ಸ್ಥಳೀಯ ಯುವಕರಲ್ಲಿ ತಾಂತ್ರಿಕ ಕೌಶಲ್ಯ ಮತ್ತು ಉದ್ಯೋಗಾವಕಾಶ ಹೆಚ್ಚಿಸುವ ಉದ್ದೇಶದಿಂದ ಕಾರವಾರ ನೌಕಾ ಡಾಕ್‌ಯಾರ್ಡ್ ಹಾಗೂ ಸ್ಥಳೀಯ ಕೈಗಾರಿಕಾ ತರಬೇತಿ ಸಂಸ್ಥೆಗಳ (ಐಟಿಐ) ನಡುವೆ ಮಹತ್ವದ ತಿಳಿವಳಿಕೆ ಒಪ್ಪಂದ (ಎಂಒಯು)ಕ್ಕೆ ಸಹಿ ಹಾಕಲಾಯಿತು.
ಯುವಕರಲ್ಲಿ ತಾಂತ್ರಿಕ ಕೌಶಲ್ಯ, ಉದ್ಯೋಗಾವಕಾಶ ಹೆಚ್ಚಿಸುವ ಉದ್ದೇಶಕನ್ನಡಪ್ರಭ ವಾರ್ತೆ ಕಾರವಾರ
ಸ್ಥಳೀಯ ಯುವಕರಲ್ಲಿ ತಾಂತ್ರಿಕ ಕೌಶಲ್ಯ ಮತ್ತು ಉದ್ಯೋಗಾವಕಾಶ ಹೆಚ್ಚಿಸುವ ಉದ್ದೇಶದಿಂದ ಕಾರವಾರ ನೌಕಾ ಡಾಕ್‌ಯಾರ್ಡ್ ಹಾಗೂ ಸ್ಥಳೀಯ ಕೈಗಾರಿಕಾ ತರಬೇತಿ ಸಂಸ್ಥೆಗಳ (ಐಟಿಐ) ನಡುವೆ ಮಹತ್ವದ ತಿಳಿವಳಿಕೆ ಒಪ್ಪಂದ (ಎಂಒಯು)ಕ್ಕೆ ಸಹಿ ಹಾಕಲಾಯಿತು.ಕಾರವಾರದ ನೌಕಾ ಡಾಕ್‌ಯಾರ್ಡ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರವಾರದ ಶ್ರೀ ಸೋಮನಾಥ ಐಟಿಐ ಬಿಣಗಾ, ಸರ್ಕಾರಿ ಐಟಿಐ ಬಾಡ್, ಮಲ್ಲಿಕಾರ್ಜುನ ಐಟಿಐ ಸಿದ್ದರ ಹಾಗೂ ಸರ್ಕಾರಿ ಐಟಿಐ ಅಂಕೋಲಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ನೌಕಾ ಡಾಕ್‌ಯಾರ್ಡ್‌ನ ಅಡ್ಮಿರಲ್ ಸೂಪರಿಂಟೆಂಡೆಂಟ್ ರಿಯರ್ ಅಡ್ಮಿರಲ್ ರವ್ನೀಶ್ ಸೇಠ್, ವಿ.ಎಸ್.ಎಂ. ಹಾಗೂ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಉಪಸ್ಥಿತರಿದ್ದರು.ಕರ್ನಾಟಕ ನೌಕಾ ಪ್ರದೇಶದ (ಕೆಎನ್‌ಎ) ನಾಗರಿಕ-ಸೇನಾ ಸಹಕಾರವನ್ನು ಬಲಪಡಿಸುವ ಭಾಗವಾಗಿ ಈ ಉಪಕ್ರಮ ಕೈಗೊಳ್ಳಲಾಗಿದೆ. ಒಪ್ಪಂದದಡಿ ಸ್ಥಳೀಯ ಐಟಿಐ ವಿದ್ಯಾರ್ಥಿಗಳಿಗೆ ನೌಕಾ ಡಾಕ್‌ಯಾರ್ಡ್‌ನ ಅತ್ಯಾಧುನಿಕ ನಿರ್ವಹಣೆ ಮತ್ತು ಸಹಾಯಕ ವ್ಯವಸ್ಥೆಗಳು, ಆಧುನಿಕ ತಂತ್ರಜ್ಞಾನಗಳು ಹಾಗೂ ಕೈಗಾರಿಕಾ ಕಾರ್ಯವಿಧಾನಗಳ ಕುರಿತು ನೇರ ಪರಿಚಯ ದೊರೆಯಲಿದೆ. ಅಲ್ಲದೆ, ಉದ್ಯೋಗಾಧಾರಿತ ಪ್ರಾಯೋಗಿಕ ತರಬೇತಿ ಮತ್ತು ಕಾರ್ಯಸ್ಥಳದಲ್ಲಿಯೇ ಕಲಿಕೆಯ ಅವಕಾಶಗಳನ್ನು ಒದಗಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ರಿಯರ್ ಅಡ್ಮಿರಲ್ ರವ್ನೀಶ್ ಸೇಠ್, ಕೌಶಲ್ಯಯುತ ಮಾನವ ಸಂಪನ್ಮೂಲ ಬೆಳೆಸುವ ಅಗತ್ಯವನ್ನು ಒತ್ತಿ ಹೇಳಿದರು. ಎಂಒಯು ಮೂಲಕ ದೊರೆಯುವ ಉನ್ನತ ಮಟ್ಟದ ತರಬೇತಿ ಮತ್ತು ಕಲಿಕಾ ಅವಕಾಶಗಳನ್ನು ಐಟಿಐಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.ತರಗತಿಯಲ್ಲಿ ಪಡೆಯುವ ಜ್ಞಾನಕ್ಕೂ ಕೈಗಾರಿಕಾ ಕ್ಷೇತ್ರದಲ್ಲಿ ದೊರೆಯುವ ಪ್ರಾಯೋಗಿಕ ಅನುಭವಕ್ಕೂ ಇರುವ ಅಂತರವನ್ನು ಇಂತಹ ಸಹಯೋಗಗಳು ಕಡಿಮೆ ಮಾಡಲಿವೆ. ಕಾರವಾರದ ಸ್ಥಳೀಯ ಯುವಕರಿಗೆ ನೌಕಾ ಡಾಕ್‌ಯಾರ್ಡ್‌ನಂತಹ ಅತ್ಯಾಧುನಿಕ ಕಾರ್ಯಸ್ಥಳದಲ್ಲಿ ಕಲಿಕೆಯ ಅವಕಾಶ ದೊರೆಯುವುದು ಕೌಶಲ್ಯಾಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಈ ಸಹಯೋಗವು ಯುವಕರ ಕೌಶಲ್ಯಾಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಪ್ರದೇಶದ ತಾಂತ್ರಿಕ ಮಾನವ ಸಂಪನ್ಮೂಲದ ಗುಣಮಟ್ಟ ಸುಧಾರಣೆಗೆ ನೆರವಾಗಲಿದೆ. ಸ್ಕಿಲ್ ಇಂಡಿಯಾ ಅಭಿಯಾನ ಹಾಗೂ ನಾಗರಿಕ-ಸೇನಾ ಸಹಕಾರದ ಉದ್ದೇಶಗಳಿಗೆ ಇದು ಮತ್ತಷ್ಟು ಬಲ ನೀಡಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.