ನವಲಿ ಆರೋಗ್ಯ ಕೇಂದ್ರಕ್ಕೆ ವೈದ್ಯರ ಕೊರತೆ

| Published : Apr 27 2025, 01:46 AM IST

ಸಾರಾಂಶ

ನವಲಿ ಹೋಬಳಿಯಲ್ಲಿ ಇರುವ ಏಕೈಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಒಂದೇ ಒಂದು ಆ್ಯಂಬುಲೆನ್ಸ್‌ ನೀಡಿಲ್ಲ. ಅಪಘಾತ, ಹೆರಿಗೆ ಹಾಗೂ ತುರ್ತು ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಿಂದ ಕರೆದುಕೊಂಡು ಬರಲು ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಅಥವಾ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ಆ್ಯಂಬುಲೆನ್ಸ್‌ ಇಲ್ಲದೆ ರೋಗಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.

ನವಲಿ:

ನವಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದೆಡೆ ತಜ್ಞ ವೈದ್ಯರ ಕೊರತೆ, ಮತ್ತೊಂದೆಡೆ ವೈದ್ಯಕೀಯ ಸೌಲಭ್ಯಗಳಲ್ಲಿದೆ ರೋಗಿಗಳು ಪರದಾಡುತ್ತಿದ್ದಾರೆ. ನಿತ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 150ರಿಂದ 200 ಜನ ರೋಗಿಗಳು ಬರುತ್ತಿದ್ದರೂ ಇವರಿಗೆ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ. ಜತೆಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ರೋಗಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.

ನವಲಿ ಹೋಬಳಿಯಲ್ಲಿ ಇರುವ ಏಕೈಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಒಂದೇ ಒಂದು ಆ್ಯಂಬುಲೆನ್ಸ್‌ ನೀಡಿಲ್ಲ. ಅಪಘಾತ, ಹೆರಿಗೆ ಹಾಗೂ ತುರ್ತು ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಿಂದ ಕರೆದುಕೊಂಡು ಬರಲು ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಅಥವಾ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ಆ್ಯಂಬುಲೆನ್ಸ್‌ ಇಲ್ಲದೆ ರೋಗಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲ ಸಂದರ್ಭದಲ್ಲಿ ದುಬಾರಿ ಹಣ ನೀಡಿ ಖಾಸಗಿ ವಾಹನ ತೆಗೆದುಕೊಂಡು ರೋಗಿಗಳು ಚಿಕಿತ್ಸೆಗೆ ಆಸ್ಪತ್ರೆಗೆ ಬರುತ್ತಿದ್ದಾರೆ.

ವೈದ್ಯರ ಕೊರತೆ:

ಆರು ಹಾಸಿಗೆವುಳ್ಳ ಸಾಮರ್ಥ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಂಬಿಬಿಎಸ್‌ ಓದಿದ ತಜ್ಞ ವೈದ್ಯರಿಲ್ಲ. ಒಳಗುತ್ತಿಗೆ ಆಧಾರದಲ್ಲಿ ಒಬ್ಬರು ಆಯುಷ್‌ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗ್ಗೆ ಹಾಗೂ ರಾತ್ರಿ, ತುರ್ತು ಸಂದರ್ಭದಲ್ಲಿ ವೈದ್ಯರು ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಸೌಲಭ್ಯ ಸಿಗದೆ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖಮಾಡಿದ್ದಾರೆ. ತಾಲೂಕು ಹಾಗೂ ಜಿಲ್ಲಾಸ್ಪತ್ರೆಗೆ ತೆರಳಲು ಸಮಯವಾಗುತ್ತದೆ ಎಂದು ಸ್ಥಳೀಯವಾಗಿ ತೋರಿಸಿಕೊಳ್ಳುತ್ತಿದ್ದಾರೆ.

ಆಸ್ಪತ್ರೆ ಮೇಲ್ದರ್ಜೆಗೇರಿಸಿ:

ನವಲಿ ಹೋಬಳಿಯಲ್ಲಿ ಅಂದಾಜು 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು ಈ ಪ್ರಾಥಮಿಕ ಆರೋಗ್ಯ ಕೇಂದ್ರವೇ ಆಧಾರವಾಗಿದೆ. ₹ 2.5 ಕೋಟಿ ವೆಚ್ಚದಲ್ಲಿ ಆರು ಹಾಸಿಗೆವುಳ್ಳ ಆಸ್ಪತ್ರೆ ನಿರ್ಮಿಸಿದ್ದರೂ ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಕೊರಗು ಜನರದ್ದು. ದಿನದ 24 ಗಂಟೆಯೂ ಜನರಿಗೆ ಚಿಕಿತ್ಸೆ ನೀಡಲು ವೈದ್ಯರನ್ನು ನಿಯೋಜಿಸಬೇಕು. ಆಸ್ಪತ್ರೆ ಮೇಲ್ದರ್ಜೇಗೇರಿಸಿ ಆಧುನಿಕ ಉಪಕರಣಗಳನ್ನು ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.