ಪ್ರಾಕೃತಿಕ ದುರಂತ ನಿರ್ವಹಣೆ ಇನ್ನು ಬೆರಳ ತುದಿಯಲ್ಲಿ!

| Published : May 16 2024, 12:47 AM IST

ಪ್ರಾಕೃತಿಕ ದುರಂತ ನಿರ್ವಹಣೆ ಇನ್ನು ಬೆರಳ ತುದಿಯಲ್ಲಿ!
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಎಲ್ಲ ಏಳು ಸ್ಮಾರ್ಟ್‌ಸಿಟಿಗಳಲ್ಲಿ ಒನ್‌ ಸಿಟಿ -ಒನ್‌ ಆ್ಯಪ್‌ ಇದ್ದು, ಮಂಗಳೂರಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಗ್ರಾಮ ಮಟ್ಟದ ವರೆಗೂ ತುರ್ತು ಸ್ಪಂದನಕ್ಕೆ ಬಳಸುವಂತೆ ಮಾರ್ಪಾಟುಗೊಳಿಸಲಾಗಿದೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ಇನ್ನು ಯಾವುದೇ ರೀತಿಯ ಪ್ರಾಕೃತಿಕ ವಿಕೋಪ, ಇಲ್ಲವೇ ಯಾವುದೇ ದುರ್ಘಟನೆ ನಡೆದರೆ ಜಿಲ್ಲಾಡಳಿತ ಸೇರಿದಂತೆ ಸಂಬಂಧಿತ ಇಲಾಖೆಗಳ ತಕ್ಷಣ ಸ್ಪಂದನಕ್ಕೆ ಆ್ಯಪ್‌ವೊಂದು ಸಿದ್ಧಗೊಂಡಿದೆ. ಈ ಆ್ಯಪ್‌ನ್ನು ತೆರೆಯುವ ಮೂಲಕ ಇರುವ ಸ್ಥಳದಿಂದಲೇ ಎಲ್ಲ ಮಾಹಿತಿ ರವಾನಿಸಿ ತುರ್ತು ನೆರವು ಪಡೆಯಲು ಸಾಧ್ಯವಾಗಲಿದೆ.

ಕೇಂದ್ರ ಸರ್ಕಾರದ ಪರಿಕಲ್ಪನೆಯ ‘ಒನ್‌ ಸಿಟಿ-ಒನ್‌ ಆ್ಯಪ್‌’ ಅಡಿಯಲ್ಲಿ ಮಂಗಳೂರಿನ ಸ್ಮಾರ್ಟ್‌ಸಿಟಿ ಅಧಿಕಾರಿಗಳು ‘ಒನ್‌ ಟಚ್‌ ಮಂಗಳೂರು’ ಹೆಸರಿನ ಆ್ಯಪ್‌ ಸಿದ್ಧಪಡಿಸಿದ್ದಾರೆ. ಇದೇ ಆ್ಯಪ್‌ನ್ನು ಪ್ರಾಕೃತಿಕ ವಿಕೋಪಗಳಿಗೆ ತ್ವರಿತ ಸ್ವಂದಿಸುವಂತೆ ತುಸು ಬದಲಾವಣೆಗೊಳಿಸಲಾಗಿದೆ. ಹೀಗಾಗಿ ‘ಒನ್‌ ಟಚ್‌ ಮಂಗಳೂರು’ ಆ್ಯಪ್‌ ಮೂಲಕ ಪ್ರಾಕೃತಿಕ ದುರಂತ ಮಾತ್ರವಲ್ಲ, ತಾಪಮಾನ ವೈಪರೀತ್ಯ, ರಸ್ತೆ ಅವಘಡ, ಅಹಿತಕರ ಘಟನೆ, ಆರೋಗ್ಯ ತುರ್ತು ಸೇವೆ ಸೇರಿದಂತೆ ಎಲ್ಲ ವಿಧದ ಅಗತ್ಯ ಸಂದರ್ಭಗಳಲ್ಲಿ ಆಡಿಯೋ, ವಿಡಿಯೋ ಸಹಿತ ಸ್ಪಂದಿಸುವಂತೆ ರೂಪಿಸಲಾಗಿದೆ.

