ಆಹಾರವೇ ನಮ್ಮ ಆರೋಗ್ಯದ ಮೂಲ. ನಾವು ಪ್ರತಿದಿನ ಸೇವಿಸುವ ಆಹಾರ ನಮ್ಮ ದೇಹದ ಆರೋಗ್ಯ, ಶಕ್ತಿ ಮತ್ತು ಜೀವನಶೈಲಿಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಆದ್ದರಿಂದ ಆಹಾರವೇ ಔಷಧಿಯಾಗಲಿ, ಆರೋಗ್ಯವೇ ನಮ್ಮ ನಿಜವಾದ ಸಂಪತ್ತಾಗಲಿ ಎಂದು ಆಹಾರ ತಜ್ಞ ಡಾ.ಖಾದರ್ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ
ಆಹಾರವೇ ನಮ್ಮ ಆರೋಗ್ಯದ ಮೂಲ. ನಾವು ಪ್ರತಿದಿನ ಸೇವಿಸುವ ಆಹಾರ ನಮ್ಮ ದೇಹದ ಆರೋಗ್ಯ, ಶಕ್ತಿ ಮತ್ತು ಜೀವನಶೈಲಿಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಆದ್ದರಿಂದ ಆಹಾರವೇ ಔಷಧಿಯಾಗಲಿ, ಆರೋಗ್ಯವೇ ನಮ್ಮ ನಿಜವಾದ ಸಂಪತ್ತಾಗಲಿ ಎಂದು ಆಹಾರ ತಜ್ಞ ಡಾ.ಖಾದರ್ ಹೇಳಿದರು.ಭಾನುವಾರ ನಗರದ ನಾಡೋಜ ಬರಗೂರು ರಾಮಚಂದ್ರಪ್ಪ ಬಯಲು ರಂಗಮಂದಿರದ ಆವರಣದಲ್ಲಿ ಶ್ರೀಗಂಧ ಬೆಳೆಗಾರರ ಮತ್ತು ಬಳಕೆದಾರರ ಅಭಿವೃದ್ಧಿ ಸಂಶೋಧನಾ ಸಂಘ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಚೇಳೂರಿನ ಸಹಜ, ನೈಸರ್ಗಿಕ ಬೇಸಾಯ ತರಬೇತಿ ಕೇಂದ್ರ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಆಹಾರ ತಜ್ಞ ಡಾ. ಖಾದರ್ ಅವರಿಂದ ನೈಸರ್ಗಿಕ ಆಹಾರ ಪದ್ಧತಿಯ ಬಗ್ಗೆ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಪೂರ್ವಜರು ಪ್ರಕೃತಿಗೆ ಹತ್ತಿರವಾದ ಆಹಾರವನ್ನು ಸೇವಿಸುತ್ತಿದ್ದರು. ಸಿರಿಧಾನ್ಯಗಳು, ನೈಸರ್ಗಿಕವಾಗಿ ದೊರೆಯುವ ಸೊಪ್ಪು-ತರಕಾರಿಗಳು, ಹಣ್ಣುಗಳು, ಕಾಳುಗಳು ಮತ್ತು ಸ್ಥಳೀಯ ಆಹಾರ ಪದಾರ್ಥಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಇಂದಿನ ಜೀವನಶೈಲಿಯಲ್ಲಿ ಸಂಸ್ಕರಿಸಿದ ಆಹಾರ, ಹೆಚ್ಚು ಸಕ್ಕರೆ, ಹೆಚ್ಚು ಉಪ್ಪು ಮತ್ತು ಎಣ್ಣೆ ಇರುವ ಆಹಾರಗಳ ಬಳಕೆ ಹೆಚ್ಚಾಗಿದೆ. ಇದರಿಂದ ಬೊಜ್ಜು, ಮಧುಮೇಹ, ರಕ್ತದೊತ್ತಡ ಸೇರಿದಂತೆ ಹಲವು ಜೀವನಶೈಲಿ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತಿವೆ. ಎಲ್ಲರೂ ಸಾಧ್ಯವಾದಷ್ಟು ನೈಸರ್ಗಿಕ ಮತ್ತು ಸ್ಥಳೀಯ ಆಹಾರಕ್ಕೆ ಆದ್ಯತೆ ನೀಡಬೇಕು. ಸಿರಿಧಾನ್ಯಗಳನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಆಹಾರವನ್ನು ನಿಧಾನವಾಗಿ, ಅಗತ್ಯ ಪ್ರಮಾಣದಲ್ಲಿ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಆಹಾರದ ಜೊತೆಗೆ ಪ್ರತಿದಿನ ದೈಹಿಕ ಚಟುವಟಿಕೆ, ಉತ್ತಮ ನಿದ್ರೆ ಮತ್ತು ಮಾನಸಿಕ ನೆಮ್ಮದಿಯೂ ಆರೋಗ್ಯಕ್ಕೆ ಬಹಳ ಮುಖ್ಯ. ನಾವು ಆರೋಗ್ಯವಾಗಿದ್ದರೆ ಮಾತ್ರ ನಮ್ಮ ಕುಟುಂಬ, ಸಮಾಜ ಮತ್ತು ದೇಶದ ಅಭಿವೃದ್ಧಿಗೆ ನಮ್ಮ ಕೊಡುಗೆ ನೀಡಲು ಸಾಧ್ಯ ಎಂದರು.ಶ್ರೀಗಂಧ ಬೆಳೆಗಾರರ ಮತ್ತು ಬಳಕೆದಾರರ ಅಭಿವೃದ್ಧಿ ಸಂಶೋದನಾ ಸಂಘದ ರಾಜ್ಯಾಧ್ಯಕ್ಷ ರಘುರಾವ್ ಮಾತನಾಡಿ ಸಾರ್ವಜನಿಕರು ಸಿರಿಧಾನ್ಯ ಖಾದ್ಯಗಳ ತಯಾರಿಕೆ ಬಗ್ಗೆ ಡಾ.ಖಾದರ್ ಅವರ ಮಾರ್ಗದರ್ಶನದಂತೆ ಸಿರಿಧಾನ್ಯಗಳನ್ನು ಬಳಕೆ ಮಾಡಿ ರೋಗಮುಕ್ತ ಜೀವನ ನಡೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಾ ಲಿಂಗಯ್ಯ, ಡಾ.ಮಂಜುನಾಥ್, ಆರ್.ವಿ.ಪುಟ್ಟಕಾಮಣ್ಣ, ನೇರಲಗುಡ್ಡ ಶಿವಕುಮಾರ್, ಜಯರಾಮಯ್ಯ, ರಮೇಶ್, ನಾಗರಾಜು, ವೆಂಕಟೇಶ್ ಪ್ರಸಾದ್, ಹನುಮಂತರಾಯ, ರಂಗನಾಥಪ್ಪ ಸೇರಿದಂತೆ ಹಲವರು ಹಾಜರಿದ್ದರು.