ಸಾರಾಂಶ
ಎಂ. ಪ್ರಹ್ಲಾದ್ ಕನಕಗಿರಿ
ತಾಲೂಕಿನ ನವಲಿ ಗ್ರಾಮದಲ್ಲಿ ಶಾಲಾ, ಕಾಲೇಜು ಮುಂಭಾಗದಲ್ಲಿ ಕೋಳಿ ತ್ಯಾಜ್ಯ ಬಿಸಾಡುತ್ತಿದ್ದರಿಂದ ಗ್ರಾಮಸ್ಥರು ಗ್ರಾಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗ್ರಾಮದ ಚಿಕನ್, ಮಟನ್ ಹಾಗೂ ಮಾಂಸದಂಗಡಿಗಳಲ್ಲಿ ಸಂಗ್ರಹಗೊಂಡಿದ್ದ ಕೋಳಿ ತ್ಯಾಜ್ಯ ಕಾರಟಗಿ ಮುಖ್ಯರಸ್ತೆಯಲ್ಲಿ ಬಿಸಾಡುತ್ತಿದ್ದಾರೆ. ಇದೇ ರಸ್ತೆಗೆ ಹೊಂದಿಕೊಂಡು ಶಾಲಾ, ಕಾಲೇಜುಗಳಿದ್ದು, ಯಾರೂ ಇಲ್ಲದ ಸಮಯದಲ್ಲಿ ತ್ಯಾಜ್ಯ ಹಾಕುತ್ತಿದ್ದರಿಂದ ದುರ್ವಾಸನೆ ಬೀರುತ್ತಿದೆ. ಇದರಿಂದ ವಿದ್ಯಾರ್ಥಿಗಳು, ಪ್ರಯಾಣಿಕರು ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗೆ ದಿನ ನಿತ್ಯವೂ ಮಾಂಸದ ಅಂಗಡಿಗಳಲ್ಲಿ ಸಂಗ್ರಹಗೊಳ್ಳುವ ಕೋಳಿ ತ್ಯಾಜ್ಯ ಎಲ್ಲೆಂದರಲ್ಲಿ ಬಿಸಾಡುತ್ತಿದ್ದರಿಂದ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇತ್ತ ಪ್ರಯಾಣಿಕರಂತೂ ಕೋಳಿ ಅಂಗಡಿ ಮಾಲೀಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ.ಕೋಳಿ ತ್ಯಾಜ್ಯದ ದುರ್ವಾಸನೆಗೆ ಬೇಸತ್ತಿರುವ ಗ್ರಾಮಸ್ಥರ ದುಸ್ಥಿತಿಯ ಬಗ್ಗೆ ಪಂಚಾಯತಿಯವರು ಕಂಡು ಕಾಣದಂತೆ ವರ್ತಿಸುತ್ತಿದ್ದು, ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ನಿಯಂತ್ರಿಸಲು ಸಾಧ್ಯವಾಗಿಲ್ಲ. ದಿನದಿಂದ ದಿನಕ್ಕೆ ದುರ್ವಾಸನೆ ಹೆಚ್ಚಾಗುತ್ತಿದ್ದು, ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಶುರುವಾಗಿದೆ.
ಕೋಳಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳುವುದು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪಿಡಿಒ, ಆರೋಗ್ಯ ಇಲಾಖೆ ಹಿಂದೇಟು ಹಾಕುತ್ತಿದ್ದಾರೆ. ಈ ವಿಷಯ ನಮಗೆ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಗ್ರಾಮದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸುರೇಶಗೌಡ ದೂರಿದ್ದಾರೆ.ಕೋಳಿ ತ್ಯಾಜ್ಯ ಬಿಸಾಡಿದ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಮೇಲಾಧಿಕಾರಿಗಳೊಂದಿಗೆ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ವಾರದೊಳಗೆ ತ್ಯಾಜ್ಯ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ ವೀರಣ್ಣ ನಕ್ರಳ್ಳಿ ತಿಳಿಸಿದ್ದಾರೆ.