಿದ್ದಾರಾದರೂ ಈ ವರೆಗೆ ಸೂಕ್ತ ಜಾಗ ಸಿಕ್ಕಿಲ್ಲ. ಹೀಗಾಗಿ ನಗರದಲ್ಲಿ ಜಾಗ ಹುಡಕಾಟದ ಕೆಲಸ ಇನ್ನು ಮುಂದುವರಿದಿದೆ.
ಜೆಡಿಎಸ್-ಬಿಜೆಪಿಗೆ ಕಚೇರಿಗಳಿವೆ:
ಕಳೆದ ಒಂದೂವರೆ ದಶಕದಿಂದೀಚೆಗಷ್ಟೇ ರಾಜಕೀಯ ಅಧಿಕಾರದ ಮುನ್ನೆಲೆಗೆ ಬಂದಿರುವ ಬಿಜೆಪಿ, ನಗರದ ವಾಜಪೇಯಿ ಬಡಾವಣೆಯಲ್ಲಿ ಸುಸಜ್ಜಿತ ಕಚೇರಿಯನ್ನು ನಿರ್ಮಿಸಿದೆ. ಜೆಡಿಎಸ್‌ನ ಜಿಲ್ಲಾ ಕಚೇರಿ ಅನೇಕ ವರ್ಷಗಳಿಂದಲೂ ಇದೆ. ಆದರೆ, ಕಾಂಗ್ರೆಸ್‌ಗೆ ಮಾತ್ರ ಸ್ವಂತ ಕಟ್ಟಡ ನಿರ್ಮಿಸಿಕೊಂಡು ಕಚೇರಿ ನಿರ್ವಹಣೆ ಮಾಡುವ ಯೋಗ ಕೂಡಿ ಬಂದಿಲ್ಲ. ಹೀಗಾಗಿ ಕಾಂಗ್ರೆಸ್‌ನ ರಾಜಕೀಯ ಚಟುವಟಿಕೆ ಬಾಡಿಗೆ ಕಚೇರಿಯಲ್ಲಿಯೇ ಮುಂದುವರಿದಿವೆ.
ಜಿಲ್ಲೆಯ ಯಾವ ನಾಯಕರಿಗೂ ಜಿಲ್ಲಾ ಕೇಂದ್ರದಲ್ಲೊಂದು ಸ್ವಂತ ಕಟ್ಟಡ ನಿರ್ಮಿಸುವ ಕಾಳಜಿ ಇಲ್ಲ. ವಿಧಾನಸಭಾ, ಲೋಕಸಭಾ ಚುನಾವಣೆಗಳಲ್ಲಿ ಮಾತ್ರ ಪಕ್ಷದ ಟಿಕೆಟ್‌ಗೆ ದುಂಬಾಲು ಬೀಳುವ ನಾಯಕರು, ಗೆದ್ದ ಮೇಲೆ ಪಕ್ಷಕ್ಕೆ ಸ್ವಂತ ಸೂರು ನಿರ್ಮಿಸುವ ಯೋಚನೆ ಮಾಡುವುದಿಲ್ಲ. ಹೀಗಾಗಿಯೇ ಬಾಡಿಗೆ ಕಚೇರಿಯನ್ನೇ ಅವಲಂಬಿಸಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸುವ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು, ರಾಜ್ಯ ನಾಯಕರಾದರೂ ಈ ಬಗ್ಗೆ ಗಮನ ನೀಡುವಂತಾಗಬೇಕು ಎನ್ನುತ್ತಾರೆ.
ಬಳ್ಳಾರಿ ನಗರದಲ್ಲಿ ಕಾಂಗ್ರೆಸ್‌ನ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ. ನಮ್ಮ ನಾಯಕರು ಜಾಗ ಹುಡುಕಾಟದಲ್ಲಿದ್ದಾರೆ. ಶೀಘ್ರವೇ ಪಕ್ಷಕ್ಕೆ ಸ್ವಂತ ಸೂರಿನ ಕನಸು ನನಸಾಗಲಿದೆ ಎನ್ನುತ್ತಾರೆ ಕೆಪಿಸಿಸಿ ಮಾಧ್ಯಮ ವಕ್ತಾರ, ಬಳ್ಳಾರಿ ವೆಂಕಟೇಶ್ ಹೆಗಡೆ.