ರಾಷ್ಟ್ರಕವಿ ಕುವೆಂಪು ಸಾರಿದ್ದು ನಾಸ್ತಿಕವಾದವಲ್ಲ ವಿಚಾರವಾದ: ಡಾ.ಚಂದ್ರು ಕಾಳೇನಹಳ

| Published : Jan 01 2024, 01:15 AM IST

ರಾಷ್ಟ್ರಕವಿ ಕುವೆಂಪು ಸಾರಿದ್ದು ನಾಸ್ತಿಕವಾದವಲ್ಲ ವಿಚಾರವಾದ: ಡಾ.ಚಂದ್ರು ಕಾಳೇನಹಳ
Share this Article
  • FB
  • TW
  • Linkdin
  • Email

ಸಾರಾಂಶ

ದೇವರು ಎಂಬುದು ಒಂದು ಶಕ್ತಿಯ ಅಸ್ತಿತ್ವ. ಪ್ರಕೃತಿಯಲ್ಲಿ ಅಡಗಿರುವ ಶಕ್ತಿ. ಇಲ್ಲಿ ಯಾರು ಮುಖ್ಯರಲ್ಲ ಯಾರು ಅಮುಖ್ಯರಲ್ಲ. ಕುವೆಂಪು ಅವರದ್ದು ವಿಚಾರವಾದ. ಅಪೂರ್ವವಾದದ್ದನ್ನು ಸಾಧಿಸಿದ ಮಹಾನ್ ಚೇತನ. ಸಾಮಾಜಿಕ ನ್ಯಾಯ, ಬೌದ್ಧಿಕ ಪ್ರೌಢಿಮೆ ಕಡಿಮೆ ಇದ್ದ ಸಂದರ್ಭದಲ್ಲಿ ಕುವೆಂಪು ಬಂದರು. ಕಲೆಗಾಗಿ ಕಲೆ, ಸಾಹಿತ್ಯಕ್ಕಾಗಿ ಸಾಹಿತ್ಯ ಎನ್ನುವ ಭಾವ ಮೀರಿ ಜವಾಬ್ದಾರಿ ಮೆರೆದವರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ರಾಷ್ಟ್ರಕವಿ ಕುವೆಂಪು ಸಾರಿದ್ದು ನಾಸ್ತಿಕವಾದವಲ್ಲ ವಿಚಾರವಾದ. ಅವರು ಬ್ರಾಹ್ಮಣರನ್ನು ವಿರೋಧಿಸುತ್ತಿರಲಿಲ್ಲ. ಬ್ರಾಹ್ಮಣಿಕೆಯನ್ನು ವಿರೋಧಿಸುತ್ತಿದ್ದರು ಎಂದು ಚನ್ನರಾಯಪಟ್ಟಣದ ರಂಗಕರ್ಮಿ, ಜಾನಪದ ತಜ್ಞ ಡಾ.ಚಂದ್ರು ಕಾಳೇನಹಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನ್ನಡ ವಿಭಾಗ, ಸಾಂಸ್ಕೃತಿಕ ಸಮಿತಿ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಕುವೆಂಪು ಅವರ ಜಯಂತಿ ಅಂಗವಾಗಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.

