ರಾಷ್ಟ್ರೀಯ ಅರ್ಹತಾ ಕೌಶಲ್ಯ ಚೌಕಟ್ಟು- ಕಾನೂನು ಹೋರಾಟದಲ್ಲಿ ಗೆದ್ದ ವಿದ್ಯಾರ್ಥಿಗಳು!

| Published : Nov 03 2025, 02:30 AM IST

ರಾಷ್ಟ್ರೀಯ ಅರ್ಹತಾ ಕೌಶಲ್ಯ ಚೌಕಟ್ಟು- ಕಾನೂನು ಹೋರಾಟದಲ್ಲಿ ಗೆದ್ದ ವಿದ್ಯಾರ್ಥಿಗಳು!
Share this Article
  • FB
  • TW
  • Linkdin
  • Email

ಸಾರಾಂಶ

ಇದೇ ವಿಷಯ ಆಧಾರವಾಗಿಸಿಕೊಂಡು ಮತ್ತೆ ಆರು ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.

ಎಂ. ಪ್ರಹ್ಲಾದ್ ಕನಕಗಿರಿ

ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು (ಎನ್‌ಎಸ್‌ಕ್ಯೂಎಫ್) ವಿಷಯ ಆಯ್ಕೆ ಮಾಡಿಕೊಂಡು ಅತಂತ್ರದಲ್ಲಿದ್ದ 10ನೇ ತರಗತಿ ವಿದ್ಯಾರ್ಥಿಗಳಿಗೆ ಅದೇ ವಿಷಯ ಮುಂದುವರಿಸುವಂತೆ ಧಾರವಾಡ ಹೈಕೋರ್ಟ್‌ ಪೀಠ ಆದೇಶ ನೀಡಿದೆ.

ಇಲ್ಲಿನ ಆದರ್ಶ (ಆರ್‌ಎಂಎಸ್‌ಎ) ಶಾಲೆಯ ೭ ವಿದ್ಯಾರ್ಥಿಗಳು ಕಳೆದ ಸಾಲಿನಲ್ಲಿ ಎನ್‌ಎಸ್‌ಕ್ಯೂಎಫ್‌ನಡಿ ಆಯ್ಕೆ ಮಾಡಿಕೊಂಡಿದ್ದ ಇನ್ಪಮೇರ್ಶನ್ ಟೆಕ್ನಾಲಜಿ (ಐಟಿ) ವಿಷಯವನ್ನು ಪ್ರಸಕ್ತ ಸಾಲಿನಲ್ಲಿ ಮುಂದುವರಿಸಲು ಆಗುವುದಿಲ್ಲ. ಈ ವಿಷಯದ ಬದಲಾಗಿ ಹಿಂದಿ ಆಯ್ಕೆ ಮಾಡಿಕೊಳ್ಳುವಂತೆ ಇಲಾಖೆಯ ಅಧಿಕಾರಿಗಳು ಮೌಖಿಕ ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ೧೫ ದಿನಗಳ ಹಿಂದೆ ಧಾರವಾಡ ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಬಗ್ಗೆ ನ್ಯಾಯಾಲಯವು ಕೂಲಂಕಷವಾಗಿ ಪರಿಶೀಲಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆಗುವ ತೊಂದರೆ ಮತ್ತು ಕೆಎಸ್‌ಇಎಬಿ ನಿಯಮಾವಳಿಯಂತೆ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿರುವ ವಿಷಯ ಬದಲಾಯಿಸಲು ಅವಕಾಶ ಇರುವುದಿಲ್ಲ ಎನ್ನುವ ಪ್ರಮುಖ ಅಂಶ ಎತ್ತಿ ಹಿಡಿದಿದೆ.

