ಕನ್ನಡಪ್ರಭ ವಾರ್ತೆ ಇಂಡಿ
ಎನ್‌ಟಿಎ ರದ್ದುಪಡಿಸಬೇಕು. ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಇಂಡಿ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ದೇಶಾದ್ಯಂತ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಕೇಂದ್ರ ಸರ್ಕಾರದ ಬೇಜವಾಬ್ದಾರಿ ತನದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರಸ್ಥಿತಿಗೆ ಸಿಲುಕಿದೆ. ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರನ್ನು ಬಳಸಿ ದೌರ್ಜನ್ಯ ಎಸಗಿರುವುದು ಖಂಡನೀಯ. ವಿದ್ಯಾರ್ಥಿಗಳ ಮತ್ತು ಯುವ ಸಮುದಾಯದ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆ ಪ್ರವಾಸಿ ಮಂದಿರದಿಂದ ಹೊರಟು ಟಿಪ್ಪು ಸುಲ್ತಾನ, ಬಸವೇಶ್ವರ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ನಡೆದು ಮಿನಿ ವಿಧಾನಸೌಧ ತಲುಪಿತು.ಈ ಸಂದರ್ಭದಲ್ಲಿ ಮಾತನಾಡಿದ ಎನ್ಎಸ್‌ಯುಐ ತಾಲೂಕು ಅಧ್ಯಕ್ಷ ಸುನೀಲಕುಮಾರ ಅತನೂರ, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಅವಿನಾಶ ಬಗಲಿ, ದೇಶದ ಲಕ್ಷಾಂತರ ವಿಧ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ಕ್ಷೇತ್ರದ ಪಾರದರ್ಶಕತೆಯನ್ನು ರಕ್ಷಿಸುವ ಹಿತದೃಷ್ಠಿಯಿಂದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಹೋರಾಟ ಹಮ್ಮಿಕೊಂಡಿದ್ದು, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ನಡೆಸುವ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಗೊಂದಲಗಳಿಂದಾಗಿ ದೇಶದ ಲಕ್ಷಾಂತರ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ಕತ್ತಲಿಗೆ ತಳ್ಳಲ್ಪಟ್ಟಿದೆ. ಹೀಗಾಗಿ ತಕ್ಷಣವೇ ಎನ್.ಟಿ.ಎ ಸಂಸ್ಥೆಯನ್ನು ರದ್ದುಗೊಳಿಸಿ, ಪರೀಕ್ಷಾ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಬೇಕು. ಜತೆಗೆ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ದೆಹಲಿಯಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ನ್ಯಾಯಯುತ ಹೋರಾಟಕ್ಕೆ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟ ಘಟಕ ಇಂಡಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ, ಶ್ರಮಜೀವಿ ವಿದ್ಯಾರ್ಥಿಗಳ ಆಕ್ರೋಶಕ್ಕೆ ಸ್ಪಂದಿಸಿ, ಬಾಧಿತ ವಿದ್ಯಾರ್ಥಿಗಳಿಗೆ ತಕ್ಷಣವೇ ಸೂಕ್ತ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಎನ್ಎಸ್ ಯುಐ ಜಿಲ್ಲಾ ಅಧ್ಯಕ್ಷ ಕಿರಣ ಬಿರಾದಾರ,ಶಿವಯೋಗೆಪ್ಪ ಚನಗೊಂಡ,ಭಿಮಣ್ಣ ಕವಲಗಿ,ಶ್ರೀಕಾಂತ ಕುಡಿಗನೂರ,ಜಾವೀದ ಮೋಮಿನ,ರೈಸ್ ಅಸ್ಟೇಕರ, ಉಪಾಧ್ಯಕ್ಷ ಪ್ರಕಾಶ ರವಳಿ, ಸಚಿನ ಹೊಸಮನಿ, ಸಂಚಾಲಕ ಸಂತೋಷ ರವಳಿ, ಸುದೀಪ್ ಕಿತ್ತಲಿ, ಈಶ್ವರ ಸಜ್ಜನ, ಅಕ್ಬರ್ ಖಾನಿ, ಅಬ್ರಾರ ಮಕಂದರ, ಭರತ್ ಮಡ್ಡಿಮನಿ, ಗೋವಿಂದ ವಡ್ಡರ, ಆನಂದ, ಸತೀಶ ಹತ್ತಿ, ಗಂಗಾಧರ, ಜೆಟ್ಟೆಪ ಹುಲ್ಲೂರು ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.