ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗ
ಧಾರ್ಮಿಕ ಆಚರಣೆಗಳಿಂದ ನೈಸರ್ಗಿಕ ನದಿ ನೀರು ಕಲುಷಿತಗೊಳ್ಳುತ್ತಿದೆ ಎಂದು ಚಿತ್ರದುರ್ಗ ಸೈನ್ಸ್ ಪೌಂಡೇಷನ್ ಅಧ್ಯಕ್ಷ ಹಾಗೂ ಆರ್ಥಿಕ ಚಿಂತಕ ಡಾ.ಜಿ.ಎನ್ ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟರು.ಚಿತ್ರದುರ್ಗ ಸೈನ್ಸ್ ಫೌಂಡೇಷನ್ ವತಿಯಿಂದ ಪಿವಿಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿಇಡಿ ಪ್ರಶಿಕ್ಷಣಾರ್ಥಿಗಳಿಗಾಗಿ ಶುಕ್ರವಾರ ಏರ್ಪಡಿಸಲಾಗಿದ್ದ ವಿಶ್ವ ಜಲದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಎಲ್ಲಿ ಪರಿಣಾಮಕಾರಿಯಾಗಿ ಇರುವುದಿಲ್ಲವೋ ಅಲ್ಲಿ ಅಭಿವೃದ್ದಿ ಕಾಣುವುದು ಕಷ್ಟ ಸಾಧ್ಯವೆಂದರು. ಕೃಷಿ ಅಮೂಲ್ಯವಾದ ನೀರನ್ನು ಮಿತವಾಗಿ ಬಳಸಿ ಜಲಸುರಕ್ಷತೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಹೊಣೆಗಾರಿಕೆ ಶಿಕ್ಷಕರುಗಳ ಮೇಲಿದೆ ಎಂದರು.
ನೀರಿಲ್ಲದೆ ಬದುಕಿಲ್ಲ. ಕಡಿಮೆ ಲಭ್ಯವಿರುವ ನೀರನ್ನು ಸಂರಕ್ಷಿಸಿಕೊಂಡು ಮುಂದಿನ ಪೀಳಿಗೆಗೆ ಉಳಿಸದಿದ್ದರೆ ಶಪಿಸುವುದು ಗ್ಯಾರೆಂಟಿ. ಶುದ್ಧವಾದ ನೀರಿನ ಪ್ರಮಾಣ ಕಡಿಮೆಯಾಗಿದೆ. ಕಲುಷಿತ ನೀರಿನ ಸೇವನೆಯಿಂದ ಸಾಂಕ್ರಾಮಿಕ ರೋಗಗಳು ಹರಡುತ್ತದೆ. ಆಹಾರ ಕೂಡ ರಾಸಾಯನಿಕದಿಂದ ಕೂಡಿದೆ. ಬಹಳಷ್ಟು ಯುದ್ಧಗಳು ನೀರಿನ ಹಂಚಿಕೆಗಾಗಿ ನಡೆಯುತ್ತಿವೆ ಎಂದರು. ನೀರಿನಿಂದ ಶಾಂತಿ ವಾತಾವರಣ ಸೃಷ್ಟಿಸಲು ಸಾಧ್ಯವೆಂದರು.ಶಿಕ್ಷಕರುಗಳಿಂದ ಮಾತ್ರ ದೇಶದಲ್ಲಿ ಬದಲಾವಣೆ ತರಬಹುದಾಗಿದೆ. ಈ ನಿಟ್ಟಿನಲ್ಲಿ ಬಿಇಡಿ ಪ್ರಶಿಕ್ಷಣಾರ್ಥಿಗಳು ಪುಸ್ತಕಗಳ ಆಚೆಗೆ ಸಾಕಷ್ಟು ವಿಚಾರಗಳನ್ನು ತಿಳಿದು ಕೊಳ್ಳಬೇಕಿದೆ. ಕ್ರಿಯಾಶೀಲ ಶಿಕ್ಷಕನಿಂದ ಸೃಜನಶೀಲ ಪ್ರಜೆಗಳನ್ನು ಸೃಷ್ಠಿಸಬಹುದು. ನೀರಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಹನಿ ನೀರನ್ನು ವ್ಯರ್ಥ ವಾಗಲು ಬಿಡದೆ ಮಿತವಾಗಿ ಬಳಸಬೇಕು. ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ ಮುಖ್ಯ. ಆಗ ಮಾತ್ರ ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ತೆಗೆಯಬಹುದು. ನೀರಿನ ಬಳಕೆಗೆ ತಗುಲುವ ವೆಚ್ಚವೆಷ್ಟೆಂಬ ಪರಿಜ್ಞಾನ ಎಲ್ಲರಲ್ಲಿಯೂ ಇರಬೇಕು ಎಂದು ತಿಳಿಸಿದರು.