ದೇವರು ಎಂಬುದು ಒಂದು ಶಕ್ತಿಯ ಅಸ್ತಿತ್ವ. ಪ್ರಕೃತಿಯಲ್ಲಿ ಅಡಗಿರುವ ಶಕ್ತಿ. ಇಲ್ಲಿ ಯಾರು ಮುಖ್ಯರಲ್ಲ ಯಾರು ಅಮುಖ್ಯರಲ್ಲ. ಕುವೆಂಪು ಅವರದ್ದು ವಿಚಾರವಾದ. ಅಪೂರ್ವವಾದದ್ದನ್ನು ಸಾಧಿಸಿದ ಮಹಾನ್ ಚೇತನ. ಸಾಮಾಜಿಕ ನ್ಯಾಯ, ಬೌದ್ಧಿಕ ಪ್ರೌಢಿಮೆ ಕಡಿಮೆ ಇದ್ದ ಸಂದರ್ಭದಲ್ಲಿ ಕುವೆಂಪು ಬಂದರು. ಕಲೆಗಾಗಿ ಕಲೆ, ಸಾಹಿತ್ಯಕ್ಕಾಗಿ ಸಾಹಿತ್ಯ ಎನ್ನುವ ಭಾವ ಮೀರಿ ಜವಾಬ್ದಾರಿ ಮೆರೆದವರು. ದಾರಿ ತಪ್ಪಿದ ಸಂಸ್ಕೃತಿಯನ್ನು ಸರಿದಾರಿಗೆ ತರಲು ಸಾಹಿತ್ಯವನ್ನು ಸಾಧನವಾಗಿಸಿದ ಗರಿಮೆ ಕುವೆಂಪು ಅವರದ್ದು ಎಂದರು.

ರಾಮಾಯಣ ಮಹಾಭಾರತ ಇಟ್ಟುಕೊಂಡು ಶೂದ್ರ ಮತ್ತು ದಲಿತ ಸಮುದಾಯಕ್ಕೆ ಆದ ಅನ್ಯಾಯವನ್ನು ಸಾಹಿತ್ಯದ ಮೂಲಕ ಪ್ರತಿಭಟಿಸಿದ ಧೀಮಂತ. ಅವತಾರ ಪುರುಷ ಕುವೆಂಪು ರಚಿಸಿದ ಮುಂದಿನ ತಲೆಮಾರನ್ನು ಕಾಯುವ ಶಕ್ತಿ ರಾಮಾಯಣದರ್ಶನಂ ಕೃತಿಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ರವೀಂದ್ರ ಮಾತನಾಡಿ, ಕುವೆಂಪು ಅವರ ಪ್ರತಿ ಸಣ್ಣ ವಿಚಾರಗಳು ನಮ್ಮ ಬದುಕಿಗೆ ಅಳವಡಿಕೆಯಾದಾಗ ಮಾತ್ರ ನಮ್ಮೀ ಬದುಕು ಸುಂದರವಾಗುತ್ತದೆ ಎಂದರು.

ಚನ್ನರಾಯಪಟ್ಟಣದ ರಂಗಕರ್ಮಿ ಮೋಹನ್ ಮಟ್ಟನವಿಲೆ ದಿನದ ಮಹತ್ವ ಕುರಿತು ಮಾತನಾಡಿದರು. ಕಾಲೇಜಿನ ಪ್ರಥಮ ಬಿಬಿಎ ವಿದ್ಯಾರ್ಥಿನಿ ಕವನ, ಪ್ರಥಮ ಎಂ.ಕಾಂ ವಿದ್ಯಾರ್ಥಿ ಯೋಗೇಶ್ ಗೌಡ, ಪ್ರಥಮ ಬಿ.ಎ ಕೀರ್ತನ, ಪ್ರಥಮ ಬಿ.ಎಸ್ಸಿ ಸಹನ, ಪ್ರಥಮ ಬಿ.ಕಾಂನ ಜಿ.ಕೆ. ಕಾರ್ತಿಕ್ ಕುವೆಂಪು ಹಾಗೂ ಅವರ ವಿಚಾರಗಳ ಕುರಿತು ಮಾತನಾಡಿದರು.

ಕನ್ನಡ ವಿಭಾಗದ ಮುಖ್ಯಸ್ಥೆ ಹೊಂಬಾಳಮ್ಮ, ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಂ.ರವಿಕುಮಾರ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಬಿ.ಎಚ್.ಕಾವ್ಯ ಸೇರಿದಂತೆ ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಎಚ್.ಆರ್.ತ್ರಿವೇಣಿ ಕಾರ್ಯಕ್ರಮ ನಿರ್ವಹಿಸಿ ನಿರೂಪಿಸಿದರು.