ಕಾಡುಗಳ ನಾಶದಿಂದಲೇ ಪ್ರಕೃತಿ ವಿಕೋಪ

| Published : Jul 10 2025, 12:46 AM IST / Updated: Jul 10 2025, 12:47 AM IST

ಸಾರಾಂಶ

ಮಾನವನ ದುರಾಸೆಯಿಂದ ಅರಣ್ಯ ಕ್ಷೀಣಿಸುತ್ತಿದೆ. ಕಾಡುಗಳ ನಾಶದಿಂದಲೇ ಭೂಕಂಪ, ಸುನಾಮಿ, ವೈರಸ್ ಮಹಾಮಾರಿಗಳಂತಹ ವಿಕೋಪಗಳಾಗುತ್ತಿರುವುದು ಎಂದು ಭೈರಾಪುರ ಎಸ್. ವಿ. ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಬಿ.ಜಿ. ಗಿರೀಶ್ ಅಭಿಪ್ರಾಯಪಟ್ಟರು. ಈ ಹಸಿರನ್ನು ವೃದ್ಧಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಅರಣ್ಯೀಕರಣದ ಬಗ್ಗೆ ಗಮನಹರಿಸಬೇಕಿದೆ. ಮನೆಗೊಂದು ಮರ ಊರಿಗೊಂದು ವನದಂತೆ ಪ್ರತಿ ಪ್ರಜೆಯೂ ಹಸಿರನ್ನು ಉಳಿಸಿ, ಪೋಷಿಸುವ ನಿಟ್ಟಿನಲ್ಲಿ ಮಹತ್ವ ನೀಡಬೇಕಿದೆ ಎಂದರು.

ಕನ್ನಡಪ್ರಭ ವಾರ್ತೆ ಆಲೂರು

ಮಾನವನ ದುರಾಸೆಯಿಂದ ಅರಣ್ಯ ಕ್ಷೀಣಿಸುತ್ತಿದೆ. ಕಾಡುಗಳ ನಾಶದಿಂದಲೇ ಭೂಕಂಪ, ಸುನಾಮಿ, ವೈರಸ್ ಮಹಾಮಾರಿಗಳಂತಹ ವಿಕೋಪಗಳಾಗುತ್ತಿರುವುದು ಎಂದು ಭೈರಾಪುರ ಎಸ್. ವಿ. ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಬಿ.ಜಿ. ಗಿರೀಶ್ ಅಭಿಪ್ರಾಯಪಟ್ಟರು.

ಅವರು ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು ಹಾಗೂ ಶಾಲಾ ಸ್ಕೌಟ್ಸ್ & ಗೈಡ್ಸ್ ದಳಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪರಿಸರ ಸಕಲ ಜೀವರಾಶಿಗಳ ನಿತ್ಯದುಸಿರು. ಈ ಹಸಿರನ್ನು ವೃದ್ಧಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಅರಣ್ಯೀಕರಣದ ಬಗ್ಗೆ ಗಮನಹರಿಸಬೇಕಿದೆ. ಮನೆಗೊಂದು ಮರ ಊರಿಗೊಂದು ವನದಂತೆ ಪ್ರತಿ ಪ್ರಜೆಯೂ ಹಸಿರನ್ನು ಉಳಿಸಿ, ಪೋಷಿಸುವ ನಿಟ್ಟಿನಲ್ಲಿ ಮಹತ್ವ ನೀಡಬೇಕಿದೆ ಎಂದರು.

ಮುಖ್ಯ ಶಿಕ್ಷಕಿ ನಳಿನ ಗಿರೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ನಮ್ಮ ಶಾಲೆಯ ಪ್ರತಿಯೊಬ್ಬ ಸ್ಕೌಟ್, ಗೈಡ್, ಬುಲ್‌ಬುಲ್ ಹಾಗೂ ಕಬ್ ಮಗು ತಲಾ ಒಂದೊಂದು ಗಿಡಗಳನ್ನು ನೆಡುತ್ತಿದ್ದಾರೆ. ಇವುಗಳನ್ನು ನೆಟ್ಟರಷ್ಟೇ ಸಾಲದು ಅವುಗಳನ್ನು ಜೋಪಾನವಾಗಿ ಪೋಷಿಸಿ ಚೆನ್ನಾಗಿ ಬೆಳೆಸಬೇಕು ಎಂದರು.

ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಸುನಿಲ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯ ವಿವೇಕ್, ಕಬ್ ಮಾಸ್ಟರ್‌ ದೇವರಾಜ್, ಸ್ಕೌಟ್ ಮಾಸ್ಟರ್‌ ಎಸ್.ಜಿ.ಸತೀಶ್, ಲೇಡಿ ಸ್ಕೌಟ್ ಮಾಸ್ಟರ್‌ ರೋಸ್ ಮೇರಿ, ಶಾಂಭವಿ, ಸೌಮ್ಯಶ್ರೀ ಸೇರಿದಂತೆ ಶಾಲೆಯ ಸಿಬ್ಬಂಧಿ ಹಾಗೂ ಮಕ್ಕಳು ಹಾಜರಿದ್ದರು.