ಅಭಿವೃದ್ಧಿ ನೆಪದಲ್ಲಿ ಪ್ರಕೃತಿ ನಾಶ ಸಲ್ಲ: ಬಿಳಿಮಲೆ

| Published : Aug 17 2025, 01:41 AM IST

ಸಾರಾಂಶ

ಅಭಿವೃದ್ಧಿಯ ನೆಪದಲ್ಲಿ ಪ್ರಕೃತಿಯನ್ನು ನಾಶ ಮಾಡುವ ಪ್ರವೃತ್ತಿ ಸಂಸ್ಕೃತಿಯ ಪರಿವಿಲ್ಲದ ಬೆಳವಣಿಗೆಯಾಗುತ್ತಿದ್ದು ಸರ್ಕಾರಿ ವರದಿಗಳ ಪ್ರಕಾರ ಕೇವಲ ಶೇ.10ರಷ್ಟು ಕಾಡು ಮಾತ್ರ ಉಳಿದಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಭಿವೃದ್ಧಿಯ ನೆಪದಲ್ಲಿ ಪ್ರಕೃತಿಯನ್ನು ನಾಶ ಮಾಡುವ ಪ್ರವೃತ್ತಿ ಸಂಸ್ಕೃತಿಯ ಪರಿವಿಲ್ಲದ ಬೆಳವಣಿಗೆಯಾಗುತ್ತಿದ್ದು ಸರ್ಕಾರಿ ವರದಿಗಳ ಪ್ರಕಾರ ಕೇವಲ ಶೇ.10ರಷ್ಟು ಕಾಡು ಮಾತ್ರ ಉಳಿದಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.

ಶನಿವಾರ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ 218ನೇ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಮನುಷ್ಯನ ಅಭಿವೃದ್ಧಿಯ ದೃಷ್ಟಿಕೋನ ಹೀಗೆಯೇ ಮುಂದುವರಿದಲ್ಲಿ ವಿನಾಶವು ಅನಿವಾರ್ಯ. ನಮ್ಮ ಸಂಸ್ಕೃತಿಯಲ್ಲಿ ಪ್ರಕೃತಿ ಮತ್ತು ಪುರುಷ ಈ ಎರಡೂ ಆಯಾಮಗಳು ಒಟ್ಟಾಗಿ ಕಾರ್ಯನಿರ್ವಹಿಸಿದ ಉದಾಹರಣೆಗಳು ಹೇರಳವಾಗಿದ್ದು, ಈ ಮನೋಧರ್ಮವನ್ನು ನಮ್ಮ ಅಂತರ್ಯಕ್ಕೆ ಇಳಿಸಿಕೊಳ್ಳುವ ಮೂಲಕ ಹೆಚ್ಚಿನ ಜವಾಬ್ದಾರಿಯನ್ನು ನಾವು ಮೆರೆಯಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಎಂ. ಜಗದೀಶ್, ಕದಿರೇಗೌಡ, ಹೆಚ್ಚುವರಿ ನಿರ್ದೇಶಕರಾದ ಸಬರತ್, ನಂದ, ಉಪ ನಿರ್ದೇಶಕ ಬಾಲಕೃಷ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವಿಜೇತರಿಗೆ ಬಹುಮಾನ

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನದ ಅಂಗವಾಗಿ ಆಯೋಜಿಸಲಾಗಿದ್ದ ವೀರರಾಣಿ ಚೆನ್ನಮ್ಮ ಪ್ರಬಂಧ ಸ್ಪರ್ಧೆ ಮತ್ತು ಹೋಂ ಗಾರ್ಡನ್‌, ಕೇಂದ್ರ ಸರ್ಕಾರದ ಇಲಾಖೆಗಳ ಉದ್ಯಾನ, ಸರ್ಕಾರಿ ಕ್ವಾಟ್ರರ್ಸ್‌ ಉದ್ಯಾನ, ಅಪಾರ್ಟ್‌ಮೆಂಟ್‌ ಉದ್ಯಾನಗಳ, ಸಿಎಸ್‌ಆರ್‌ ಗಾರ್ಡನ್ಸ್‌ ಅಕಾಡೆಮಿಕ್‌ ಗಾರ್ಡನ್ಸ್‌ ಸೇರಿದಂತೆ ವಿವಿಧ ಉದ್ಯಾನಗಳ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಬಹುಮಾನ ವಿತರಿಸಿದರು.