ಇಂದು ಕುಪ್ಪಳ್ಳಿಯಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನೋತ್ಸವ

| Published : Dec 29 2023, 01:31 AM IST

ಇಂದು ಕುಪ್ಪಳ್ಳಿಯಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ರಾಷ್ಟ್ರಕವಿ ಕುವೆಂಪು ವಿಶ್ವಮಾನವರಾಗಿ ಬೆಳೆದವರು. ವಿಶ್ವಮಾನವತ್ವವನ್ನು ಸಾರಿದ ಅವರ ಜನ್ಮದಿನೋತ್ಸವದ ಅಂಗವಾಗಿ ವಿಶ್ವಮಾನವ ದಿನಾಚರಣೆ ಮತ್ತು ಕುವೆಂಪು ರಾಷ್ಟ್ರೀಯ ಪುರಸ್ಕಾರ ಸಮಾರಂಭವು ಡಿ.29ರಂದು ತೀರ್ಥಹಳ್ಳಿ ತಾಲೂಕು ಕುಪ್ಪಳಿಯ ಹೇಮಾಂಗಣದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ರಾಷ್ಟ್ರಕವಿ ಕುವೆಂಪು ಜನ್ಮದಿನೋತ್ಸವದ ಅಂಗವಾಗಿ ನಡೆಯುವ ವಿಶ್ವಮಾನವ ದಿನಾಚರಣೆ ಮತ್ತು ಕುವೆಂಪು ರಾಷ್ಟ್ರೀಯ ಪುರಸ್ಕಾರ ಸಮಾರಂಭ ಡಿ.29ರಂದು ಕುಪ್ಪಳಿಯ ಹೇಮಾಂಗಣದಲ್ಲಿ ನಡೆಯಲಿದೆ.

ಬೆಳಗ್ಗೆ 10 ಗಂಟೆಗೆ ಕವಿಶೈಲದಲ್ಲಿ ಕವಿನಮನ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಹೇಮಾಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಖ್ಯಾತ ಬಂಗಾಳಿ ಸಾಹಿತಿ ಶೀರ್ಷೇಂಧು ಮುಖ್ಯೋಪಾಧ್ಯಾಯ ಅವರಿಗೆ 2023ರ ಕುವೆಂಪು ರಾಷ್ಟ್ರೀಯ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಆರಗ ಜ್ಞಾನೇಂದ್ರ ವಹಿಸಲಿದ್ದು, ಕುವೆಂಪು ಪ್ರತಿಷ್ಠಾನ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಪ್ರದಾನ ಭಾಷಣ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ತಂಗಡಗಿ ಶಿವರಾಜ್ ಸಂಗಪ್ಪ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ಮತ್ತು ಡಾ. ಜಿ.ಕೆ. ವೆಂಕಟೇಶ್, ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ, ಶಾಸಕರಾದ ಬಿ.ಕೆ.ಸಂಗಮೇಶ್ವರ್, ಬೇಳೂರು ಗೋಪಾಲಕೃಷ್ಣ, ಶಾರದಾ ಪೂರ್ಯಾನಾಯ್ಕ್, ಎಸ್.ಎನ್. ಚನ್ನಬಸಪ್ಪ, ಬಿ.ವೈ. ವಿಜಯೇಂದ್ರ, ವಿಧಾನ ಪರಿಷತ್ತು ಸದಸ್ಯರಾದ ಎಸ್.ಎಲ್. ಭೋಜೇಗೌಡ, ಎಸ್.ರುದ್ರೇಗೌಡ, ಭಾರತಿ ಶೆಟ್ಟಿ, ಡಿ.ಎಸ್. ಅರುಣ್ ಮತ್ತು ದೇವಂಗಿ ಗ್ರಾಪಂ ಅಧ್ಯಕ್ಷೆ ಗಿರಿಜಾ ಕುಮಾರ್, ಸದಸ್ಯರಾದ ಎಚ್.ಸಿ. ಸರೋಜಾ ಮತ್ತು ಟಿ.ಎಸ್. ನಾಗರಾಜ್ ಪಾಲ್ಗೊಳ್ಳಲಿದ್ದಾರೆ.

ಪುಸ್ತಕ ಬಿಡುಗಡೆ:

1922ರಲ್ಲಿ ಬಿಡುಗಡೆಯಾದ ಕುವೆಂಪು ಅವರ ಮೊದಲ ಪುಸ್ತಕ ಬಿಗಿನರ್ಸ್ ಮ್ಯೂಸ್ ಕೃತಿಗೆ 100 ವರ್ಷ ಸಂದಿರುವ ನೆನಪಿನಲ್ಲಿ ಕವಿಯ ಎರಡು ಇಂಗ್ಲಿಷ್ ಕವನ ಸಂಕಲನಗಳನ್ನು ಸೇರಿಸಿ ಪ್ರಕಟಿಸಲಾಗಿರುವ “ಬಿಗಿನರ್ಸ್ ಮ್ಯೂಸ್ ಅಚಿಡ್ ಅಲೈನ್ ಹಾರ್ಪ್” ಕೃತಿ ಮತ್ತು ಕುವೆಂಪು ಪ್ರಶಸ್ತಿ ಪುರಸ್ಕೃತ ಸಾಹಿತಿ ಶೀರ್ಷೇಂಧು ಮುಖ್ಯೋಪಾಧ್ಯಾಯ ಅವರ ಬಂಗಾಳಿ ಕಥೆಗಳಿಂದ ಆಯ್ದು ನಾಗ ಎಚ್. ಹುಬ್ಬಿ ಕನ್ನಡಕ್ಕೆ ಅನುವಾದಿಸಿರುವ “ಸಾಮೀಪ್ಯ” ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ಇದರೊಂದಿಗೆ 2024ರ ಕ್ಯಾಲೆಂಡರ್ ಸಹ ಬಿಡುಗಡೆಗೊಳಿಸಲಾಗುವುದು.

