ಕಿತ್ತೂರು: ರಾಷ್ಟ್ರೀಯ ಸೇವಾ ಯೋಜನೆ ಶಿಬಿರಕ್ಕೆ ಚಾಲನೆ

| Published : Mar 19 2025, 12:31 AM IST

ಸಾರಾಂಶ

ದೇಶ ಸದೃಢಗೊಳ್ಳಲು ಯುವ ಸಮಾಜದಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಹಾಸನ ವಿದ್ಯಾನಿಲಯದ ಪ್ರಾಧ್ಯಾಪಕ ಡಾ. ವಸಂತ ಕುಮಾರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ದೇಶ ಸದೃಢಗೊಳ್ಳಲು ಯುವ ಸಮಾಜದಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಹಾಸನ ವಿದ್ಯಾನಿಲಯದ ಪ್ರಾಧ್ಯಾಪಕ ಡಾ.ವಸಂತ್ ಕುಮಾರ್ ಅಭಿಪ್ರಾಯ ಪಟ್ಟರು.

ಅವರು ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ವತಿಯಿಂದ ಹಂಡ್ಲಿ ಗ್ರಾ.ಪಂ.ವ್ಯಾಪ್ತಿಯ ಕಿತ್ತೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ 2024-25ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಯುವಕರು ಸಮಾಜವನ್ನು ನಿರ್ಮಾಣ ಮಾಡುವುದರಿಂದ ರಾಷ್ಟ್ರ ಬಲಿಷ್ಠಗೊಳ್ಳುತ್ತದೆ. ಆದರೆ ಯುವಕರು ಸಮಾಜವನ್ನು ಕಟ್ಟುವ ಪ್ರಜೆಗಳಾಗಬೇಕೆ ಹೊರತು ಮೊಬೈಲ್ ಗೀಳಿಗೆ ಅಂಟಿಕೊಳ್ಳುವ ವ್ಯಕ್ತಿಯಾಗಬಾರದು ಎಂದು ಹೇಳಿದರು.

ಶಿಬಿರಾಧಿಕಾರಿ ಎಂ.ಎನ್.ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಸಮಾಜ ನಿರ್ಮಾಣದ ರೂವಾರಿಗಳಾಗುತ್ತಾರೆ. ಸಮಾಜದಲ್ಲಿ ನಾಯಕತ್ವದ ಗುಣ ಬೆಳೆಸಿಕೊಳ್ಳಲು ವ್ಯಕ್ತಿತ್ವ ವಿಕಾಸಗೊಳಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ನಡೆಯವ ಶಿಬಿರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಇದು ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳನ್ನು ಸ್ಥಾಪಿಸಲಾಗಿ ಈ ಮೂಲಕ ವಾರ್ಷಿಕ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದರು.

ವಿದ್ಯಾಸಂಸ್ಥೆ ಅಧ್ಯಕ್ಷ ಜಗನ್‍ಪಾಲ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಸಂಸ್ಥೆ ಉಪಾಧ್ಯಕ್ಷ ಮಹಮ್ಮದ್ ಪಾಷ, ಕಾಲೇಜು ಪ್ರಾಂಶುಪಾಲ ಇ.ಎಂ.ದಯಾನಂದ್, ಪ.ಪೂ.ಕಾಲೇಜು ಪ್ರಾಂಶುಪಾಲ ಅಶೋಕ್, ಶಾಲಾ ಮುಖ್ಯ ಶಿಕ್ಷಕಿ ಬಿ.ಸಿ.ರೇಖಾ, ಶಿಕ್ಷಕಿ ಎಚ್.ಕೆ.ವಿಶಾಲಾಕ್ಷಿ, ಉಪನ್ಯಾಸಕ ಮೋಹನ್‍ಕುಮಾರ್, ಪ್ರಮುಖರಾದ ಕೆ.ವಿ.ಮಂಜುನಾಥ್, ಎಸ್.ಕೆ.ಶಿವಪ್ಪ ಮತ್ತಿತರರಿದ್ದರು.