ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನ ಹಾಗೂ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘಟನೆಗಳು ಬುಧವಾರ ಕರೆ ನೀಡಿದ್ದ ನವಲಗುಂದ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ನವಲಗುಂದ:
ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನ ಹಾಗೂ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘಟನೆಗಳು ಬುಧವಾರ ಕರೆ ನೀಡಿದ್ದ ನವಲಗುಂದ ಬಂದ್ ಸಂಪೂರ್ಣ ಯಶಸ್ವಿಯಾಯಿತು.ಪಟ್ಟಣದ ಬಹುತೇಕ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದರಿಂದ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿತ್ತು. ವಿವಿಧ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಯುವಕರು ಬಂದ್‌ಗೆ ಬೆಂಬಲಿಸಿದರು.
ಪಂಚಗ್ರಹ ಹಿರೇಮಠದ ಇಮ್ಮಡಿ ಸಿದ್ದೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ರೈತರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಹಿರೇಮಠದಿಂದ ರೈತ ಭವನದ ವರೆಗೆ ಮೆರವಣಿಗೆ ನಡೆಸಿ, ಹುತಾತ್ಮ ರೈತ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದರು. ಹುಬ್ಬಳ್ಳಿ, ಅಣ್ಣಿಗೇರಿ ಹಾಗೂ ಗ್ರಾಮೀಣ ಭಾಗದ ಯುವ ರೈತರು ಬೈಕ್ ರ‍್ಯಾಲಿ ನಡೆಸಿದರು.ರೈತ ಭವನದಲ್ಲಿ ನಡೆದ ಸಮಾವೇಶದಲ್ಲಿ ನರಗುಂದ ವಿರಕ್ತಮಠದ ಗುರುಶಿದ್ಧ ಶಿವಯೋಗಿ ಶಿವಾಚಾರ್ಯರು ಮಾತನಾಡಿ, ರೈತರು ಸಂಕಷ್ಟದಲ್ಲಿದ್ದಾಗ ನೆರವಿಗೆ ಧಾವಿಸಿ ಪರಿಹಾರ ಒದಗಿಸುವುದು ಸರ್ಕಾರದ ಕರ್ತವ್ಯ. ಆದರೆ, ರೈತರ ಸಮಸ್ಯೆಗಳನ್ನು ಕಡೆಗಣಿಸಿ ರಾಜಕಾರಣ ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ರೈತ ಸಂಘಟನೆಗಳು ಭಿನ್ನಾಭಿಪ್ರಾಯ ಬದಿಗಿಟ್ಟು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ರೈತ ಒಕ್ಕೂಟದ ಅಧ್ಯಕ್ಷ ಲೋಕನಾಥ ಹೆಬಸೂರ ಹಾಗೂ ಮಾಜಿ ಸಚಿವ ಕೆ.ಎನ್. ಗಡ್ಡಿ ಮಾತನಾಡಿ, ಮಹದಾಯಿ-ಕಳಸಾ-ಬಂಡೂರಿ ಯೋಜನೆಗಾಗಿ 11 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರಗಳು ಯೋಜನೆಯನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದರು.ಬರದಿಂದ ತತ್ತರಿಸಿರುವ ರೈತರಿಗೆ ಮಧ್ಯಂತರ ಪರಿಹಾರವಾಗಿ ₹50 ಸಾವಿರ ನೀಡಬೇಕು, ಬರಗಾಲ ಕಾಮಗಾರಿ ಆರಂಭಿಸಿ ಕೃಷಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಬೇಕು ಹಾಗೂ ಎಲ್ಲ ಬ್ಯಾಂಕ್‌ಗಳಲ್ಲಿನ ರೈತರ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ರಾಜ್ಯ ರೈತ ಸೇನಾ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, ಮುಖ್ಯಮಂತ್ರಿ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗ ಪ್ರಧಾನಿಯನ್ನು ಭೇಟಿ ಮಾಡಿ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಇರುವ ತೊಡಕುಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿದರು.ನರಗುಂದ ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತ ಮಠದ ಶಾಂತಲಿಂಗ ಶ್ರೀ, ರಘುನಾಥ ನಡುವಿನಮನಿ, ಶ್ರೀಶೈಲ, ಮಹಾದೇವಿ ಹೂಯಿಲಗೋಳ, ಪ್ರೇಮಾ ನಾಯ್ಕರ, ಮೈಲಾರಪ್ಪ ವೈದ್ಯ, ವಿಕ್ರಂ ಕುರಿ, ಅಣ್ಣಪ್ಪ ಬಾಗಿ, ರಿಯಾಜ ನಾಶಿಪುಡಿ, ಶಿರಾಜ್ ಧಾರವಾಡ, ಉಮೇಶ ನವಲಗುಂದ, ಡಿ.ಕೆ. ಹಳ್ಳದ, ಶಿವಾನಂದ ಕೊಳಲಿನ, ಮಲ್ಲಿಕಾರ್ಜುನಗೌಡ ಪಾಟೀಲ ಕುಲಕರ್ಣಿ, ನೇತಾಜಿ ಕಲಾಲ ಸೇರಿದಂತೆ ಸಾವಿರಾರು ರೈತರು ಪಾಲ್ಗೊಂಡಿದ್ದರು. ಜತೆಗೆ ತಾಲೂಕಿನ ಕನ್ನಡಪರ ಸಂಘಟನೆ ಸೇರಿದಂತೆ ಹತ್ತಾರು ಸಂಘಟನೆಗಳು ನವಲಗುಂದ ಬಂದ್‍ಗೆ ಬೆಂಬಲ ವ್ಯಕ್ತ ಪಡಿಸಿದ್ದರು.