ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಶಿಬಿರಾರ್ಥಿಗಳು ರಾಷ್ಟೀಯ ಸೇವಾ ಯೋಜನೆಯ ಧ್ಯೇಯವನ್ನು ಅರಿತುಕೊಳ್ಳುವುದು ಅತ್ಯಗತ್ಯ ಎಂದು ರೆಂಜಾಳ ಶ್ರೀ ಮಹಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಹಾವೀರ ಹೆಗ್ಡೆ ಹೇಳಿದ್ದಾರೆ.ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಹಯೋಗದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ರೆಂಜಾಳದ ಸಂಯುಕ್ತ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ‘ನಮ್ಮ ಭಾರತಕ್ಕಾಗಿ ನಮ್ಮ ಯುವಜನತೆ’ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು .
ಸಾರ್ವಜನಿಕ ಸೇವೆಯ ಮೂಲಕ ವ್ಯಕ್ತಿತ್ವವನ್ನು ವೃದ್ಧಿಗೊಳಿಸುವ ಮುಖ್ಯ ಉದ್ದೇಶವನ್ನು ಇಟ್ಟುಕೊಂಡ ರಾಷ್ಟೀಯ ಸೇವೆ ಯೋಜನೆ ವಿದ್ಯಾರ್ಥಿಗಳನ್ನು ಲೋಕ ಸೇವೆಯ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ರಾಷ್ಟ್ರಪ್ರೇಮ ಮತ್ತು ಸೇವಾಭಾವನೆಗಳನ್ನು ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸಿ, ಮತ್ತಷ್ಟು ಪ್ರೇರಣೆ ನೀಡಬೇಕು ಎಂದು ಆಶಿಸಿದರು.ಈ ಒಂದು ವಾರದ ಅನುಭವಧಾರೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಸಮರ್ಥ ನಾಯಕತ್ವ ಹಾಗೂ ಸಮಾಜಪರ ಚಟುವಟಿಕೆಗಳನ್ನು ನಡೆಸಲು ಸ್ಪೂರ್ತಿ ನೀಡುತ್ತವೆ ಎಂದು ಹೇಳಿದರು.
ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸ್ವರ್ಣಲತಾ ಮಾತನಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆಯು ಸಾಂಸ್ಕೃತಿಕವಾಗಿ , ಶೈಕ್ಷಣಿಕವಾಗಿ ಕ್ರೀಡೆಯ ಮೂಲಕ ಮಹತ್ತರವಾದ ಸಾಧನೆಗಳನ್ನು ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಮಾಡುತ್ತಿರುವ ಪ್ರತಿಷ್ಠಿತ ವಿದ್ಯಾದೇಗುಲ ಎಂದರು. ಯುವಜನತೆ ದೇಶದ ದೊಡ್ಡ ಆಸ್ತಿ. ನಮ್ಮ ಭಾರತಕ್ಕಾಗಿ ನಮ್ಮ ಯುವ ಜನತೆ ಎಂಬ ಧ್ಯೇಯ ವಾಕ್ಯವನ್ನು ಪರಿಪಾಲಿಸುತ್ತಾ, ಸಾಧ್ಯವಾಗುವಷ್ಟು ಸೇವೆಯನ್ನು ಮಾಡಿ , ಶಿಕ್ಷಣ ಸಂಸ್ಥೆಗೂ ಉತ್ತಮ ಹೆಸರನ್ನು ತರುವಲ್ಲಿ ಪ್ರಯತ್ನಿಸಿ. ಶಿಬಿರದ ಅದ್ಬುತ ಅನುಭವನ್ನು ನಿಮ್ಮದಾಗಿಸಿಕೊಳ್ಳಿ ಎಂದು ಸಲಹೆ ನೀಡಿದರು .ಉದ್ಯಮಿ ರಾಜೇಶ್ ರೆಂಜಾಳ ಮಾತನಾಡಿ , ಯುವಜನರ ಬುದ್ಧಿಮತ್ತೆ ವೃದ್ಧಿಸಲು ಹಾಗೂ ದೇಶದೊಳಗಿನ ಮನಸ್ಥಿತಿಯನ್ನು ಒಗ್ಗೂಡಿಸಲೆಂದು ಆರಂಭಗೊಂಡಿದ್ದು ರಾಷ್ಟೀಯ ಸೇವಾ ಯೋಜನೆ . ಮನುಷ್ಯ ಪರಿಪೂರ್ಣನಾಗಲು ಕೇವಲ ನಾಲ್ಕು ಗೋಡೆಯ ಪಠ್ಯಪುಸ್ತಕದ ಶಿಕ್ಷಣ ಸಾಲದು. ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಬಯಲು ಶಿಕ್ಷಣದ ಅರಿವು ಮೂಡಿಸಿದಾಗ ಶಿಕ್ಷಣಕ್ಕೆ ನಿಜವಾದ ಅರ್ಥ ಸಿಗುತ್ತವೆ. ಎಂದರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ ಡಿ, ರೆಂಜಾಳದ ಸರಕಾರಿ ಹಿ.ಪ್ರಾ. ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತ ಹೆಗ್ಡೆ, ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರ ಅಣ್ಣಿ, ರಾಷ್ಟ್ರೀಯ ಸೇವಾ ಯೋಜನೆಯ ದ .ಕ ಜಿಲ್ಲಾ ನೋಡಲ್ ಅಧಿಕಾರಿ ಅರುಣ್ ಕುಮಾರ್ ಇದ್ದರು.ಆಳ್ವಾಸ್ ಪ. ಪೂ ಕಾಲೇಜಿನ ಸಂಖ್ಯಾಶಾಸ್ತ್ರ ಉಪನ್ಯಾಸಕಿ ಶ್ಯಾಲೆಟ್ ಮೊನಿಸ್ ನಿರೂಪಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಅಂಬರೀಷ್ ಚಿಪಳೂಣಕರ ಸ್ವಾಗತಿಸಿ, ಶಿಬಿರಾಧಿಕಾರಿ ಮತ್ತು ರಾಷ್ಟೀಯ ಸೇವಾ ಯೋಜನಾಧಿಕಾರಿ ಧರ್ಮೇಂದ್ರ ಕುದ್ರೋಳಿ ವಂದಿಸಿದರು.