ರೈತರಲ್ಲಿ ನೈಸರ್ಗಿಕ ಕೃಷಿ ಪದ್ಧತಿ ಬಗ್ಗೆ ಜಾಗೃತಿ ಮೂಡಿಸಲು ಜ. 8ರಂದು ಹಾವೇರಿಯ ಅಂಬೇಡ್ಕರ್ ಭವನದಲ್ಲಿ ಒಂದು ದಿನದ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ನೈಸರ್ಗಿಕ ಕೃಷಿಯ ಮಹಾಗುರು ಪದ್ಮಶ್ರೀ ಡಾ.ಸುಭಾಷ್ ಪಾಳೇಕರ್ ಅವರಿಂದ ತರಬೇತಿ ನಡೆಯಲಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.
ಹಾವೇರಿ: ರೈತರಲ್ಲಿ ನೈಸರ್ಗಿಕ ಕೃಷಿ ಪದ್ಧತಿ ಬಗ್ಗೆ ಜಾಗೃತಿ ಮೂಡಿಸಲು ಜ. 8ರಂದು ಹಾವೇರಿಯ ಅಂಬೇಡ್ಕರ್ ಭವನದಲ್ಲಿ ಒಂದು ದಿನದ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ನೈಸರ್ಗಿಕ ಕೃಷಿಯ ಮಹಾಗುರು ಪದ್ಮಶ್ರೀ ಡಾ.ಸುಭಾಷ್ ಪಾಳೇಕರ್ ಅವರಿಂದ ತರಬೇತಿ ನಡೆಯಲಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲ ಮುಕ್ತ ಕೃಷಿ, ಸ್ವಾಭಿಮಾನದ ಕೃಷಿ ಇಂದಿನ ಅಗತ್ಯವಾಗಿದೆ. ರೈತರ ಸರಣಿ ಆತ್ಮಹತ್ಯೆಗಳನ್ನು ತಡೆಯಬೇಕಾಗಿದೆ. ಒಂದೇ ಬೆಳೆಗೆ ಬೆನ್ನತ್ತಿ ಹೋಗಿ, ಸರಿಯಾದ ಬೆಲೆ ಸಿಗದೆ ಕೈ ಸುಟ್ಟುಕೊಳ್ಳುವ ಪರಿಸ್ಥಿತಿಯನ್ನು ತಡೆಯುವ ನಿಟ್ಟಿನಲ್ಲಿ ರೈತರಲ್ಲಿ ಜಾಗೃತಿ ಅವಶ್ಯವಿದೆ. ಈ ಹಿನ್ನೆಲೆ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಭೂಮಿಯ ಫಲವತ್ತತೆ ಉಳಿಸಿಕೊಳ್ಳಲು, ವಿಷಮುಕ್ತ ಆಹಾರ ಬೆಳೆ ಬೆಳೆಯುವುದು, ಶೂನ್ಯ ಬಂಡವಾಳದಲ್ಲಿ ಕೃಷಿ ಮಾಡುವುದರ ಬಗ್ಗೆ ತರಬೇತಿ ಕೊಡಿಸಲು ಮುಂದಾಗಿದೆ. ಕಡಿಮೆ ಜಮೀನಿನಲ್ಲಿ, ಹೆಚ್ಚಿನ ಖರ್ಚು ಇಲ್ಲದೆ, ರಸಾಯನಿಕ ಗೊಬ್ಬರ ಬಳಕೆಗೆ ಉತ್ತೇಜನ ನೀಡದೇ ಸಂಪೂರ್ಣ ಸಾವಯವ ಕೃಷಿ ಕೈಗೊಳ್ಳಲು ಡಾ.ಸುಭಾಷ್ ಪಾಳೇಕರ ಅವರಿಂದ ತರಬೇತಿ ಕೊಡಿಸಲಾಗುತ್ತದೆ. ರೈತರು, ರೈತ ಮಹಿಳೆಯರು, ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು.ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಕಳೆದೆರಡು ತಿಂಗಳಿಂದ ರೈತ ಸಂಘ ನಿರಂತರ ಪ್ರತಿಭಟನೆ ನಡೆಸಿದ ಪರಿಣಾಮ ಸರ್ಕಾರ ಹಾಗೂ ಜಿಲ್ಲಾಡಳಿತ ಯಾವುದೇ ಪೂರ್ವ ತಯಾರಿ ಇಲ್ಲದೆ ಕಾಟಾಚಾರಕ್ಕೆ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪಿಸಿದೆ. ಜಿಲ್ಲೆಯಲ್ಲಿ 12 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆದಿದ್ದರೂ, ಕೇವಲ 20 ಸಾವಿರ ಮೆಟ್ರಿಕ್ ಟನ್ ನೋಂದಣಿ ಮಾಡಿಕೊಂಡಿದೆ. ಆದರೆ ಈ ನೋಂದಣಿಯು ರೈತರಿಗೆ ಪ್ರಯೋಜನವಾಗಿಲ್ಲ, ಬದಲಾಗಿ ವ್ಯಾಪಾರಿಗಳಿಗೆ ಅನುಕೂಲವಾಗಿದೆ. ಕೆಎಂಎಫ್, ಪೌಲ್ಟ್ರಿ ಫಾರಂನಿಂದ ಖರೀದಿಸಿದ್ದಾರೆ. ಖರೀದಿ ಕೇಂದ್ರದವರು ಈಗಾಗಲೇ ನೋಂದಣಿ ಪ್ರಕ್ರಿಯೆ ಮುಗಿದಿದೆ ಎಂದು ಹೇಳುತ್ತಿದ್ದು, ರೈತರು ಮಾತ್ರ ಇನ್ನೂ ಕಟಾವು, ಸಂಸ್ಕರಣೆಯನ್ನೇ ಮಾಡಿಲ್ಲ. ಜಮೀನು ಹಾಗೂ ಕಣಗಳಲ್ಲಿ ರಾಶಿಗಳು ಹಾಗೆ ಇವೆ. ಈ ಸರ್ಕಾರ ಹಾಗೂ ಜಿಲ್ಲಾಡಳಿತ ರೈತರ ಜೀವದ ಜತೆಗೆ ಚೆಲ್ಲಾಟವಾಡುತ್ತಿವೆ ಎಂದು ಕಿಡಿಕಾರಿದರು. ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಶಿವಬಸಪ್ಪ ಗೋವಿ, ಎಚ್.ಎಚ್. ಮುಲ್ಲಾ, ಮರಿಗೌಡ ಪಾಟೀಲ, ಮುತ್ತಪ್ಪ ಗುಡಗೇರಿ, ಚನ್ನಪ್ಪ ಮರಡೂರ, ರುದ್ರಗೌಡ ಕಾಡನಗೌಡ್ರ, ಬಸನಗೌಡ ಗಂಗಪ್ಪಳವರ, ಪ್ರಭಣ್ಣ ಪ್ಯಾಟಿ, ಪರಮೇಶಪ್ಪ ಅಗಡಿ ಇತರರು ಉಪಸ್ಥಿತರಿದ್ದರು.
ಕೃಷಿ ಪ್ರಧಾನವಾದ ದೇಶದಲ್ಲಿ ರೈತನನ್ನು ರಕ್ಷಣೆ ಮಾಡುವ ಸರ್ಕಾರಗಳು ಅವನ ಜೀವದ ಜತೆಗೆ ಚೆಲ್ಲಾಟ ಆಡುವುದನ್ನು ಬಿಡಬೇಕು. ತಾಲೂಕಿಗೆ ಒಂದರಂತೆ ಖರೀದಿ ಕೇಂದ್ರ ಆರಂಭಿಸಿ ರೈತರನ್ನು ರಕ್ಷಿಸಬೇಕು. ಅತಿವೃಷ್ಟಿ ಪರಿಹಾರದಲ್ಲಿ ಜಿಲ್ಲಾಡಳಿತ, ತಾಲೂಕಾಡಳಿತ ಸಾಕಷ್ಟು ತಾರತಮ್ಯ ನಡೆಸಿದ್ದು, ರೈತರನ್ನು ಭಿಕ್ಷುಕರಂತೆ ಕಾಣುತ್ತಿವೆ. ಈ ಕೂಡಲೇ ಅತಿವೃಷ್ಟಿ ಬೆಳೆ ಹಾನಿಗೆ ಸರಿಯಾದ ಪರಿಹಾರ ನೀಡಬೇಕು ಎಂದು ರೈತಸಂಘ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.ಕೆಲವು ರೈತರು ಮೆಕ್ಕೆಜೋಳವನ್ನು ಖರೀದಿ ಕೇಂದ್ರಕ್ಕೆ ತೆಗೆದುಕೊಂಡು ಹೋದಾಗ ಮೆಕ್ಕೆಜೋಳ ತೇವಾಂಶ ಹೆಚ್ಚಿದೆ, ಪೋಂಗಸ್ ಇದೆ. ಕಾಳು ಕಪ್ಪು ಇದೆ ಎಂದು ಇಲ್ಲಸಲ್ಲದ ನೆಪವೊಡ್ಡಿ ತಿರಸ್ಕರಿಸುತ್ತಿದ್ದಾರೆ. ಅತಿವೃಷ್ಟಿ ಮಳೆಯಿಂದ ಕಪ್ಪಾಗುವುದು ಸಹಜ. ಖರೀದಿದಾರರು ಹೊಂದಾಣಿಕೆ ಮಾಡಿಕೊಂಡು ಖರೀದಿಸಬೇಕು ಎಂದು ರಾಜ್ಯ ಸಮಿತಿ ಸದಸ್ಯ ಮಾಲತೇಶ ಪೂಜಾರ ಹೇಳಿದರು.