ನವವೃಂದಾವನಗಡ್ಡೆ: ಗ್ರಾಪಂಯ ಬೋಟ್ ಸಂಚಾರಕ್ಕೆ ಬ್ರೇಕ್

| Published : Nov 20 2024, 12:36 AM IST

ಸಾರಾಂಶ

ಕಳೆದ ಎಂಟು ತಿಂಗಳಿನಿಂದ ತಾಲೂಕಿನ ಆನೆಗೊಂದಿಯ ನವವೃಂದಾವನಗಡ್ಡೆಯಲ್ಲಿ ತುಂಗಭದ್ರಾ ನದಿಗೆ ಗ್ರಾಮ ಪಂಚಾಯಿತಿಯಿಂದ ಅನಧಿಕೃತವಾಗಿ ಹಾಕಲಾಗುತ್ತಿದ್ದ ಯಂತ್ರ ಚಾಲಿತ ಬೋಟ್ ಸಂಚಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದ್ದು, ಪರವಾನಿಗೆ ಪಡೆದ ಗುತ್ತಿಗೆದಾರರ ಬೋಟಿಂಗ್ ಸಂಚಾರಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದೆ.

ಪರವಾನಿಗೆ ಗುತ್ತಿಗೆದಾರರ ಬೋಟ್ ಸಂಚಾರಕ್ಕೆ ಹೈಕೋರ್ಟ್ ಅಸ್ತು

ಕನ್ನಡಪ್ರಭವಾರ್ತೆ ಗಂಗಾವತಿ

ಕಳೆದ ಎಂಟು ತಿಂಗಳಿನಿಂದ ತಾಲೂಕಿನ ಆನೆಗೊಂದಿಯ ನವವೃಂದಾವನಗಡ್ಡೆಯಲ್ಲಿ ತುಂಗಭದ್ರಾ ನದಿಗೆ ಗ್ರಾಮ ಪಂಚಾಯಿತಿಯಿಂದ ಅನಧಿಕೃತವಾಗಿ ಹಾಕಲಾಗುತ್ತಿದ್ದ ಯಂತ್ರ ಚಾಲಿತ ಬೋಟ್ ಸಂಚಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದ್ದು, ಪರವಾನಿಗೆ ಪಡೆದ ಗುತ್ತಿಗೆದಾರರ ಬೋಟಿಂಗ್ ಸಂಚಾರಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದೆ.ಕಳೆದ ಎಂಟು ತಿಂಗಳ ಹಿಂದೆ ಗೋಪಿಕೃಷ್ಣ ಮತ್ತು ನಿಖಿಲ್ ಹನುಮೇಶ ಒಲೇಕಾರ ಎನ್ನುವರು ಗ್ರಾಮ ಪಂಚಾಯಿತಿಯವರು ಕರೆದಿದ್ದ ಟೆಂಡರ್‌ನಲ್ಲಿ ಭಾಗವಹಿಸಿದ್ದರು. ಟೆಂಡರ್ ಪ್ರಕ್ರಿಯೆಯಲ್ಲಿ ನಿಖಿಲ್ ಅಪ್ರಾಪ್ತ ಮತ್ತು ಸರಿಯಾದ ದಾಖಲಾತಿ ನೀಡದ ಕಾರಣ ಅವರ ಟೆಂಡರ್‌ನ್ನು ತಿರಸ್ಕೃತಗೊಳಿಸಲಾಗಿತ್ತು. ಇದರಿಂದಾಗಿ ಟೆಂಡರ್ ನಲ್ಲಿದ್ದ 2ನೇಯವರಾದ ಗೋಪಿಕೃಷ್ಣಗೆ ಬೋಟಿಂಗ್ ಸಂಚಾರಕ್ಕೆ ಅನುಮತಿ ನೀಡಬೇಕಾಗಿತ್ತು. ಆದರೆ ಗ್ರಾಪಂಯವರು ಗೋಪಿಕೃಷ್ಣಗೆ ಪರವಾನಿಗೆ ನೀಡದೆ ನಿಖಿಲ್ ಹೆಸರಿನಲ್ಲಿ ಗ್ರಾಪಂಯಿಂದ ಅನಧಿಕೃತವಾಗಿ ಬೋಟಿಂಗ್ ಸಂಚಾರ ಕೈಗೊಂಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಗೋಪಿಕೃಷ್ಣ ಮೊದಲನೆ ಗುತ್ತಿಗೆದಾರನ ಟೆಂಡರ್ ರದ್ದಾಗಿದ್ದರಿಂದ ಎರಡನೇಯ ಟೆಂಡರ್‌ದಾರರಾದ ತಮಗೆ ಅವಕಾಶ ನೀಡಬೇಕೆಂದು ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿದಾರ ಸಲ್ಲಿಸಿದ್ದ ದಾಖಲಾತಿ ಸರಿಯಾಗಿದ್ದು, ಟೆಂಡರ್ ಪ್ರಕ್ರಿಯೆಲ್ಲಿ 2ನೇ ಗುತ್ತಿಗೆದಾರ ಗೋಪಿಕೃಷ್ಣ ಅವರಿಗೆ ಬೋಟ್ ಸಂಚಾರ ಮಾಡಲು ಅನುಮತಿ ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಭಕ್ತರಿಂದ ಅಧಿಕ ಶುಲ್ಕ ವಸೂಲಿ:

ಆನೆಗೊಂದಿಯ ನವವೃಂದಾವನಗಡ್ಡೆಯ ತುಂಗಭದ್ರಾ ನದಿಯಲ್ಲಿ ಯಂತ್ರಚಾಲಿತ ಬೋಟ್‌ನಲ್ಲಿ ಭಕ್ತರಿಂದ ಅಧಿಕ ಶುಲ್ಕ ವಸೂಲಿಯ ಅರೋಪ ಇತ್ತು. ನವವೃಂದಾವನಗಡ್ಡೆಯಲ್ಲಿ 9 ಯತಿವರೇಣ್ಯರ ವೃಂದಾವನಗಳಿದ್ದು, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಕರ್ನಾಟಕ ವಿವಿಧ ಜಿಲ್ಲೆಗಳಿಂದ ದಿನ ನಿತ್ಯ ನೂರಾರು ಭಕ್ತರು ಆಗಮಿಸುತ್ತಿದ್ದರು. ಈಗ ಹೈಕೋರ್ಟ್ ಟೆಂಡರ್‌ನಲ್ಲಿ ಭಾಗವಹಿಸಿದವರ ಬೋಟಿಂಗ್ ಸಂಚಾರಕ್ಕೆ ಆದೇಶ ನೀಡಿದ್ದರಿಂದ ನಿಗದಿತ ಶುಲ್ಕ ಪಡೆಯುವುದಕ್ಕೆ ಅನುಕೂಲವಾಗಿದೆ.