ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಜನಪದ ಲೋಕದಲ್ಲಿ ಪ್ರಕೃತಿಯೇ ಪ್ರಧಾನ ದೈವ ಎಂದು ಜಾನಪದ ವಿದ್ವಾಂಸ ಜಿ.ಗುರುರಾಜ ಮೈಸೂರು ತಿಳಿಸಿದರು.ಊಟಿಯ ತೀಟಕಲ್‌ನ ಜೆಎಸ್ಎಸ್ ಪಬ್ಲಿಕ್ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಜೀವನೋತ್ಸಾಹ ಶಿಬಿರದಲ್ಲಿ ಉಪನ್ಯಾಸ ನೀಡಿದ ಅವರು, ಜನಪದ ಸಮಾಜ ಪ್ರಧಾನವಾಗಿ ನಂಬಿದ್ದು ಮನುಷ್ಯಪರವಾದ ದೇವರು ಮತ್ತು ಧರ್ಮ. ಜನಪದವು ಮಹದೇಶ್ವರರು, ಮಂಟೇಸ್ವಾಮಿ, ಬಿಳಿಗಿರಿರಂಗನಾಥಸ್ವಾಮಿ ಹಾಗೂ ಇನ್ನಿತರ ಮಹಾತ್ಮರ ಚರಿತ್ರೆಗಳನ್ನು ಹಾಡುವ ಮೂಲಕ ಸಮಾಜಕ್ಕೆ ತಿಳಿಸುವ ಒಂದು ಶ್ರೇಷ್ಠ ಪರಂಪರೆಯಾಗಿದೆ ಎಂದರು.
ಜನಪದರು ಅತ್ಯಂತ ಮಾನವೀಯ ವಾತಾವರಣದೊಂದಿಗೆ ಬದುಕನ್ನು ಸೃಷ್ಟಿಸಿಕೊಂಡಿದ್ದರು. ದ್ವೇಷ ರಹಿತ ಅಪ್ಪಟ ಮಾನವೀಯ ಅಂತಃಕರಣವನ್ನು ದೇವರಾಗಿ ಆರಾದಿಸುತ್ತಿದ್ದರು ಎಂದು ಹೇಳಿದರು.ಸಾತ್ವಿಕ ಆಹಾರ ಆರೋಗ್ಯಕರ ಜೀವನಕ್ಕೆ ಆಧಾರ:
ಜೆಎಸ್ಎಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಡಾ.ವೀಣಾ ಜಿ. ರಾವ್ ಮಾತನಾಡಿ, ಆಯುರ್ವೇದ ಚಿಕಿತ್ಸಾ ಪದ್ದತಿಯು ಹೆಚ್ಚು ಪರಿಣಾಮಕಾರಿಯಾಗಿದೆ. ಆರೋಗ್ಯ ಸುಧಾರಣೆಗೆ ವಿಶೇಷ ಗಮನ ಕೊಡುವುದು ಮುಖ್ಯ. ಯಾಂತ್ರಿಕ ಜೀವನ ಶೈಲಿ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ. ಸಾತ್ವಿಕ ಆಹಾರ ಸೇವನೆ ಆರೋಗ್ಯಕರ ಜೀವನಕ್ಕೆ ಆಧಾರ ಎಂದರು.ಪ್ರತಿಯೊಬ್ಬರು ನೈಸರ್ಗಿಕವಾಗಿ ದೊರೆಯುವ ಔಷಧ ಗುಣಗಳುಳ್ಳ ವನಸ್ಪತಿಗಳನ್ನು ಬಳಸಬೇಕು. ನಮ್ಮ ಭೌಗೋಳಿಕ ಪ್ರದೇಶಗಳಲ್ಲಿ ಬೆಳೆಯುವ ಆಹಾರ ಪಾದರ್ಥಗಳನ್ನೆ ಸೇವಿಸುವುದು ಉತ್ತಮ. ಆಯುರ್ವೇದ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಬಹು ಬೇಡಿಕೆಯ ಚಿಕಿತ್ಸಾ ಪದ್ಧತಿಯಾಗುತ್ತಿದೆ ಎಂದರು.
ಆಕಾಶವಾಣಿ ಉಪ ನಿರ್ದೇಶಕ ಎಸ್.ಎಸ್. ಉಮೇಶ ಮಾತನಾಡಿ, ಕರ್ತವ್ಯ ಪ್ರಜ್ಞೆ, ಸಮಯ ಪಾಲನೆ ಹಾಗೂ ಸಂಯಮ ನಡವಳಿಕೆಯೇ ಮೌಲ್ಯಯುತ ಬದುಕಾಗಿದೆ. ಹಣ ಮತ್ತು ಅಧಿಕಾರಗಳು ನಮ್ಮ ಮೌಲ್ಯವನ್ನು ಹೆಚ್ಚಿಸುವುದಿಲ್ಲ, ಅದು ನಮ್ಮ ನಡೆ-ನುಡಿಯಿಂದ ಮಾತ್ರ ಸಾಧ್ಯ. ನಾವು ಮೌಲ್ಯಯುತ ಬದುಕಿಗಾಗಿ ನಿರಂತರ ಹೋರಾಟ ಮಾಡಬೇಕಾಗುತ್ತದೆ. ಸಕಾರಾತ್ಮಕ ಚಿಂತನೆಗಳಿಂದ ಬದುಕು ಮೌಲ್ಯಯುತವಾಗುತ್ತದೆ ಎಂದರು.ಶಿಬಿರದಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ- ಧ್ಯಾನ ಹಾಗೂ ಸಂಜೆ ದೇಸಿ ಆಟಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಸಂಜೆ ಪ್ರಾರ್ಥನೆ ನಂತರ ಶಿಬಿರಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.