ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಎಲ್ಲಿಯೂ ಹಳಬರು, ಹೊಸಬರು ಎಂಬ ವ್ಯತ್ಯಾಸವಿಲ್ಲ. ಅಜೆಂಡಾ ಏನು ಎಂಬುವುದನ್ನು ಜನರೇ ಹೇಳುತ್ತಿದ್ದಾರೆ. ರಾಷ್ಟ್ರೀಯತೆ, ರಾಷ್ಟ್ರೀಯ ಭದ್ರತೆ, ಮುಂದಿನ ಪ್ರಧಾನಮಂತ್ರಿ ಯಾರಾಗಬೇಕು ಎಂಬ ವಿಚಾರಗಳ ಮೇಲೆ ಚುನಾವಣೆ ನಡೆಯುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಜನಸಾಮಾನ್ಯರಲ್ಲೂ ಇದೇ ವಿಷಯ ಚರ್ಚೆ ಆಗುತ್ತಿದೆ. ಮತ್ತೊಮ್ಮೆ ದೇಶದಲ್ಲಿ ಮೋದಿ ಪ್ರಧಾನಿ ಆಗಬೇಕು ಎಂಬ ಆಶಯವನ್ನು ಜನರೇ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಪಕ್ಷಗಳಿಗೆ ಬಿಜೆಪಿ ಮತ್ತು ಮೋದಿ ಬಗ್ಗೆ ಮಾತನಾಡಲು ಯಾವುದೇ ವಿಚಾರ ಮತ್ತು ವಿಷಯಗಳು ಇಲ್ಲ. ಆ ಹಿನ್ನೆಲೆಯಲ್ಲಿ ಬೇರೆ ವಿಷಯ ಚರ್ಚೆ ಮಾಡುತ್ತಿದ್ದಾರೆ. ಆದರೆ, ಜನಸಾಮಾನ್ಯರ ಬಳಿ ಹೋಗಿ ಕೇಳಿದರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಹೇಳುತ್ತಿದ್ದಾರೆ. ದೇಶ ರಕ್ಷಣೆ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮೋದಿ ಅವರಿಂದ ಮಾತ್ರ ಸಾಧ್ಯ ಎಂದು ಜನ ಮುಕ್ತವಾಗಿ ಹೇಳುತ್ತಿದ್ದಾರೆ ಎಂದು ಹೇಳಿದರು.
ರಾಮದುರ್ಗದಲ್ಲಿ ಚಿಕ್ಕರೇವಣ್ಣ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ಚಿಕ್ಕರೇವಣ್ಣ ಅವರಿಗೆ ಎರಡ್ಮೂರು ಬಾರಿ ನಾನು ಫೋನ್ ಮಾಡಿ ಮಾತಾಡಿದ್ದೇನೆ. ಅವರಿಗೆ ಸ್ವಲ್ಪ ಆರೋಗ್ಯದ ಸಮಸ್ಯೆಯಿದೆ. ಚುನಾವಣೆಯಲ್ಲಿ ಅವರು ಸಕ್ರಿಯವಾಗಿ ಪ್ರಚಾರ ಮಾಡಲಿದ್ದು, ಅವರ ಬೆಂಬಲಿಗರ ಜತೆಯೂ ಸಮಾಲೋಚನೆ ಮಾಡಿದ್ದೇನೆ. ಮಹಾದೇವಪ್ಪ ಯಾದವಾಡ ಜತೆಗೂ ಸಭೆ ಮಾಡಲಾಗಿದ್ದು, ಎಲ್ಲರೂ ಸಂಘಟಿತರಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಇನ್ನು ಸವದತ್ತಿಯ ಅನೇಕ ಹಳ್ಳಿಗಳಲ್ಲೂ ಪ್ರಚಾರ ಮಾಡಿದ್ದೇನೆ ಎಂದು ತಿಳಿಸಿದರು.ಲೋಕಸಭೆ ಚುನಾವಣೆ ರಾಜ್ಯ ಉಸ್ತುವಾರಿ ಅಗರವಾಲ್, ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ ಸಭೆ ಮಾಡಿದ್ದಾರೆ. ಬೂತ್ ಮಟ್ಟದ ಕಾರ್ಯಚಟುವಟಿಕೆ, ಸಂಘಟನೆ, ಪದಾಧಿಕಾರಿಗಳು ಮತ್ತು ಮುಖ್ಯಸ್ಥರ ಆಯ್ಕೆ ಕುರಿತು ವಿವರ ಪಡೆದುಕೊಂಡಿದ್ದಾರೆ. ಬೂತ್ ಮಟ್ಟದಲ್ಲಿ ಪಕ್ಷ ಬಲಿಷ್ಠವಾದರೆ ಚುನಾವಣೆಯಲ್ಲಿ ಯಶಸ್ವಿಯಾಗಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇದು ಬಿಜೆಪಿ ಮೂಲ ಮಂತ್ರವಾಗಿದ್ದು, ಇದಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಹೇಳಿದರು.
ಏ.15ರಂದು ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಬಂದೇ ಬರುತ್ತಾರೆ. ನಾನು ಹೋದ ಕಡೆಯಲ್ಲೆಲ್ಲ ಪ್ರತಿಯೊಬ್ಬರೂ ಕೂಡ ನಾಮಪತ್ರ ಯಾವಾಗ ಸಲ್ಲಿಸುತ್ತೀರಿ, ನಾವೂ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಬೇರೆ ಕಡೆಯಿಂದಲೂ ನಾವು ಬರುತ್ತೇವೆ ಎಂದು ಫೋನ್ ಕರೆಗಳು ಬರುತ್ತಿವೆ. ಇಂತಹ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರು ಆಗಮಿಸಲಿದ್ದಾರೆ. ಯಾವೆಲ್ಲಾ ನಾಯಕರು ಆಗಮಿಸುತ್ತಾರೆ ಎಂಬುದು ಅಂತಿಮ ಆದ ಬಳಿಕ ತಿಳಿಸುತ್ತೇನೆ ಎಂದು ಹೇಳಿದರು.ರಮೇಶ ಜಾರಕಿಹೊಳಿ ಅವರು ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಅದು ಅವರು ಮತ್ತು ಮಾಧ್ಯಮಗಳಿಗೆ ಬಿಟ್ಟ ವಿಚಾರ. ಇದರಲ್ಲಿ ನಾನು ಮಧ್ಯಪ್ರವೇಶ ಮಾಡೋದಿಲ್ಲ ಎಂದು ಜಗದೀಶ ಶೆಟ್ಟರ್ ಹಾಸ್ಯ ಚಟಾಕಿ ಹಾರಿಸಿದರು.