ಸಹಜವಾಗಿ ಅರ್ಥವಾಗುವ ಭಾಷೆ ಜೀವಂತ: ಪ್ರೊ.ಸುರೇಶ್ ಜಂಬಾನಿ

| Published : Feb 23 2024, 01:48 AM IST

ಸಹಜವಾಗಿ ಅರ್ಥವಾಗುವ ಭಾಷೆ ಜೀವಂತ: ಪ್ರೊ.ಸುರೇಶ್ ಜಂಬಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಗರದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ವಿಶ್ವ ಮಾತೃ ಭಾಷೆ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಪ್ರೊ.ಸುರೇಶ್ ಜಂಬಾನಿ ಉಪನ್ಯಾಸ ನೀಡಿದರು.

ಕನ್ನಡಪ್ರಭವಾರ್ತೆ ಸಾಗರ

ಭಾಷೆಯು ಭಾವನೆಗಳನ್ನು ಹಂಚಿಕೊಳ್ಳುವ ಬಹುಮುಖ್ಯ ಮಾಧ್ಯಮ ಎಂದು ಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಸುರೇಶ್ ಜಂಬಾನಿ ಹೇಳಿದರು.

ಇಲ್ಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಬುಧವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ವಿಶ್ವ ಮಾತೃ ಭಾಷೆ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಇತರೆ ಜೀವಿಗಳಿಗಿಂತ ವಿಭಿನ್ನವಾಗಿ ಗುರುತಿಸಿಕೊಂಡಿರುವ ಮನುಷ್ಯ ಭಾಷೆಯ ಮೂಲಕ ತನ್ನ ಭಾವನೆಯನ್ನು ಅಭಿವ್ಯಕ್ತಗೊಳಿಸುತ್ತಾನೆ. ಅದರಲ್ಲೂ ಬಹು ಮುಖ್ಯವಾಗಿ ಮಾತೃಭಾಷೆಗೆ ವಿಶೇಷವಾದ ಸ್ಥಾನವಿದೆ. ಆಧುನಿಕತೆ ಬೆಳೆದಂತೆ ಸಾಕಷ್ಟು ಭಾಷೆಗಳು ಕಳೆದು ಹೋಗಿವೆ. ಇದೆಲ್ಲದರ ನಡುವೆಯೂ ನಮ್ಮ ನಮ್ಮ ಭಾಷೆಯನ್ನು ರಕ್ಷಣೆ ಮಾಡಿಕೊಳ್ಳುವ ಸವಾಲು ನಾಮ್ಮ ಮೇಲೆ ಇದ್ದೇ ಇದೆ ಎಂದರು.

ಭಾಷೆಯಲ್ಲಿ ವೈವಿಧ್ಯತೆಯಿದ್ದರೂ ಅವುಗಳನ್ನು ಅಭಿವ್ಯಕ್ತಿಸುವುದು ಮಾತ್ರ ತನ್ನೊಳಗಿನ ಭಾವನೆಗಳಾಗಿವೆ. ನಾವು ನಿರ್ದಿಷ್ಟವಾಗಿ ನಮ್ಮ ನಮ್ಮ ಮಾತೃಭಾಷೆಯ ಬಗ್ಗೆ ಹೆಚ್ಚಿನ ಗಮನ ಇರಬೇಕು. ಯಾವ ಭಾಷೆ ಜನ ಸಾಮಾನ್ಯರಿಗೆ ಸಹಜವಾಗಿ ಅರ್ಥವಾಗುತ್ತದೆಯೋಅದು ನಿರಂತರವಾಗಿ ಹಾಗೂ ಜೀವಂತವಾಗಿ ಉಳಿಯುತ್ತದೆ. ಎಲ್ಲಾ ಭಾಷೆಯನ್ನು ಪ್ರೀತಿಸುವ ಜೊತೆಗೆ ಮಾತೃಭಾಷೆಯನ್ನು ಮಾತ್ರ ತನ್ನ ಅಂತರಂಗದೊಳಗೆ ಇಟ್ಟು ಪೂಜಿಸಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕಿ ವಿನುತ ಕೆ. ಮಾತನಾಡಿ, ಮನುಷ್ಯನಿಗೆ ಸಂವೇದಾನಶೀಲ ಭಾಷೆ ಬೇಕಾಗಿದೆ. ನಮ್ಮ ಮಾತೃಭಾಷೆ ಸಂವೇದನಾಶೀಲ ಭಾಷೆಯಾಗಿದ್ದು, ಅದನ್ನು ಬಳಸಿ ಬೆಳೆಸಬೇಕು. ಕನ್ನಡ ಸಾಹಿತ್ಯ ಪರಿಷತ್ತು ಅಂತಹ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿರುವುದು ಅಭಿನಂದನಿಯ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಟಿ.ಸ್ವಾಮಿ ಮಾತನಾಡಿದರು. ಕಜಾಪ ಪ್ರಧಾನ ಕಾರ್ಯದರ್ಶಿ ಉಮೇಶ್ ಹಿರೇನೆಲ್ಲೂರು, ಸಾಂಸ್ಕೃತಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ, ಸಹಾಯಕ ಪ್ರಾಧ್ಯಾಪಕ ಡಾ.ಪ್ರಸನ್ನ ಟಿ., ಬಿ.ಡಿ.ರವಿಕುಮಾರ್, ಕಲ್ಪನಾ, ವೆಂಕಟೇಶ್ ಚಂದಳ್ಳಿ ಮೊದಲಾದವರು ಉಪಸ್ಥಿತರಿದ್ದರು.