ಕನ್ನಡ ವಿಭಾಗದ ಮುಖ್ಯಸ್ಥರಾದ ನಾಗರಾಜ ಹೆಗಡೆ ಅಪಗಾಲ ಮಾತನಾಡಿ, ವಿಚಾರಸಂಕಿರಣವನ್ನು ಸಂಸ್ಕೃತಿ ಚಿಂತಕರಾದ ಡಾ. ರಹಮತ್ ತರೀಕೆರೆ ಉದ್ಘಾಟಿಸುವರು. ಕೃಷ್ಣಾನಂದ ಕಾಮತ್‌ ಅವರ ಜೀವನ ದರ್ಶನ ಕುರಿತು ಅವರ ಮಗ ವಿಕಾಸ್ ಕಾಮತ್ ಮಾತನಾಡಲಿದ್ದಾರೆ ಎಂದರು.

ಹೊನ್ನಾವರ: ಪಟ್ಟಣದ ಎಂಪಿಇ ಸೊಸೈಟಿಯ ಎಸ್ಡಿಎಂ ಪದವಿ ಕಾಲೇಜಿನ ಕನ್ನಡ ವಿಭಾಗ, ಕೃಷ್ಣಾನಂದ ಕಾಮತ್ ಪ್ರತಿಷ್ಠಾನ ಮತ್ತು ಬೆಂಗಳೂರಿನ ಅಭಿನವ ಹಾಗೂ ವಿ.ಸೀ. ಸಂಪದ ಇವುಗಳ ಸಹಯೋಗದಲ್ಲಿ ಪ್ರವಾಸ ಸಾಹಿತ್ಯ ಪರಂಪರೆ ಮತ್ತು ಕೃಷ್ಣಾನಂದ ಕಾಮತ ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಅ. ೮ ಮತ್ತು ೯ರಂದು ಕಾಲೇಜಿನ ಆರ್. ಎಸ್. ಹೆಗಡೆ ಸಭಾಭವನದಲ್ಲಿ ನಡೆಯಲಿದೆ ಎಂದು ಎಂಪಿಇ ಸಂಸ್ಥೆಯ ಉಪಾಧ್ಯಕ್ಷ ನಾಗರಾಜ ಕಾಮತ್ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಬಳಿಕ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ನಾಗರಾಜ ಹೆಗಡೆ ಅಪಗಾಲ ಮಾತನಾಡಿ, ವಿಚಾರಸಂಕಿರಣವನ್ನು ಸಂಸ್ಕೃತಿ ಚಿಂತಕರಾದ ಡಾ. ರಹಮತ್ ತರೀಕೆರೆ ಉದ್ಘಾಟಿಸುವರು. ಕೃಷ್ಣಾನಂದ ಕಾಮತ್‌ ಅವರ ಜೀವನ ದರ್ಶನ ಕುರಿತು ಅವರ ಮಗ ವಿಕಾಸ್ ಕಾಮತ್ ಮಾತನಾಡಲಿದ್ದಾರೆ ಎಂದರು.

ಸಂಜೆ ೩ ಗಂಟೆಯಿಂದ ವಿ.ಸೀ. ಗೌರವ ಪ್ರದಾನ ಸಮಾರಂಭ ಜರುಗಲಿದೆ. ತಾರಾ ಭಟ್ಟ ಅವರು ವಿ.ಸೀ. ಕವಿತೆಗಳನ್ನು ಹಾಡಲಿದ್ದು, ವಿ.ಸೀ. ಸಂಪದ ಕೋಶಾಧ್ಯಕ್ಷ ರಂಗನಾಥರಾವ್ ಆಶಯ ನುಡಿಗಳನ್ನಾಡಲಿದ್ದಾರೆ. ವಿ.ಸೀ. ಮಾಧ್ಯಮ ಗೌರವವನ್ನು ಹಿರಿಯ ಪತ್ರಕರ್ತ ಜಿ.ಯು. ಭಟ್ಟ ಅವರಿಗೆ, ವಿ.ಸೀ. ಗೀತ ಗೌರವ ಪ್ರಶಸ್ತಿಯನ್ನು ಗಾಯಕ ಪಂ. ಪರಮೇಶ್ವರ ಹೆಗಡೆ ಅವರಿಗೆ ವಾಲ್ಮೀಕಿ ವಿವಿ ರಾಯಚೂರು ಇದರ ಕುಲಪತಿಗಳಾದ ಡಾ. ಶಿವಾನಂದ ಕೆಳಗಿನಮನಿ ಪ್ರದಾನ ಮಾಡಲಿದ್ದಾರೆ ಎಂದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಜಿ. ಎನ್. ಭಟ್ಟ ಮಾತನಾಡಿ ಅ. ೯ರಂದು ಅಲಿಖಿತ ಪ್ರವಾಸ ಸಾಹಿತ್ಯ ಕುರಿತು ಕನ್ನಡ ವಿ.ವಿ. ಹಂಪಿಯ ಡಾ. ವೆಂಕಟಗಿರಿ ದಳವಾಯಿ, ನನ್ನೊಳಗಿನ ಹಾಡು ಕ್ಯೂಬಾ ಕೃತಿ ಕುರಿತು ರಂಗತಜ್ಞ ಕಿರಣ ಭಟ್ಟ, ಜೆರೊಸಲಂ ಕೃತಿ ಕುರಿತು ಡಾ. ರಂಗನಾಥ ಕಂಟನಕುಂಟೆ, ಪೆರುವಿನ ಪವಿತ್ರ ಕಣಿವೆಯಲ್ಲಿ ಕೃತಿ ಕುರಿತು ಬಿ.ಕೆ. ಸುಮತಿ, ಅಲೆಮಾರಿಯ ಅಂಡಮಾನ್ ಕೃತಿ ಕುರಿತು ಡಾ. ನರೇಂದ್ರ ರೈ ದೇರ್ಲ, ಗಂಗೆಯ ಶಿಖರಗಳಲ್ಲಿ ಕೃತಿ ಕುರಿತು ಡಾ. ರಾಜಶೇಖರ ಜಮದಂಡಿ, ನಾನೂ ಅಮೆರಿಕೆಗೆ ಹೋಗಿದ್ದೆ ಕೃತಿ ಕುರಿತು ಡಾ. ಚೈತ್ರ ಹೆಗಡೆ ವಿಚಾರವನ್ನು ಮಂಡಿಸಲಿದ್ದಾರೆ. ನಂತರ ಸಮಾರೋಪ ಸಮಾರಂಭ ಜರುಗಲಿದೆ ಎಂದರು.ಕಾಲೇಜಿನ ಉಪ ಪ್ರಾಚಾರ್ಯ ಡಾ. ಎಂ.ಜಿ. ಹೆಗಡೆ, ಕನ್ನಡ ವಿಭಾಗದ ಪ್ರಶಾಂತ ಮೂಡಲಮನೆ, ವಿದ್ಯಾಧರ ಕಡತೋಕ ಮತ್ತಿತರಿದ್ದರು.