ಚಿತ್ರದುರ್ಗ ಸೈನ್ಸ್ ಫೌಂಡೇಷನ್ ನಿರ್ದೇಶಕ ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ.ಈ.ರುದ್ರಮುನಿ ಮಾತನಾಡಿ, ಜಲ ಎನ್ನುವುದು ಅತ್ಯಂತ ಗಂಭೀರವಾದ ವಿಷಯವಾಗಿರುವುದರಿಂದ ಪ್ರತಿಯೊಬ್ಬರು ನೀರು ಸಂರಕ್ಷಣೆ ಕಡೆ ಜಾಗೃತಿ ವಹಿಸಬೇಕು. ನೀರಿನ ಮಹತ್ವವನ್ನು ಅರಿತು 1992-93 ರಲ್ಲಿ ವಿಶ್ವಸಂಸ್ಥೆ ಮಾ.22 ರಂದು ವಿಶ್ವಜಲ ದಿನವನ್ನಾಗಿ ಘೋಷಿಸಿತು. ಅಂದಿನಿಂದ ಇಲ್ಲಿಯವರೆಗೂ ಪ್ರತಿವರ್ಷವೂ ವಿಶ್ವಜಲ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.ಸಕಲ ಜೀವರಾಶಿಗಳಿಗೂ ಅತ್ಯವಶ್ಯಕ ಸಂಪನ್ಮೂಲಗಳಲ್ಲಿ ನೀರು ಬಹಳ ಮುಖ್ಯ. ನೀರಿನ ಮಿತಬಳಕೆ ಬಗ್ಗೆ ಎಲ್ಲರಲ್ಲಿಯೂ ಅರಿವು ಮೂಡಿಸಬೇಕಿದೆ. ಜಲಮೂಲಗಳು ಮಾಲಿನ್ಯವಾಗಿರುವುದರಿಂದ ಮಕ್ಕಳಲ್ಲಿ ನೀರಿನ ಕುರಿತು ಅರಿವು ಮೂಡಿಸಬೇಕು. ಕೊಳವೆಬಾವಿ ಕೊರೆಸಿ ಅಂತರ್ಜಲವನ್ನು ಬರಿದು ಮಾಡಲಾಗಿದೆ. ಮುಂದಿನ ಪೀಳಿಗೆಗೆ ನೀರಿನ ಅಭಾವವಾಗಲಿದೆ. ಅದಕ್ಕಾಗಿ ನೀರನ್ನು ವ್ಯರ್ಥವಾಗಿ ಬಳಸದೆ ಸಂಪನ್ಮೂಲವನ್ನು ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದರು.
ಪಿವಿಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಆರ್.ಉಷಾ ಅಧ್ಯಕ್ಷತೆ ವಹಿಸಿದ್ದರು.ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಉಪಾಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ, ಖಜಾಂಚಿ ನಾಗಲಿಂಗರೆಡ್ಡಿ, ಕಾರ್ಯದರ್ಶಿ ಎಚ್ಎಸ್ ಟಿ ಸ್ವಾಮಿ ವೇದಿಕೆಯಲ್ಲಿದ್ದರು.ನೀರು ಸಂಪನ್ಮೂಲವಲ್ಲ, ಇಡೀ ಜೀವಸಂಕುಲದ ಜೀವಾಮೃತ: ಕೆ.ಬಿ.ಗೀತಾಚಿತ್ರದುರ್ಗ: ನೀರು ಸಂಪನ್ಮೂಲ ಮಾತ್ರವಲ್ಲ, ಅದು ಇಡೀ ಜೀವಸಂಕುಲದ ಜೀವಾಮೃತ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಗೀತಾ ಕೆ.ಬಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ವಿಶ್ವ ಜಲ ದಿನಾಚರಣೆಯ ಅಂಗವಾಗಿ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್‍ನಲ್ಲಿ ಏರ್ಪಡಿಸಲಾಗಿದ್ದ ಜಾಗೃತಿ ಜಾಥಾಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ನೀರು ಸಕಲ ಜೀವಿಗಳ ಅಸ್ತಿತ್ವಕ್ಕೆ ಅತ್ಯಗತ್ಯವಾಗಿದೆ ಎಂದರು.