ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಿರ್ಮಲ ಭೂಮಾತ ಟ್ರಸ್ಟ್ ಹಾಗೂ ಸುಭಾಷ್ ಪಾಳೇಕರ್ ಕೃಷಿ ಜನಾಂದೋಲನ ಸಮಿತಿಯಿಂದ ಜೂ.11ರಿಂದ 13ರವರೆಗೆ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ಏರ್ಪಡಿಸಲಾಗಿದೆ ಎಂದು ಕೃಷಿ ಸಂಶೋಧಕ ಸುಭಾಷ್ ಪಾಳೇಕರ್ ತಿಳಿಸಿದರು.ಸುಭಾಷ್ ಪಾಳೇಕರ್ ಕೃಷಿ ಪದ್ಧತಿಯಿಂದ ರೈತರ ಕೃಷಿ ಸುಧಾರಣೆಯಾಗಲಿದ್ದು, ಆದಾಯ ಹೆಚ್ಚಳವಾಗುತ್ತದೆ. ನಾಟಿ ಹಸು ಆಧಾರಿತ ಕೃಷಿ ಇದಾಗಿದ್ದು, ಹಸು ಹಾಗೂ ಕೃಷಿ ಎರಡರಿಂದಲೂ ಆದಾಯಗಳಿಸಬಹುದಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅತಿಯಾದ ರಾಸಾಯನಿಕ ಬಳಕೆಯಿಂದ ಹವಾಮಾನ ವೈಪರೀತ್ಯ ಉಂಟಾಗಿದೆ. ರೈತ ತಾನು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ದೊರೆಯದೆ, ವೈಜ್ಞಾನಿಕ ಬೆಲೆಯೂ ಸಿಗದೆ, ರಾಸಾಯನಿಕ ಬಳಕೆಯಿಂದ ಕಡಿಮೆ ಇಳುವರಿ ದೊರೆಯುತ್ತಿರುವುದೂ ರೈತ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ವಿದೇಶಗಳಿಂದ ಆಮದಾಗುವ ಬಯೋ ಟೆಕ್ನಾಲಜಿಗಿಂತ ದೇಸಿ ಟೆಕ್ನಾಲಜಿ ಬಳಕೆ ಹೆಚ್ಚಾಗಬೇಕಿದೆ. ದೇಸಿ ಗೋವುಗಳನ್ನು ಬೆಳೆಸಿ ಅವುಗಳ ಮೂತ್ರ, ಸಗಣಿಯಿಂದ ಜೀವಾಮೃತ ತಯಾರಿಸಿ ಕೃಷಿಯಲ್ಲಿ ಬಳಸಿದಾಗ ಕೃಷಿಯಲ್ಲಿ ಉತ್ಪಾದನೆ ಹೆಚ್ಚಾಗಲಿದ್ದು, ಮಾರುಕಟ್ಟೆಯಿಂದ ಯಾವುದೇ ರೀತಿಯಾದ ಕೃಷಿ ಸಾಮಗ್ರಿಗಳನ್ನು ಖರೀದಿಸುವ ಅಗತ್ಯವೂ ಇರುವುದಿಲ್ಲವಾದ ಕಾರಣ ಕಡಿಮೆ ವೆಚ್ಚ ಅಥವಾ ವೆಚ್ಚ ರಹಿತ ಕೃಷಿ ಮಾಡಬಹುದು. ಕ್ಯಾನ್ಸರ್ ತಡೆಗಟ್ಟುವಂತಹ ಆಹಾರ ಉತ್ಪಾದಿಸಬಹುದು ಎಂದರು.
ಸುಭಾಷ್ ಪಾಳೇಕರ್ ಕೃಷಿ ಪದ್ದತಿಯಲ್ಲಿ ಒಣ ಮುಚ್ಚುಗೆಯ ಮೂಲಕ ವಾತಾವರಣದ ಸಹಾಯದೊಂದಿಗೆ ಶೇ.೨೫ರಷ್ಟು ನೀರನ್ನು ಕೃಷಿಗೆ ಪಡೆಯಬಹುದು. ಅಲ್ಲದೇ, ಶೇ.೫೦ರಷ್ಟು ನೀರು ಕೃಷಿ ಭೂಮಿಯಿಂದ ವಾತಾವರಣ ಸೇರುವುದನ್ನೂ ತಡೆಯಬಹುದು. ಹ್ಯೂಮಸ್ ನಿರ್ಮಾಣದಿಂದಾಗಿ ೧ ಕೆ.ಜಿ ಹ್ಯೂಮಸ್ ನಿರ್ಮಾಣದಿಂದ ೬ ಲೀಟರ್ ನೀರನ್ನು ಕೃಷಿ ಭೂಮಿಗೆ ಒದಗಿಸಬಹುದು ಎಂದು ಹೇಳಿದ ಅವರು, ದೇಸಿ ಹಸು (ನಾಟಿ ಹಸು) ಆಧಾರಿತ ಕೃಷಿಯಿಂದ ರೈತರಿಗೆ ಅನುಕೂಲವಾಗಲಿದ್ದು, ಕಾರ್ಬನ್‌ಗ್ಯಾಸ್ ಮುಕ್ತ ಕೃಷಿ ಮಾಡಬಹುದು ಎಂದು ಸಲಹೆ ನೀಡಿದರು.ಕಾರ್ಯಕ್ರಮ ಆಯೋಜಕ ಅನಂತರಾವ್ ಮಾತನಾಡಿ, ಕಾರ್ಯಾಗಾರದಲ್ಲಿ ಭಾಗವಹಿಸಲು ಈಗಾಗಲೇ ೬೦೦ ಮಂದಿ ನೊಂದಾಯಿಸಿಕೊಂಡಿದ್ದು, ೧೦೦೦ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಕೇರಳ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ ಹೊರರಾಜ್ಯಗಳಿಂದ ೪೫ ಮಂದಿ ನೊಂದಾಯಿಸಿಕೊಂಡಿರುವುದಾಗಿ ಪ್ರಶ್ನೆಗೆ ಉತ್ತರ ನೀಡಿದರು.
ಗೋಷ್ಠಿಯಲ್ಲಿ ಕಾರ್ಯಾಗಾರ ಆಯೋಜಕರಾದ ದಯಾನಂದ್, ಚಂದ್ರಶೇಖರ್, ಯು.ಆನಂದ್ ಇದ್ದರು.;Resize=(128,128))
;Resize=(128,128))