ಸಮಾಜದ ಹಿತ ಬಯಸುವ ಮನೋಭಾವ ನಮ್ಮದಾಗಲಿ: ನ್ಯಾ.ರವಿಬಾಬು ಚವ್ಹಾಣ

| Published : Jan 26 2024, 01:49 AM IST

ಸಾರಾಂಶ

ಔರಾದ್‌ ಸರ್ಕಾರಿ ಐಟಿಐ ಕಾಲೇಜಿನಲ್ಲಿ ತಾಲೂಕು ಆಡಳಿತ ವತಿಯಿಂದ ಗುರುವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಸಿವಿಲ್ ನ್ಯಾಯಾಧೀಶ ರವಿಬಾಬು ಚವ್ಹಾಣ ಮಾತನಾಡಿದರು.

ಕನ್ನಡಪ್ರಭವಾರ್ತೆ ಔರಾದ್

ಸ್ವಹಿತ ಬದಿಗಿಟ್ಟು ಸಮಾಜ ಹಿತ ಬಯಸುವಂತಹ ಮನೋಭಾವ ನಮ್ಮದಾಗಬೇಕು. ಇದನ್ನು ಮತದಾನದ ಮೂಲಕ ವ್ಯಕ್ತಪಡಿಸಲು ಭಾರತ ಸಂವಿಧಾನ ನಮಗೆ ಬಹು ಮಹತ್ವದ ಹಕ್ಕು ನೀಡಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರವಿಬಾಬು ಚವ್ಹಾಣ ಹೇಳಿದರು.

ಪಟ್ಟಣದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ತಾಲೂಕು ಆಡಳಿತ ವತಿಯಿಂದ ಗುರುವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಯುವಜನ ದೇಶದ ಭವಿಷ್ಯ ಬೆಳಗಿಸುವ ಚಿಂತನೆಯೊಂದಿಗೆ ಮತದಾನಕ್ಕೆ ಅಣಿಯಾಗಬೇಕು ಎಂದರು.

ಪ್ರೌಢಶಾಲಾ ಶಿಕ್ಷಕ ಜಗನ್ನಾಥ ದೇಶಮುಖ ವಿಶೇಷ ಉಪನ್ಯಾಸ ನೀಡಿ, ಭವ್ಯ ಭಾರತದ ಇತಿಹಾಸ ಪರಂಪರೆ ಪ್ರಪಂಚದ ಗಮನ ಸೆಳೆಯುವಂತೆ ಮಾಡುವಂತಹ ನಾಯಕನ ಆಯ್ಕೆ ನಮ್ಮ ಕೈಯಲ್ಲಿದೆ. ಧನಾತ್ಮಕ ಚಿಂತನೆ, ಅಭಿವೃದ್ಧಿಯ ದೂರದೃಷ್ಟಿ, ಪರೋಪಕಾರದ ನಿಲುವು ಯುವಕರದ್ದಾಗಬೇಕು ಎಂದರು.

ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಶಿವಶಂಕರ ಟೋಕರೆ, ಯುಸುಫಮಿಯ್ಯ, ದೈಹಿಕ ಶಿಕ್ಷಣಾಧಿಕಾರಿ ಜೋಯಲ್ ಜೈರಾಜ್, ಪಿಎಸ್‌ಐ ರೇಣುಕಾ ಭಾಲೇಕರ್, ವಕೀಲರಾದ ವಿಜಯ ಜಾಧವ, ಬಾಲಾಜಿ ಉಪಾಸೆ, ಸಂಗಮೇಶ ಮರಖಲೆ ಸೇರಿ ಇನ್ನಿತರರಿದ್ದರು.