ಜಾಗತಿಕ ಹವಾಮಾನ ಬದಲಾವಣೆ, ಕೈಗಾರಿಕೀಕರಣದಿಂದಾಗಿ ಕುಡಿಯುವ ನೀರಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ನೀರಿನ ಪ್ರಾಮುಖ್ಯತೆ ಹಾಗೂ ಮಿತಬಳಕೆಯ ಕುರಿತು ಎಲ್ಲರಲ್ಲೂ ಅರಿವು ಮೂಡಿಸುವ ಅಗತ್ಯವಿದೆ. ಭೂಮಿಯ ಮೇಲೆ ವಾಸಿಸುವ ಮನುಷ್ಯ ಸೇರಿ ಎಲ್ಲಾ ಪ್ರಾಣಿ-ಪಕ್ಷಿಗಳಿಗೂ ನೀರು ಜೀವನಾಧಾರವಾಗಿದೆ. ಅಮೂಲ್ಯವಾಗಿರುವ ಜಲಸಂಪತ್ತನ್ನು ಉಳಿಸಿಕೊಳ್ಳುವ ಹಾಗೂ ಮಿತವಾಗಿ ಬಳಸುವ ಅಗತ್ಯವಿದೆ. ಮಳೆಗಾಲದಲ್ಲಿ ಬರುವ ಪ್ರತಿಹನಿ ನೀರೂ ಕೂಡ ವ್ಯರ್ಥವಾಗದಂತೆ, ಸಮುದ್ರಕ್ಕೆ ಸೇರದಂತೆ ನೋಡಿಕೊಳ್ಳುವ, ಅದನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಟ್ಟುಕೊಳ್ಳುವ ಹಾಗೂ ನೆಲದಲ್ಲಿ ಇಂಗಿಸುವ ಮೂಲಕ ಅಂತರ್ಜಲ ಮಟ್ಟವನ್ನು ವೃದ್ಧಿಸಿಕೊಳ್ಳುವ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ ಎಂದರು.ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಇಂಗುಗುಂಡಿ, ಮಳೆಕೊಯ್ಲು ಮುಂತಾದ ಕಾರ್ಯಗಳು ಪ್ರತಿ ಮನೆಯಿಂದಲೂ ಆರಂಭವಾಗಬೇಕು. ಈ ವಿಷಯವನ್ನು ಪ್ರತಿ ಯೊಬ್ಬರೂ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಭೂಮಿಯ ಒಡಲು ನಿರಂತರ ಬರಿದಾಗುತ್ತಿದ್ದರೆ ಮುಂದೊಂದು ದಿನ ಇಡೀ ವಿಶ್ವವೇ ಅತ್ಯಂತ ಗಂಭೀರ ಪರಿಸ್ಥಿತಿ ಎದುರಿಸಲಿದೆ.ಪ್ರಸ್ತುತ ಸಂದರ್ಭದಲ್ಲಿ ವಿಶ್ವದ ಅನೇಕ ಮಹಾನಗರಗಳಲ್ಲಿ ಕುಡಿಯುವ ನೀರಿನ ವಿಚಾರದಲ್ಲಿ ಅಲ್ಲಿನ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳು ಕಣ್ಣೆದುರಿಗೆ ಇವೆ. ಜೀವಜಲಕ್ಕೆ ಕಂಟಕ ಎದುರಾಗದಂತೆ ಅಗತ್ಯ ಸಕಾಲಿಕ ಕ್ರಮಗಳನ್ನು ಕೈಗೊಳ್ಳಬೇಕು. ನೀರನ್ನು ಸಂರಕ್ಷಿಸುವ ವಿಷಯದಲ್ಲಿ ಸುಸ್ಥಿರ ಗುರಿ ಸಾಧಿಸಲು ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅರಿತು ಸರ್ಕಾರದೊಂದಿಗೆ ಕೈಜೋಡಿಸಬೇಕು. ಇದರೊಂದಿಗೆ ಪರಿಸರ ಹಾನಿಯನ್ನು ತಡೆಯುವಲ್ಲಿ ವಿಶೇಷ ಗಮನ ಹರಿಸಬೇಕು. ಗಿಡ-ಮರಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗುವಂತೆ ಗೀತಾ ಕರೆ ನೀಡಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್, ಪೌರಾಯುಕ್ತೆ ಎಂ.ರೇಣುಕಾ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್‍ನಿಂದ ಆರಂಭಗೊಂಡ ಜಾಗೃತಿ ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಅಂತಿಮವಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಂಪನ್ನಗೊಂಡಿತು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))