ಕಾರ್ಯಕ್ರಮದ ಅಂಗವಾಗಿ ಡಿ.29ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಸಂಜೆ 7 ಗಂಟೆಗೆ ನಮ್‌ ಟೀಮ್ ಶಿವಮೊಗ್ಗ ಅಭಿನಯದ ಕುವೆಂಪು ರಚಿಸಿರುವ ವಾಲ್ಮೀಕಿಯ ಭಾಗ್ಯ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಕುವೆಂಪು ಪ್ರಶಸ್ತಿ:

ರಾಷ್ಟ್ರೀಯ ಮಟ್ಟದ ಈ ಪ್ರಶಸ್ತಿ ಫಲಕದೊಂದಿಗೆ ₹5 ಲಕ್ಷ ನಗದು ಬಹುಮಾನವನ್ನೂ ಒಳಗೊಂಡಿದೆ. ಈ ನಗದು ಬಹುಮಾನವನ್ನು ಕುವೆಂಪುರವರ ಬದುಕು ಬರಹ ಮತ್ತು ತತ್ವಾದರ್ಶಗಳಿಂದ ಪ್ರೇರಣೆಗೊಂಡಿರುವ ಶಿಕ್ಷಣ ತಜ್ಞರೂ ಹಾಗೂ ಸಜ್ಜನ ರಾಜಕಾರಣಿಗಳಾಗಿದ್ದ ಸ್ವರ್ಗೀಯ ಎಂ.ಚಂದ್ರಶೇಖರ್ ಕುಟುಂಬದವರ ಆರ್ಥಿಕ ನೆರವಿನೊಂದಿಗೆ ನೀಡಲಾಗುತ್ತಿದೆ.

- - - ಬಾಕ್ಸ್‌ ಬಂಗಾಳಿ ಸಾಹಿತಿ ಶೀರ್ಷೇಂಧು ಪರಿಚಯ: ಬಂಗಾಳಿ ಭಾಷೆಯ ಮಹತ್ವದ ಕಥೆಗಾರರಾದ ಶೀರ್ಷೇಂಧು ಮುಖ್ಯೋಪಾಧ್ಯಾಯ ಪ್ರಸ್ತುತ ಬಾಂಗ್ಲಾ ದೇಶದಲ್ಲಿರುವ ಮೈಮೆನ್ಸಿಂಗ್ ಎಂಬಲ್ಲಿ 1935 ನವೆಂಬರ್ 2ರಂದು ಜನಿಸಿದರು. ಕೋಲ್ಕೊತ್ತ ವಿ.ವಿ.ಯಲ್ಲಿ ಬಂಗಾಳಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಶೀರ್ಷೇಂಧು ಮುಖ್ಯೋಪಾಧ್ಯಾಯ, ಆರಂಭದಲ್ಲಿ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನವನ್ನು ಆರಂಭಿಸಿದವರು. ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿದ ಇವರ ಮೊದಲ ಕಥೆ 1959 ರಲ್ಲಿ ದೇಶ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈವರೆಗೆ 90ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಇದರಲ್ಲಿ 50 ಕೃತಿಗಳನ್ನು ಮಕ್ಕಳಿಗಾಗಿಯೇ ಬರೆದಿದ್ದಾರೆ. ಇವರ ಕಥೆಗಳನ್ನು ಆಧರಿಸಿ 17 ಚಲನಚಿತ್ರಗಳು ನಿರ್ಮಾಣಗೊಂಡಿವೆ.ಮಕ್ಕಳ ಸಾಹಿತ್ಯಕ್ಕಾಗಿ 1985 ರಲ್ಲಿ ವಿದ್ಯಾಸಾಗರ ಪ್ರಶಸ್ತಿ, ಎರಡು ಬಾರಿ ಆನಂದ ಪುರಸ್ಕಾರ, ಮನಬ್ಜಮನ್ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಂಗಬಿಭೂಷಣ್ ಪ್ರಶಸ್ತಿ, ಆನಂದಸೆರ ಬಂಗಾಳಿ ಪ್ರಶಸ್ತಿಗಳು ಸಂದಿವೆ. 2021ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಕೂಡ ಇವರಿಗೆ ದೊರೆತಿದೆ.

- - - -28ಟಿಟಿಎಚ್1.ಜೆಪಿಜಿ: ಶೀರ್ಷೇಂಧು ಮುಖ್ಯೋಪಾಧ್ಯಾಯ

-ಫೋಟೋ: ರಾಷ್ಟ್ರಕವಿ ಕುವೆಂಪು