ಆ್ಯಪ್‌ ಕೆಲಸ ಹೇಗೆ?:

‘ಒನ್‌ ಟಚ್‌ ಮಂಗಳೂರು’ ಆ್ಯಪ್‌ನ್ನು ಆಂಡ್ರಾಯ್ಡ್‌ ಮೊಬೈಲ್‌ಗಳಲ್ಲಿ ಡೌನ್‌ಲೋಡ್‌ ಮಾಡಬೇಕು. ತುರ್ತು ಸಂದರ್ಭಗಳಲ್ಲಿ ಯಾವುದೇ ಅಧಿಕಾರಿಗಳ ಗಮನಕ್ಕೆ ತರಬೇಕಾದರೆ ಆ್ಯಪ್‌ನ್ನು ತೆರೆದು ಅದರಿಂದಲೇ ಫೋಟೋ ತೆಗೆದು ಕಳುಹಿಸಿದರೆ ಸಾಕು. ಅದು ಸಂಬಂಧಪಟ್ಟ ಅಧಿಕಾರಿಗಳ ಮೊಬೈಲ್‌ನಲ್ಲಿ ಅವರು ಪರಿಶೀಲಿಸುವ ವರೆಗೆ ಅಲಾರಾಂ ರೀತಿಯ ಸಂದೇಶ ನೀಡುತ್ತಲೇ ಇರುತ್ತದೆ. ಕೆಳ ಹಂತದ ಅಧಿಕಾರಿಗಳು ಸಂದೇಶ ನೋಡದಿದ್ದರೆ ಅಥವಾ ಸಮಸ್ಯೆ ಪರಿಹರಿಸದಿದ್ದರೆ ಮೇಲಧಿಕಾರಿಗಳಿಗೆ ರವಾನೆಯಾಗುತ್ತದೆ. ದೂರಿಗೆ ಸಂಬಂಧಿಸಿದ ಫೋಟೋ ಅಥವಾ ವಿಡಿಯೋ ಕಳುಹಿಸುವ ವ್ಯವಸ್ಥೆಯನ್ನು ಈ ಆ್ಯಪ್‌ನಲ್ಲಿ ಮಾಡಿರುವುದರಿಂದ ಘಟನೆ ಸಂಭವಿಸಿದ ಪ್ರದೇಶದ ಚಿತ್ರಣ ಸುಲಭದಲ್ಲಿ ಅಧಿಕಾರಿಗಳಿಗೆ ಸಿಗುತ್ತದೆ.

ಈ ಆ್ಯಪ್‌ ಮೂಲಕ ಕೇವಲ ಪ್ರಾಕೃತಿಕ ವಿಕೋಪ ಮಾತ್ರವಲ್ಲ ಪೊಲೀಸ್‌, ಅಗ್ನಿಶಾಮಕ, ಪಾಲಿಕೆಯ ಕುಂದುಕೊರತೆಯನ್ನೂ ಗಮನಕ್ಕೆ ತರಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆಂದೇ ಆ್ಯಪ್‌ನಲ್ಲಿ ಪ್ರತ್ಯೇಕ ವಿಭಾಗಗಳನ್ನು ರೂಪಿಸಲಾಗಿದೆ.

