ಸಾರಾಂಶ
ಕೇಂದ್ರ ಸರ್ಕಾರದಿಂದ ದೇಶವ್ಯಾಪಿ ಜನರ ಆರೋಗ್ಯ ಪರೀಕ್ಷೆ
ಆಹಾರ ಪದ್ಧತಿ, ಜೀವನ ಶೈಲಿ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಮಾರ್ಗಸೂಚಿನಿಮ್ಮ ಮೊಬೈಲ್‌ನಲ್ಲಿಯೇ ನಿಮ್ಮ ಆರೋಗ್ಯ ಮಾಹಿತಿ
ಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳ
ಜೀವನ ಶೈಲಿ ಮತ್ತು ಆಹಾರ ಪದ್ಧತಿ ಹಾಗೂ ಅತಿಯಾದ ಔಷಧಿ ಸೇವನೆಯಿಂದ ದೇಶದ ಜನರ ಆರೋಗ್ಯದಲ್ಲಿ ಭಾರಿ ಪ್ರಮಾಣದಲ್ಲಿ ಏರುಪೇರು ಆಗುತ್ತಿರುವುದರಿಂದ ಪ್ರತಿಯೊಬ್ಬರ ಆರೋಗ್ಯ ಕಾಪಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಅಂಗೈಯಲ್ಲಿಯೇ (ಮೊಬೈಲ್‌ನಲ್ಲಿಯೇ) ಆರೋಗ್ಯ ನೀಡಲಿದೆ. ಇದಕ್ಕಾಗಿ ಈಗ ದೇಶದ ಜನರ ಪ್ರಕೃತಿ ಪರೀಕ್ಷೆ ಮಾಡುತ್ತಿದೆ.ಪ್ರತಿಯೊಬ್ಬರಿಗೂ ಆರೋಗ್ಯ ಮಾರ್ಗದರ್ಶಿ ನೀಡುವುದು ಅಲ್ಲದೆ, ಕಾಲಕಾಲಕ್ಕೆ ಅವರ ಮೊಬೈಲ್ ಸಂದೇಶದ ಮೂಲಕವೇ ಆರೋಗ್ಯ ಕಾಪಾಡಿಕೊಳ್ಳುವಂತೆ ಮಾಡುವುದು ಕೇಂದ್ರ ಸರ್ಕಾರದ ಚಿಂತನೆಯಾಗಿದೆ.
ಏನಿದು ಪ್ರಕೃತಿ ಪರೀಕ್ಷೆ?ಪ್ರಕೃತಿ ಎಂದರೆ ದೇಹ. ಪ್ರತಿಯೊಂದು ರೋಗ ಬರುವುದು ಮತ್ತು ಆರೋಗ್ಯದಲ್ಲಿ ಏರಪೇರಾಗಲು ಕಫ, ವಾತ ಮತ್ತು ಪಿತ್ತ ಕಾರಣ ಎನ್ನುವುದು ಆಯುರ್ವೇದ ಶಾಸ್ತ್ರದ ವಾದ.
ಹೀಗಾಗಿ, ಈ ಮೂರನ್ನೊಳಗೊಂಡು ಅವರ ಪ್ರಕೃತಿ ಪರೀಕ್ಷೆಯನ್ನು ಸುಮಾರು 25ಕ್ಕೂ ಅಧಿಕ ಪ್ರಶ್ನೆಗಳ ಮೂಲಕ ಉತ್ತರ ಪಡೆದು, ಇದೆಲ್ಲವೂ ದೇಶ ಕಾ ಪ್ರಕೃತಿ ಪರೀಕ್ಷಣ ಆ್ಯಪ್‌ನಲ್ಲಿ ದಾಖಲಾಗುತ್ತದೆ. ಇದಾದ ಮೇಲೆ ನಿಮಗೆ ಪ್ರಕೃತಿ ಪರೀಕ್ಷೆಯ ಡಿಜಿಟಲ್ ಕಾರ್ಡ್ ಬರುತ್ತದೆ.ಅಷ್ಟೇ ಅಲ್ಲ, ನೀವು ನೀಡಿದ ಉತ್ತರದ ಆಧಾರದ ಮೇಲೆ ನಿಮ್ಮ ದೇಹದ ಕಫ, ವಾತ, ಅಥವಾ ಪಿತ್ತ ಎನ್ನುವುದರ ಮಾಹಿತಿಯೊಂದಿಗೆ ಸೇವಿಸಬೇಕಾದ ಆಹಾರ ಮತ್ತು ಅನುಸರಿಸಬೇಕಾದ ಜೀವನ ಶೈಲಿಯ ಕುರಿತು ಮಾರ್ಗದರ್ಶನ ನೀಡುತ್ತದೆ.