ಇದೇ ವಿಷಯ ಆಧಾರವಾಗಿಸಿಕೊಂಡು ಮತ್ತೆ ಆರು ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಬಗ್ಗೆಯೂ ನ್ಯಾಯಾಲಯವು ಪರಿಶೀಲಿಸಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ತೀರ್ಪು ನೀಡಿದ್ದು, ಎನ್‌ಎಸ್‌ಕ್ಯೂಎಫ್ ವಿಷಯ ನೀಡುವಂತೆ ಆದೇಶಿಸಲಾಗಿದೆ.

ತೀರ್ಪಿನಂತೆ ೧೩ ವಿದ್ಯಾರ್ಥಿಗಳಿಗೆ ಎನ್‌ಎಸ್‌ಕ್ಯೂಎಫ್ ವಿಷಯ ಮುಂದುವರಿಸಲು ಶಾಲಾ ಆಡಳಿತ ಮಂಡಳಿ ತಯಾರಿ ಮಾಡಿಕೊಳ್ಳುತ್ತಿದೆ. ಇನ್ನುಳಿದ ೨೪ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ೧೦ನೇ ತರಗತಿಯಲ್ಲಿ ಓದುತ್ತಿರುವ ಒಟ್ಟು ೩೭ ವಿದ್ಯಾರ್ಥಿಗಳ ಪೈಕಿ ೨೪ ಮಕ್ಕಳು ಎನ್‌ಎಸ್‌ಕ್ಯೂಎಫ್ ಬದಲಾಗಿ ಹಿಂದಿ ವಿಷಯಕ್ಕೆ ಒತ್ತಾಯ ಪೂರ್ವಕ ಪರೀಕ್ಷೆ ಬರೆದಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಭವಿಷ್ಯ ಇದೀಗ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಶಾಲೆಯ ೧೦ನೇ ತರಗತಿ ಮಕ್ಕಳೆಲ್ಲರಿಗೂ ಎನ್‌ಎಸ್‌ಕ್ಯೂಎಫ್ ವಿಷಯ ಮುಂದುವರಿಸಬೇಕು. ವಿಷಯ ಬದಲಾವಣೆಗೆ ಅವಕಾಶ ಇಲ್ಲ ಎನ್ನುವ ಆದೇಶವಿದ್ದರೂ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಬೇರೆ ವಿಷಯಕ್ಕೆ ಒತ್ತಾಯಪೂರ್ವಕ ಪರೀಕ್ಷೆ ಬರೆಯಿಸಿ ವಿಷಯ ಬದಲಾಯಿಸಲು ಯತ್ನಿಸಿದ್ದಾರೆ. ಶಾಲೆಯಲ್ಲಿ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ನ್ಯಾಯಾಲಯವು ಮಕ್ಕಳ ಪರವಾಗಿ ತೀರ್ಪು ನೀಡಿದೆ. ಅದರಂತೆ ಶಾಲಾ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು ಎಂದು ಪಾಲಕರಾದ ವೆಂಕಟೇಶ ಸೌದ್ರಿ ತಿಳಿಸಿದ್ದಾರೆ.

ಯಾವ ಮಕ್ಕಳಿಗೂ ಬೇರೆ ವಿಷಯಕ್ಕೆ ಪರೀಕ್ಷೆ ಬರೆಯುವಂತೆ ಹೇಳಿಲ್ಲ. ನ್ಯಾಯಾಲಯದ ತೀರ್ಪು ಹಾಗೂ ಮೇಲಧಿಕಾರಿಗಳ ಆದೇಶದಂತೆ ಎನ್‌ಎಸ್‌ಕ್ಯೂಎಫ್ ವಿಷಯಕ್ಕೆ ಆಯ್ಕೆ ಮಾಡಿಕೊಳ್ಳುವ ಮಕ್ಕಳಿಗೆ ಅವಕಾಶ ನೀಡಲಾಗುವುದು ಎಂದು ಮುಖ್ಯೋಪಾಧ್ಯಾಯ ಶಿವಕುಮಾರ ತಿಳಿಸಿದ್ದಾರೆ.