ರಾಜ್ಯದ ಎಲ್ಲ ಏಳು ಸ್ಮಾರ್ಟ್‌ಸಿಟಿಗಳಲ್ಲಿ ಒನ್‌ ಸಿಟಿ -ಒನ್‌ ಆ್ಯಪ್‌ ಇದ್ದು, ಮಂಗಳೂರಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಗ್ರಾಮ ಮಟ್ಟದ ವರೆಗೂ ತುರ್ತು ಸ್ಪಂದನಕ್ಕೆ ಬಳಸುವಂತೆ ಮಾರ್ಪಾಟುಗೊಳಿಸಲಾಗಿದೆ. ಈಗಾಗಲೇ ಮಹಾನಗರ ಪಾಲಿಕೆಯ ಕಸ ವಿಲೇವಾರಿ ಜಿಯೋ ಟ್ಯಾಗ್‌ ಕಣ್ಗಾವಲಿನಲ್ಲಿ ನಡೆಯುತ್ತದೆ. ಖಾಸಗಿ ಬಸ್‌ಗಳ ಸಂಚಾರಕ್ಕೂ ಜಿಯೋ ಟ್ರ್ಯಾಕಿಂಗ್‌ ಕಲ್ಪಿಸಲಾಗಿದೆ. ಇವೆಲ್ಲವೂ ‘ಒನ್‌ ಟಚ್‌ ಮಂಗಳೂರು’ ಆ್ಯಪ್‌ಗೆ ಲಿಂಕ್‌ ಹೊಂದಿವೆ.

ಇನ್ಸಿಡೆಂಟ್‌ ಕಮಾಂಡರ್‌ ಉಸ್ತುವಾರಿ

ಮಳೆಗಾಲದಲ್ಲಿ ಪ್ರಾಕೃತಿಕ ದುರಂತ ಸಂಭವಿಸಿದರೆ ಅದನ್ನು ಸಮರ್ಧವಾಗಿ ಎದುರಿಸಲು ಈ ಬಾರಿ ಇನ್ಸಿಡೆಂಟ್‌ ಕಮಾಂಡರ್‌ ಹುದ್ದೆಯನ್ನು ಸೃಷ್ಟಿಸಲಾಗಿದೆ.ಇವರು ಪ್ರತಿ ಗ್ರಾಮ ಮಟ್ಟದಲ್ಲಿ ಇರುತ್ತಾರೆ. ಇದುವರೆಗೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಇಂತಹ ಕಟ್ಟುನಿಟ್ಟಿನ ಕ್ರಮ ಇರಲಿಲ್ಲ. ಈ ಬಾರಿ ಸಣ್ಣಪುಟ್ಟ ಪ್ರಾಕೃತಿಕ ಅವಘಡಗಳು ಸಂಭವಿಸಿದರೂ ಇನ್ಸಿಡೆಂಟ್‌ ಕಮಾಂಡರ್‌ಗಳು ತಕ್ಷಣ ಸ್ಪಂದಿಸಲಿದ್ದಾರೆ. ಬಳಿಕ ಮೇಲಧಿಕಾರಿಗಳ ಗಮನಕ್ಕೂ ತರಲಿದ್ದಾರೆ. ಅವರಿಗೆ ನೆರವಾಗಲು ಈ ಆ್ಯಪ್‌ನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದಾಗಿ ಯಾವುದೇ ಘಟನೆ ಸಂಭವಿಸಿದರೂ ಕೂಡಲೇ ಸ್ಪಂದಿಸಲು ಸಾಧ್ಯವಾಗಲಿದೆ.‘ಒನ್‌ ಟಚ್‌ ಮಂಗಳೂರು’ ಆ್ಯಪ್‌ನಲ್ಲಿ ಪ್ರಾಕೃತಿಕ ಅವಘಡಗಳಿಗೆ ತುರ್ತು ಸ್ಪಂದಿಸುವ ಸಲುವಾಗಿ ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಅಗತ್ಯ ಅಂಶಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಮಳೆಗಾಲ ಆರಂಭದೊಳಗೆ ಈ ಆ್ಯಪ್‌ ಸಂಪೂರ್ಣವಾಗಿ ಬಳಕೆಗೆ ಲಭ್ಯವಾಗಲಿದೆ.

-ರಾಜು ಕೆ., ವ್ಯವಸ್ಥಾಪಕ ನಿರ್ದೇಶಕರು, ಸ್ಮಾರ್ಟ್‌ಸಿಟಿ ಮಂಗಳೂರು