ಹೇಗೆ ನಡೆಯುತ್ತದೆ ಪರೀಕ್ಷೆ?:ದೇಶಾದ್ಯಂತ ಆಯುರ್ವೇದ ಆಸ್ಪತ್ರೆಗಳ ವೈದ್ಯರು ಮತ್ತು ವಿದ್ಯಾರ್ಥಿಗಳ ಮೂಲಕ ಈ ಪರೀಕ್ಷೆ ಮಾಡಲಾಗುತ್ತದೆ.
ಜೊತೆಗೆ ಸರ್ಕಾರಿ ಆಸ್ಪತ್ರೆಯ ವೈದ್ಯರು, ಖಾಸಗಿ ವೈದ್ಯರು ಸೇರಿದಂತೆ ಎಲ್ಲರಿಗೂ ಟಾರ್ಗೆಟ್ ನೀಡಲಾಗಿದೆ. ಅವರು ಈ ಕಾರ್ಯ ಮಾಡುತ್ತಿದ್ದಾರೆ.ನೀವೇನು ಮಾಡಬೇಕು?:
ನಿಮ್ಮ ಬಳಿ ಬರುವ ವೈದ್ಯರು ಅಥವಾ ವೈದ್ಯ ವಿದ್ಯಾರ್ಥಿಗಳು ಕಳುಹಿಸುವ ಲಿಂಕ್ ಓಪನ್ ಮಾಡಿ, ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಅದಕ್ಕೊಂದು ಓಟಿಪಿ ಸಹ ಬರುತ್ತದೆ. ಹೀಗೆ ಓಟಿಪಿ ಬಂದ ಮೇಲೆ ಆ್ಯಪ್ ಡೌನ್ ಲೋಡ್ ಆಗುತ್ತದೆ. ಅದಾದ ಬಳಿಕ ಅದರಲ್ಲಿರುವ ಕ್ಯೂಆರ್ ಕೋಡ್ ಮೂಲಕ ನಿಮ್ಮ ಬಳಿ ಬಂದಿದ್ದ ವೈದ್ಯರು ಅಥವಾ ವಿದ್ಯಾರ್ಥಿಗಳು ತಮ್ಮ ಮೊಬೈಲ್‌ನಲ್ಲಿರುವ ಪ್ರಶ್ನಾವಳಿ ಕೇಳುತ್ತಾರೆ. ಅದಕ್ಕೆ ಉತ್ತರಿಸಬೇಕು. ಇದಾದ ಮೇಲೆ ಕೊನೆಯಲ್ಲಿ ನಿಮಗೆ ನಿಮ್ಮ ಆರೋಗ್ಯ ಸರ್ಟಿಪಿಕೆಟ್ ಹಾಗೂ ಮಾರ್ಗದರ್ಶನದ ಮಾಹಿತಿ ನಿಮ್ಮ ಮೊಬೈಲ್‌ಗೆ ಬರುತ್ತದೆ.ಯಾರು ಮಾಡುತ್ತಿದ್ದಾರೆ?:
ಭಾರತೀಯ ಚಿಕಿತ್ಸಾ ಪದ್ಧತಿ ರಾಷ್ಟ್ರೀಯ ಆಯೋಗ, ಆಯುಷ್ ಮಂತ್ರಾಲಯ ಜಂಟಿಯಾಗಿ ಈ ಯೋಜನೆ ಜಾರಿ ಮಾಡುತ್ತಿವೆ.ನಿಮ್ಮ ಪ್ರಕೃತಿಯ ಪರೀಕ್ಷೆಯ ಮೂಲಕ ನಿಮ್ಮ ಆರೋಗ್ಯಕ್ಕೆ ಪೂರಕವಾಗಿರುವ ಆಹಾರ ಸೇವನೆ ಮತ್ತು ಜೀವನ ಶೈಲಿಯ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ. ಕಾಲ ಕಾಲಕ್ಕೆ ಈ ಬಗ್ಗೆ ನಿಮಗೆ ಮಾಹಿತಿ ರವಾನೆಯಾಗುತ್ತಲೇ ಇರುತ್ತದೆ.
ವಾತ, ಕಫ ಮತ್ತು ಪಿತ್ತ ಈ ಮೂರು ಅಂಶಗಳ ಆಧಾರದಲ್ಲಿಯೇ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಇವು ಯಾರಿಗೆ ಎಷ್ಟು ಪ್ರಮಾಣದಲ್ಲಿ ಇದೆ ಎಂದು ಗೊತ್ತಾದರೆ ರೋಗ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ.ನಿಮಗೆ ಆರೋಗ್ಯದಲ್ಲಿ ಸಮಸ್ಯೆಯಾದರೆ ವೈದ್ಯರ ಬಳಿ ಹೋದಾಗ ನಿಮ್ಮ ಆ್ಯಪ್‌ನಲ್ಲಿರುವ ನಿಮ್ಮ ಆರೋಗ್ಯದ ಮಾಹಿತಿ ಅವರು ಪಡೆದು, ಚಿಕಿತ್ಸೆ ನೀಡುತ್ತಾರೆ.