ಸಾರಾಂಶ
ಕನ್ನಡಪ್ರಭ ವಾರ್ತೆ ಕುಂದಾಪುರ
ಅಂಬೇಡ್ಕರ್ ರಚಿಸಿದ ಸಂವಿಧಾನದ ಮೂಲಭೂತ ಆಶಯವೇ ರಾಷ್ಟ್ರೀಯತೆ. ಈ ಸಂವಿಧಾನದ ಆಧಾರದ ಮೇಲೆ ನಮ್ಮ ರಾಷ್ಟ್ರೀಯತೆಯನ್ನು ಕಟ್ಟಬೇಕು. ಆದರೆ ಇಂದು ರಾಷ್ಟ್ರೀಯತೆ ವಿಕೃತಗೊಂಡಿದೆ, ಧರ್ಮ ಮೌಲ್ಯ ಕಳೆದುಕೊಂಡಿದೆ. ಶಿಕ್ಷಣವು ಸಹಿಷ್ಣುತೆ, ಸೌಹಾರ್ದತೆಯನ್ನು ಕಲಿಸುತ್ತದೆ ಎನ್ನುವುದಕ್ಕೆ ನಮ್ಮಲ್ಲಿ ಆಧಾರವೇ ಇಲ್ಲ. ಹೀಗಾಗಿ ಸಾಂಸ್ಕೃತಿಕ ಪತನ ಅತ್ಯಂತ ವೇಗವಾಗಿ ನಡೆಯುತ್ತಿದೆ ಎಂದು ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದರು.ಅವರು ಇಲ್ಲಿನ ಬಸ್ರೂರು ಮೂರುಕೈಯಲ್ಲಿ ಸಮುದಾಯ ಕರ್ನಾಟಕ ವತಿಯಿಂದ ‘ಘನತೆಯ ಬದುಕು: ಸಾಂಸ್ಕೃತಿಕ ಮಧ್ಯಪ್ರವೇಶ’ ಎಂಬ ಎರಡು ದಿನಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಭುತ್ವದಿಂದ ದೂರ ಸಿಡಿದು ನಿಂತಾಗ ಮಾತ್ರ ಅತ್ಯುತ್ತಮ ಕಲೆ, ಬರಹ, ನಾಟಕ, ಚಿತ್ರಗಳು ಸೃಷ್ಟಿಯಾಗುತ್ತವೆ. ಆದರೆ ಇಂದು ಪ್ರಭುತ್ವವನ್ನು ಧಿಕ್ಕರಿಸುವ ಶಕ್ತಿಯೇ ಗೌಣವಾಗುತ್ತಿದ್ದು, ಪ್ರಭುತ್ವ ಧಿಕ್ಕರಿಸುವವರನ್ನು ನಾಶಮಾಡುವ ಶಕ್ತಿ ಬೆಳೆದು ನಿಂತಿದೆ ಎಂದ ಅವರು, ಹೋರಾಟದ ಹಿನ್ನೆಲೆಯಿರುವರೆಲ್ಲರೂ ಜವಾಬ್ದಾರಿಗಳನ್ನು ಹೊಸ ತಲೆಮಾರಿಗೆ ದಾಟಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ರಾಜರಾಮ್ ತಲ್ಲೂರು ಪ್ರಾಸ್ತಾವಿಕ ಮಾತನಾಡಿ, ಉದಾರೀಕರಣಗೊಂಡ ಜಗತ್ತು ಸಣ್ಣದಾಗುತ್ತಿದ್ದಂತೆ, ಹಿಂದೆ ಕೂಡು ಕುಟುಂಬವಾಗಿದ್ದ ಕರಾವಳಿಯ ಮನೆಗಳು ಇಂದು ವೃದ್ಧಾಶ್ರಮಗಳಾಗುತ್ತಿವೆ. ಬ್ಯಾಂಕಿಂಗ್ ತೊಟ್ಟಿಲು, ಶಿಕ್ಷಣದ ಮೆಟ್ಟಿಲು ಆಗಿದ್ದ ಕರಾವಳಿಯು ಈಗ ಕಾರ್ಪೋರೇಟ್ ಬಿರಿಯಾನಿಗಳ ಬಟ್ಟಲು ಆಗುತ್ತಿವೆ. ಇಲ್ಲಿನ ನೆಲ, ಜಲ, ಆಕಾಶ ಕೂಡ ಕಾರ್ಪೊರೇಟರ್ ವಲಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಮುದಾಯ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಅಚ್ಯುತ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಆಮಂತ್ರಿತರಾಗಿ ಡಾ.ಎನ್.ಗಾಯತ್ರಿ, ಮಂಜುಳಾ, ಶ್ಯಾಮಲಾ ಪೂಜಾರ, ಸುಕನ್ಯಾ ಕೆ., ವೇದಾ, ಯಮುನಾ ಗಾಂವಕಾರ ಇದ್ದರು.ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರ ಗೌಡ ಸಮನ್ವಯಕಾರರಾಗಿದ್ದರು. ಸಮ್ಮೇಳನದ ಕಾರ್ಯಾಧ್ಯಕ್ಷ ಉದಯ ಗಾಂವ್ಕರ್ ಕಾರ್ಯಕ್ರಮ ನಿರೂಪಿಸಿದರು. ಬಾಕ್ಸ್
ಘನತೆಯ ಬದುಕು - ಅಧಿವೇಶನಗಳುವಾಸುದೇವ ಉಚ್ಚಿಲ ಅಧ್ಯಕ್ಷಕತೆಯಲ್ಲಿ ಘನತೆಯ ಬದುಕು - ಹೋರಾಟದ ಹಾದಿ ಮೊದಲ ಅಧಿವೇಶನ, ರಾಜ್ಯ ಸಮಿತಿ ಕೋಶಾಧಿಕಾರಿ ವಸಂತರಾಜ ಎನ್.ಕೆ.ಅಧ್ಯಕ್ಷತೆಯಲ್ಲಿ ಘನತೆಯ ಬದುಕು - ಕವಲು ದಾರಿ ಎಂಬ ಎರಡನೇ ಅದಿವೇಶನ ನಡೆಯಿತು.
ಕುಂ.ವೀರಭದ್ರಪ್ಪ ಕತೆ ಆಧಾರಿತ, ವಾಸುದೇವ ಬಂಗೇರ ನಿರ್ದೇಶನದಲ್ಲಿ ಸಮುದಾಯ ಧಾರವಾಡ ಕಲಾವಿದರಿಂದ ದೇವರ ಹೆಣ ನಾಟಕ ನಡೆಯಿತು.ತಾಳಮದ್ದಲೆ ಮೂಲಕ ಉದ್ಘಾಟನೆಸಮುದಾಯ ಸಮ್ಮೇಳನ ಯಕ್ಷಗಾನ ತಾಳಮದ್ದಳೆ ರಾಮಧಾನ್ಯ ಚರಿತೆ ಮೂಲಕ ಉದ್ಘಾಟನೆಗೊಂಡು ಗಮನ ಸೆಳೆಯಿತು. ಚಿಂತನಾ ಹೆಗಡೆ ಮಾಲ್ಕೋಡು ಭಾಗವತಿಕೆ, ಮದ್ದಳೆಯಲ್ಲಿ ಶಶಾಂಕ ಆಚಾರ್ಯ, ಹಿಮ್ಮೇಳಕ್ಕೆ ಅರ್ಥಧಾರಿಗಳಾಗಿ ಡಾ.ಬಿಳಿಮಲೆ, ಜಬ್ಬಾರ್ ಸಮೋ ಸಂಪಾಜೆ, ಸದಾಶಿವ ಆಳ್ವ ತಲಪಾಡಿ, ಡಾ.ಜಗದೀಶ ಶೆಟ್ಟಿ, ಮಾಧವಿ ಭಂಡಾರಿ ಕೆರೆಕೋಣ, ಮುಷ್ತಾಕ್ ಹೆನ್ನಾಬೈಲು ಇದ್ದರು.